ಗೋಣಿಕೊಪ್ಪಲು, ಜು. 16: ಗೋಣಿಕೊಪ್ಪಲು ಬಸ್ ನಿಲ್ದಾಣದ ಸಮೀಪ ಕಳೆದೆರೆಡು ತಿಂಗಳಿನಿಂದ ಸುರಿದಿದ್ದ ತ್ಯಾಜ್ಯ ವಸ್ತುಗಳು ಕಸದ ಗುಡ್ಡಗಳಾಗಿ ಮಾರ್ಪಟ್ಟಿದ್ದವು. ಈ ಬಗ್ಗೆ ‘ಶಕ್ತಿ’ ಸಮಗ್ರ ವರದಿ ಪ್ರಕಟಿಸಿ ಬೆಳಕು ಚೆಲ್ಲಿತ್ತು. ಸ್ಥಳೀಯ ಆಟೋ ಚಾಲಕರು, ಮಾಲೀಕರು ಈ ಬಗ್ಗೆ ಪ್ರತಿಭಟಿಸುವ ಸೂಚನೆ ನೀಡಿದ್ದರು. ನಂತರ ಪಂಚಾಯಿತಿ ಸಿಬ್ಬಂದಿಗಳು ಈ ಕಸದ ರಾಶಿಯನ್ನು ಬೇರೆಡೆಗೆ ಸ್ಥಳಾಂತರಿಸದೇ ಜನನಿಬಿಡ ಪ್ರದೇಶದ ಮಾರ್ಕೆಟ್ ಬಳಿಯಲ್ಲಿ ರಾತೋರಾತ್ರಿ ಸುರಿದು ಕಸ ಸಮಸ್ಯೆಯನ್ನು ಮತ್ತಷ್ಟು ಉಲ್ಬಣ ಮಾಡಿದ್ದರು.

ಇದರಿಂದ ಸಾರ್ವಜನಿಕರು, ಜೀಪು ನಿಲ್ದಾಣದ ಚಾಲಕರು, ಮಾಲೀಕರು ತಮ್ಮ ಆಕ್ರೋಷವನ್ನು ಹೊರ ಹಾಕಿದ್ದರು.. ಸ್ಥಳಕ್ಕೆ ಸ್ಥಳೀಯ ಜಿ.ಪಂ. ಸದಸ್ಯ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಿ.ಕೆ. ಬೋಪಣ್ಣ ಆಗಮಿಸಿ ಕಸದ ರಾಶಿಯಿಂದ ಜನತೆ ಅನುಭವಿಸುತ್ತಿ ರುವ ದಿನನಿತ್ಯದ ಸಮಸ್ಯೆಯನ್ನು ಆಲಿಸಿದ್ದರು. ಈ ಬಗ್ಗೆಯೂ ‘ಶಕ್ತಿ’ ವರದಿ ಪ್ರಕಟಿಸಿತ್ತು. ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತ ಪಂಚಾಯಿತಿ ಎರಡು ಸ್ಥಳಗಳಲ್ಲಿ ರಾಶಿ, ರಾಶಿರಾಶಿ ಯಾಗಿ ಗುಡ್ಡದಂತಾಗಿದ್ದ ತ್ಯಾಜ್ಯ ವಸ್ತುಗಳನ್ನು ತೆಗೆಯುವ ಮೂಲಕ ಕಳೆದೆರಡು ತಿಂಗಳಿನಿಂದ ಸಾರ್ವಜನಿಕರು ಅನುಭವಿಸುತ್ತಿದ್ದ ಸಮಸ್ಯೆಗೆ ಸದ್ಯಕ್ಕೆ ತಪ್ಪಿದಂತಾಗಿದೆ. ಮುಖ್ಯ ರಸ್ತೆಯ ಎರಡು ಬದಿಯಲ್ಲಿಯೂ ಕಸದ ರಾಶಿ ಗುಡ್ಡೆಯಾಗಿ ಕಂಡು ಬಂದಿದ್ದು ಇದನ್ನು ತೆರವುಗೊಳಿಸುವ ಕಾರ್ಯಕ್ಕೆ ಪಂಚಾಯಿತಿ ಇನ್ನು ಮನಸ್ಸು ಮಾಡಿದಂತಿಲ್ಲ.

ಕೊಡಗು ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಾಹಣಾಧಿಕಾರಿಗಳು ಸದ್ಯದಲ್ಲಿಯೇ ಪಂಚಾಯಿತಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಎಚ್ಚೆತ್ತ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಗಳು ಗುಡ್ಡದಂತಾಗಿದ್ದ ಕಸವನ್ನು ಸ್ಥಳಾಂತರಗೊಳಿಸಿ ಉಳಿದ ತ್ಯಾಜ್ಯಕ್ಕೆ ಮಣ್ಣು ಹಾಕಿ ಕಸ ಕಾಣದಂತೆ ಮಾಡಿದ್ದಾರೆ.! ಪಂಚಾಯಿತಿ ಸದಸ್ಯರ ನಡುವಿನ ಹೊಂದಾಣಿಕೆಯ ಕೊರತೆಯಿಂದ ನಗರ ವ್ಯಾಪ್ತಿಯ ಕಸ ತ್ಯಾಜ್ಯ ವಿಲೇವಾರಿಯಲ್ಲಿ ಆಗಿಂದ್ದಾಗ್ಗೆ ಸಮಸ್ಯೆಗಳು ಎದುರಾಗುತ್ತಿತ್ತು. ಈ ಕಸದ ರಾಶಿಯಿಂದÀ ಹುಳುಗಳು, ಸೊಳ್ಳೆಗಳು ಹೆಚ್ಚಾಗಿ ಕಂಡುಬಂದಿದ್ದು ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿತ್ತು. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿತ್ತು.

ಸದ್ಯದ ಮಟ್ಟಿಗೆ ಕಸದ ರಾಶಿ ತೆರವುಗೊಂಡಿದ್ದು ಸಾರ್ವಜನಿಕರಿಗೆ ಕೊಂಚ ನೆಮ್ಮದಿ ತಂದಂತಿದೆ. ಪಂಚಾಯಿತಿಯು ಕಸವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದೆಂಬ ನಿರೀಕ್ಷೆಯಲ್ಲಿ ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.

-ಹೆಚ್.ಕೆ. ಜಗದೀಶ್