ಮಡಿಕೇರಿ, ಜು. 16: ಕೊಡಗು ಜಿಲ್ಲೆಯ ಸಹಕಾರ ಸಂಘಗಳ ರೂ. 1 ಲಕ್ಷ ಸಾಲಮನ್ನಾ ಯೋಜನೆಯಲ್ಲಿ ಜೂನ್ 2019ರ ವರೆಗೆ ಬರುವ 32,903 ರೈತರಿಗೆ ರೂ. 263.82 ಕೋಟಿ ಬೆಳೆ ಸಾಲಮನ್ನಾ ಆಗಲಿರುವ ದಾಗಿ ಅಂದಾಜಿಸಲಾಗಿದೆ. ಈ ಪೈಕಿ ಸರಕಾರಿ ಆದೇಶದ ಎಲ್ಲ ಷರತ್ತುಗಳನ್ನು ಪೂರೈಸಿರುವ ಕೊಡಗಿನ 14,678 ರೈತರಿಗೆ ರೂ. 101.10 ಕೋಟಿ ಸಾಲಮನ್ನಾ ಮಾಡಲು ಅರ್ಹ ರೈತರನ್ನು ಗುರುತಿಸಲಾಗಿದೆ ಎಂದು ಸಹಕಾರ ಖಾತೆ ಸಚಿವ ಬಂಡೆಪ್ಪ ಖಾಶೆಂಪುರ ಮಾಹಿತಿ ನೀಡಿದರು.
ಸದನದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ರೈತರ ಸಾಲಮನ್ನಾ ಕುರಿತು ಪ್ರಶ್ನಿಸಿದ ವೇಳೆ ಸಚಿವರು ಮಾಹಿತಿ ನೀಡಿದರು. ಮಡಿಕೇರಿ ತಾಲೂಕಿನಲ್ಲಿ 4,385 ರೈತರ ರೂ. 3417.87 ಲಕ್ಷ, ವೀರಾಜಪೇಟೆ ತಾಲೂಕಿನಲ್ಲಿ 7,378 ರೈತರ 4,607.59 ಲಕ್ಷ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 2,915 ರೈತರ 2084.54 ಲಕ್ಷ ಸಾಲಮನ್ನಾಕ್ಕೆ ಗುರುತಿಸಲಾಗಿದೆ. ವಾಣಿಜ್ಯ ಬ್ಯಾಂಕ್‍ಗಳ ಬೆಳೆ ಸಾಲ ಯೋಜನೆಯಡಿ ಕೊಡಗಿನಲ್ಲಿ ಜುಲೈ 2019ರ ವರೆಗೆ 3,656 ರೈತರ ಸಾಲಮನ್ನಾ ಮಾಡಲಾಗಿದ್ದು, ರೂ. 22.39 ಕೋಟಿ ಮೊಬಲಗನ್ನು ಬಿಡುಗಡೆ ಮಾಡಲಾಗಿದೆ.
ಸಾಲಮನ್ನಾ ಮಾಡಲು ಗುರುತಿಸಿರುವ ಎಲ್ಲಾ 14,732 ಅರ್ಹ ರೈತರಿಗೂ ಈಗಾಗಲೇ ಡಿಸಿಸಿ ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ನಿರಕ್ಷೇಪಣಾ ಪತ್ರ ನೀಡಲಾಗಿದೆ.
ಪುನಃ ಹೊಸದಾಗಿ 27,218 ರೈತರಿಗೆ ರೂ. 399.43 ಕೋಟಿಗಳ ಬೆಳೆ ಸಾಲ ವಿತರಿಸಲಾಗಿದೆ. ವಾಣಿಜ್ಯ ಬ್ಯಾಂಕ್‍ಗಳ ಬೆಳೆ ಸಾಲಮನ್ನಾ ಯೋಜನೆಯಡಿ ಒಟ್ಟು 7,49,091 ರೈತರಿಗೆ ಸಾಲಮನ್ನಾ ಮಾಡಲಾಗಿದ್ದು, ಸಾಲ ತೀರುವಳಿ ಆದ ನಂತರ ಋಣ ಮುಕ್ತ ಪ್ರಮಾಣ ಪತ್ರವನ್ನು ಅಐWS ಜಾಲತಾಣದಲ್ಲಿ ಪಡೆಯಬಹುದಾಗಿದೆ.
ಕೊಡಗು ಜಿಲ್ಲೆಯ ಪಿಎಲ್‍ಡಿ ಬ್ಯಾಂಕ್‍ಗಳಲ್ಲಿ ರೈತರಿಗೆ 2019-20ನೇ ಸಾಲಿನಲ್ಲಿ ಅಲ್ಪಾವಧಿ ಸಾಲವನ್ನು ನೀಡಲಾಗಿಲ್ಲ. ಕೊಡಗು ಜಿಲ್ಲೆಯಲ್ಲಿ ಒಟ್ಟು 3 ಪಿಎಲ್‍ಡಿ ಬ್ಯಾಂಕ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಈ ಬ್ಯಾಂಕ್‍ಗಳ ಮುಖ್ಯ ಉದ್ದೇಶ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲವನ್ನು ನೀಡುವದಾಗಿದೆ. ಅಲ್ಪಾವಧಿ ಬೆಳೆ ಸಾಲವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ವಿತರಿಸುತ್ತಿದ್ದು, ಇದುವರೆಗೆ 27,218 ರೈತರಿಗೆ ರೂ. 399.43 ಕೋಟಿ ಬೆಳೆ ಸಾಲ ವಿತರಿಸಲಾಗಿದ್ದು, ಉಳಿದ ಎಲ್ಲಾ ಅರ್ಹ ರೈತರಿಗೆ ಜುಲೈ ತಿಂಗಳಲ್ಲಿ ಸಾಲ ವಿತರಿಸಲು ಕ್ರಮವಹಿಸಲಾಗಿದೆ ಎಂದು ಸಚಿವರು ಮಾಹಿತಿಯಿತ್ತರು.