ಮಡಿಕೇರಿ, ಜು. 16: ಕರ್ನಾಟಕದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವ ತನ್ನ ಬದ್ಧತೆಯ ಭಾಗವಾಗಿ, ಮೈಸೂರು ವಾರಿಯರ್ಸ್ ಎನ್ಆರ್ ಸಮೂಹ, ಕ್ರಿಕೆಟ್ ಪ್ರತಿಭಾನ್ವೇಷಣೆಯ ಆರನೇ ಆವೃತ್ತಿಯನ್ನು ಆಯೋಜಿಸಿದೆ.
ತಾ. 17 ರಂದು ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಮತ್ತು ತಾ. 20 ರಂದು ಮೈಸೂರಿನ ಎಸ್ಡಿಎನ್ಆರ್ ಮೈದಾನದಲ್ಲಿ ಪ್ರತಿಭಾನ್ವೇಷಣೆ ನಡೆಯಲಿದ್ದು, ಕರ್ನಾಟಕದ ಯಾವದೇ ಭಾಗದ ಯುವ, ಪ್ರತಿಭಾವಂತ ಕ್ರಿಕೆಟ್ ಆಟಗಾರರು ಭಾಗವಹಿಸಬಹುದಾಗಿದೆ.
ಇಲ್ಲಿ ಆಯ್ಕೆಯಾಗುವ ಆಟಗಾರರು 2019ರ ಕೆಪಿಎಲ್ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಪ್ರತಿಭಾ ಅನ್ವೇಷಣೆ ಮುಖ್ಯವಾಗಿ ಕರ್ನಾಟಕದ ಕೆಎಸ್ಸಿಎ ನೋಂದಾಯಿತ ಕ್ಲಬ್ಗಳ ಕೆಎಸ್ಸಿಎ ನೋಂದಾಯಿತ ಸದಸ್ಯರಿಗಾಗಿ ಆಯೋಜಿಸಲಾಗುತ್ತದೆ. ಏಕೆಂದರೆ ಕರ್ನಾಟಕದಲ್ಲಿ ಕ್ರಿಕೆಟ್ ಸೇರಿದಂತೆ ಪ್ರಮುಖ ಕ್ರೀಡೆಗಳಲ್ಲಿ ವಿಶೇಷ ಕೌಶಲ್ಯ ಹೊಂದಿರುವ ಅನೇಕ ಪ್ರತಿಭಾವಂತ ಆಟಗಾರರು ಇದ್ದು, ಯುವ ಪ್ರತಿಭಾವಂತ ಕ್ರಿಕೆಟ್ ಪ್ರತಿಭೆಗಳನ್ನು ಬೆಳೆಸುವ ಜೊತೆಗೆ ಅವರಿಗೆ ಸೂಕ್ತ ತರಬೇತಿ ಹಾಗೂ ಪ್ರೋತ್ಸಾಹ ನೀಡಿ ಪೋಷಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.
ಪ್ರಸ್ತುತ ಆವೃತ್ತಿಯಲ್ಲಿ ಆಯ್ಕೆಯಾಗುವ ಆಟಗಾರರು ಸೈಕಲ್ ಪ್ಯೂರ್ ಅಗರಬತ್ತೀಸ್ ಪ್ರಾಯೋಜಕತ್ವದಲ್ಲಿ ನಡೆಯುವ ಕೆಪಿಎಲ್ -2019ರ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆಯಲಿದ್ದಾರೆ.
ಬೆಂಗಳೂರಿನ ದೊಡ್ಡಬಳ್ಳಾಪುರ ರಸ್ತೆಯ ಸಿಂಗನಾಯಕನ ಹಳ್ಳಿಯಲ್ಲಿರುವ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ತಾ. 17 ರಂದು ಬೆಳಿಗ್ಗೆ 8 ಗಂಟೆಯಿಂದ ಹಾಗೂ ಮೈಸೂರು ಭಾಗದ ಆಟಗಾರರಿಗೆ ಮೈಸೂರು ವಿವಿಯ ಎಸ್ಡಿಎನ್ಆರ್ ಮೈದಾನದಲ್ಲಿ ತಾ. 20ರಂದು ಬೆಳಿಗ್ಗೆ 8 ಗಂಟೆಯಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಮಾಹಿತಿಗಾಗಿ 9986024717 (ಮಧುಸೂದನ) ಹಾಗೂ 9900545191 (ಸೋಮಶೇಖರ) ಅವರನ್ನು ಸಂಪರ್ಕಿಸಬಹುದಾಗಿದೆ.