ಮಡಿಕೇರಿ, ಜು. 16: ಮಡಿಕೇರಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರಾಗಿದ್ದು, ಇತರೆಡೆಗೆ ವರ್ಗಾವಣೆಗೊಂಡ ಶಿಕ್ಷಕರಿಗೆ ಇತ್ತೀಚೆಗೆ ಶಾಲಾ ಆವರಣದಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಈ ಶಾಲೆಯಲ್ಲಿ ಉಪ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ಮೂರ್ನಾಡುವಿಗೆ ಕಡ್ಡಾಯ ಆಧಾರದಲ್ಲಿ ವರ್ಗಾವಣೆಯಾಗಿರುವ ಗುರುರಾಜ್, ಹೆಚ್ಚುವರಿ ಆಧಾರದಲ್ಲಿ ಸೋಮವಾರಪೇಟೆ ಪ್ರೌಢಶಾಲೆಗೆ ನಿಯುಕ್ತಿಗೊಂಡ ಕನ್ನಡ ಶಿಕ್ಷಕಿ ಕೆ.ವಿ. ಶಶಿಕಲಾ, ಕಡಗದಾಳು ಪ್ರೌಢಶಾಲೆಗೆ ವರ್ಗಾವಣೆಗೊಂಡ ಆಂಗ್ಲ ಭಾಷಾ ಶಿಕ್ಷಕಿ ಎಸ್.ಡಿ. ಅನಿತ, ಮೂರ್ನಾಡು ಶಾಲೆಗೆ ವರ್ಗಾಯಿತರಾದ ಹಿಂದಿ ಶಿಕ್ಷಕಿ ಎಂ.ಎ. ಗೀತಾ ಅವರುಗಳು ಬೀಳ್ಕೊಡುಗೆ ಸ್ವೀಕರಿಸಿದರು. ಪ್ರಭಾರ ಉಪ ಪ್ರಾಂಶುಪಾಲೆ ಬಿ.ಎಂ. ದೇವಮ್ಮ ಸೇರಿದಂತೆ ಇತರ ಶಿಕ್ಷಕ - ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.