ಗೋಣಿಕೊಪ್ಪಲು, ಜು. 16: ಕಾಫಿ ಮಂಡಳಿಯಿಂದ ಸಣ್ಣ ಬೆಳೆಗಾರರು ಹಾಗೂ ದೊಡ್ಡ ಬೆಳೆಗಾರರಿಗೆ ಹೆಚ್ಚಿನ ಲಾಭವಾಗುತ್ತಿಲ್ಲ ಎಂಬ ಆರೋಪವಿದೆ. ಕಾಫಿ ವಿಸ್ತರಣಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕಾದ ಮಂಡಳಿಯಿಂದ ನಿರೀಕ್ಷಿತ ಪ್ರಮಾಣದ ಕೆಲಸ ಕಾರ್ಯವಾಗುತ್ತಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರುವಿನ ನೂರಾರು ಎಕರೆ ಕಾಫಿ ತೋಟ, ಕೊಡಗು ಜಿಲ್ಲೆಯ ಚೆಟ್ಟಳ್ಳಿ, ಗೋಣಿಕೊಪ್ಪಲು ಸಮೀಪ ಅರುವತ್ತೊಕ್ಕಲು ಒಳಗೊಂಡಂತೆ ಭಾರತದ ವಿವಿಧೆಡೆ ಕಾಫಿ ಮಂಡಳಿ ಸುಪರ್ದಿಯಲ್ಲಿ ನೂರಾರು ಎಕರೆ ಕಾಫಿ ತೋಟವಿದ್ದು (1000 ಎಕರೆಗೂ ಅಧಿಕ) ವರ್ಷಂಪ್ರತಿ ಅಧಿಕಾರಿಗಳು ನಷ್ಟವನ್ನೇ ತೋರಿಸುತ್ತಾ ಬಂದಿದ್ದಾರೆ. ಈ ಬಗ್ಗೆ ಕಾಫಿ ಮಂಡಳಿ ಸಭೆಯಲ್ಲಿ ಯಾವದೇ ಪ್ರಸ್ತಾಪವಿರುವದಿಲ್ಲ. ಕಾಫಿ ಮಂಡಳಿಯ ಅಧ್ಯಕ್ಷರ ಕೊಠಡಿಯನ್ನು ಕಾಫಿ ಮಂಡಳಿ ಕಾರ್ಯದರ್ಶಿ ಆಕ್ರಮಿಸಿಕೊಂಡಿದ್ದಾರೆ. ಐಎಎಸ್ ಅಧಿಕಾರಿಗಳು ಈ ಹಿಂದೆ ಕಾಫಿ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದು, ವಾಹನ ಸೌಲಭ್ಯ ಒಳಗೊಂಡಂತೆ ಸರ್ವ ಸರ್ಕಾರಿ ವೆಚ್ಚಗಳನ್ನು ಮಂಡಳಿ ಭರಿಸುತ್ತಿತ್ತು. ಇದೀಗ ಕಳೆದ ಸಾಲಿನಿಂದ ಬೆಳೆಗಾರರೇ ಕಾಫಿ ಮಂಡಳಿ ಅಧ್ಯಕ್ಷರಾದ ನಂತರ (ಬೋಜೇಗೌಡ-ಚಿಕ್ಕಮಗಳೂರು) ಬೆಂಗಳೂರು ನಗರದ ಕೇಂದ್ರಭಾಗದಲ್ಲಿರುವ ಕಾಫಿ ಮಂಡಳಿ ಕಟ್ಟಡದ ಅಧ್ಯಕ್ಷರ ಸುಸಜ್ಜಿತ ಕೊಠಡಿ
(ಮೊದಲ ಪುಟದಿಂದ) ಒಳಗೊಂಡಂತೆ ಹೆಚ್ಚಿನ ಸರ್ಕಾರಿ ಸವಲತ್ತುಗಳನ್ನು ಕಸಿದುಕೊಳ್ಳಲಾಗಿದೆ. ಮುಂದಿನ ಮೂರು ವರ್ಷದ ಅವಧಿಯಲ್ಲಿ ಕಾಫಿ ಮಂಡಳಿ ಸಮರ್ಪಕವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ‘ಶಸ್ತ್ರ ಚಿಕಿತ್ಸೆ’ ಮಾಡಬೇಕಾಗಿದೆ ಎಂದು ದ್ವಿತೀಯ ಅವಧಿಗೆ ಕಾಫಿ ಬೋರ್ಡ್ ಸದಸ್ಯರಾಗಿ (ಸಣ್ಣ ಬೆಳೆಗಾರರ ಕ್ಷೇತ್ರ) ಆಯ್ಕೆಯಾಗಿರುವ ಶ್ರೀಮಂಗಲದ ಮಚ್ಚಾಮಾಡ ಡಾಲಿ ಚಂಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶ್ರೀಮಂಗಲದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಡಾಲಿ ಚಂಗಪ್ಪ ಅವರು, ಕಳೆದ ಸಾಲಿನಲ್ಲಿ ಕಾಫಿ ಮಂಡಳಿ ವಿವಾದ ನ್ಯಾಯಾಲಯ ಮೆಟ್ಟಿಲೇರಿದ್ದ ಹಿನ್ನೆಲೆ ಕೇವಲ ಒಂದೂವರೆ ವರ್ಷ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು, ಇದೀಗ ಅವಧಿಯನ್ನು ಮುಂದಿನ ಮೂರು ವರ್ಷಕ್ಕೆ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಾಫಿ ಮಂಡಳಿಯಲ್ಲಿ ಒಟ್ಟು 33 ಸದಸ್ಯಬಲ ಇರಬೇಕಿದ್ದರೂ, ಕಳೆದ ಹಲವು ವರ್ಷಗಳಿಂದ ಪೂರ್ಣ ಸದಸ್ಯರ ಆಯ್ಕೆ ನಡೆಯುತ್ತಿಲ್ಲ. ಕಳೆದ ಅವಧಿಯಲ್ಲಿ ಒಟ್ಟು 4 ಸಭೆಯನ್ನು ಕರೆಯಲಾಗಿದ್ದು, ಆಮಂತ್ರಣದಲ್ಲಿ ಸಂಸದರ ಹೆಸರಿದ್ದರೂ ಯಾವದೇ ಸಂಸದರೂ ಸಭೆಗೆ ಹಾಜರಾಗದೇ ಇರುವದರಿಂದ ಕೇಂದ್ರದಲ್ಲಿ ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಲು ಹಿನ್ನೆಡೆಯಾಗಿದೆ ಎಂದು ಆರೋಪಿಸಿದರು.
ಮಣ್ಣು ಪರೀಕ್ಷೆ ನಂತರ ಗೊಬ್ಬರ ಬಳಕೆ ಅಗತ್ಯ
ಕಾಫಿ ಕೃಷಿಕರು ಕಡ್ದಾಯವಾಗಿ ಮಣ್ಣು ಪರೀಕ್ಷೆ ನಂತರವೇ ಗೊಬ್ಬರ ಇತ್ಯಾದಿ ಪೆÇೀಷಕಾಂಶಗಳನ್ನು ನೀಡುವಂತಾಗಬೇಕು, ರಸಗೊಬ್ಬರ ಕೊರತೆ ಹಾಗೂ ಕೆಲವು ರಸಗೊಬ್ಬರ ದರ ಚೀಲಕ್ಕೆ ರೂ.1000ವನ್ನೂ ಕ್ರಮಿಸಿದ್ದು, ಬೆಳೆಗಾರರು ಅನಗತ್ಯ ರಸಗೊಬ್ಬರ ಬಳಕೆಯನ್ನು ನಿಯಂತ್ರಿಸಬೇಕು. ಗ್ರಾ.ಪಂ.ಮಟ್ಟದಲ್ಲಿ ಮಣ್ಣು ಪರೀಕ್ಷೆಯ ಮೊಬೈಲ್ ಯೂನಿಟ್ ಸ್ಥಾಪನೆಯಾಗಬೇಕು. ಕೊಡಗು ಒಳಗೊಂಡಂತೆ ಇತರೆಡೆ ಕಾಫಿ ವಿಸ್ತರಣಾ ಕೇಂದ್ರಗಳು ಮಣ್ಣುಪರೀಕ್ಷೆ ಒಳಗೊಂಡಂತೆ ಅಗತ್ಯ ಮಾಹಿತಿ ನೀಡುವಲ್ಲಿ ವಿಫಲವಾಗುತ್ತಿದೆ. ಸುಮಾರು 17 ಮಾದರಿ ಲಘುಪೆÇೀಷಕಾಂಶದ ನಿರ್ವಹಣೆ ಕೃಷಿಕರಿಗೆ ತಿಳಿದಿರಬೇಕು. ಕಾಫಿ ಗಿಡಗಳಿಗೆ ಅಸಮರ್ಪಕ ಗೊಬ್ಬರ ಬಳಕೆಯಿಂದಾಗಿ ಎಕರೆಗೆ ರೂ.50 ಸಾವಿರದಿಂದ ರೂ.1 ಲಕ್ಷದವರೆಗೂ ಕೃಷಿಕರು ನಷ್ಟ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲೆಡೆಯೂ ಮಣ್ಣು ಪರೀಕ್ಷೆ ಬಗ್ಗೆ ಜಾಗೃತಿ ಮೂಡಿಸಲು ತಾನು ವೈಯಕ್ತಿಕವಾಗಿ ಪ್ರಯತ್ನಿಸುತ್ತಿರುವದಾಗಿ ಹೇಳಿದರು. ಮಂಡಳಿ ಮೂಲಕ ಮಣ್ಣು ಪರೀಕ್ಷೆಯನ್ನು ಉಚಿತವಾಗಿ ಮಾಡಿಕೊಳ್ಳುವ ಮೂಲಕ ಕಾಫಿ ಗಿಡಗಳಿಗೆ ಸೂಕ್ತ ಪೆÇೀಷಕಾಂಶ ನೀಡಲು ಸಾಧ್ಯವಿದೆ.
ಸಾಲ ಮನ್ನಾ, ಬಡ್ಡಿ ಮನ್ನಾಗೆ ವಿರೋಧ
ಕಾಫಿ ಬೆಳೆಗಾರರು ಸಾಲ ಮನ್ನಾ, ಬಡ್ಡಿ ಮನ್ನಾ ಕೇಳುವದಕ್ಕೆ ತನ್ನ ವಿರೋಧವಿದೆ. ಕಾಫಿಗೆ ಸೂಕ್ತ ಬೆಂಬಲ ಬೆಲೆ ಕೇಳಲಿ. ತನ್ನ ಕಳೆದ ಅವಧಿಯಲ್ಲಿ ಸಬ್ಸಿಡಿ ಮೊತ್ತವನ್ನು ಶೇ. 25 ರಿಂದ ಶೇ. 40ಕ್ಕೆ ಏರಿಸಲು ಹೋರಾಟ ಮಾಡಿದ್ದೇನೆ. ಕಾಫಿ ತೋಟ ವಿಸ್ತರಣೆ, ಕೆರೆ ಅಭಿವೃದ್ಧಿ, ತುಂತುರು ನೀರಾವರಿ ಸೌಲಭ್ಯಕ್ಕಾಗಿ ಸಬ್ಸಿಡಿ ಸೌಲಭ್ಯವಿದೆ. ಮಹಿಳೆಯರು ಸಣ್ಣ ಕೈಗಾರಿಕೆ ಕೈಗೊಳ್ಳುವದಾದರೆ ಶೇ.30 ಸಹಾಯಧನ ಹಾಗೂ ಪುರುಷರಿಗೆ ಶೇ.25 ಸಹಾಯಧನ ನೀಡಲಾಗುತ್ತದೆ. ದೇಶದ ಅಸಂಪ್ರದಾಯಿಕ ಪ್ರದೇಶಗಳಲ್ಲಿ ಕಾಫಿ ತೋಟದ ಅಭಿವೃದ್ಧಿಗೆ ಸಹಾಯಧನ ನೀಡಲಾಗುತ್ತದೆ. ಇದು ಸಾಂಪ್ರದಾಯಿಕ ಪ್ರದೇಶಗಳಿಗೂ ವಿಸ್ತರಣೆಯಾಗಬೇಕು.
80 ವರ್ಷ ಕಳೆದ ಕಾಫಿ ಗಿಡಗಳನ್ನು ತೆರವುಗೊಳಿಸಿ, ಹೊಸ ಕಾಫಿ ಸಸಿಗಳನ್ನು ನೆಡಲು ಕಾಫಿ ಮಂಡಳಿಯಲ್ಲಿ ಸಬ್ಸಿಡಿ ಸೌಲಭ್ಯವಿದೆ.
ಚಿಕೋರಿ ದಂಧೆಯಿಂದ ಕಾಫಿ ಕೃಷಿಕರಿಗೆ ನಷ್ಟ
ಕೆ.ಜಿ. ಚಿಕೋರಿಗೆ ರೂ. 30 ರಿಂದ ರೂ. 40 ರವರೆಗೂ ದರವಿದೆ. ಗುಜರಾತ್ ಮತ್ತು ರಾಜಸ್ಥಾನದಲ್ಲಿ ಚಿಕೋರಿ ಗೆಡ್ಡೆಗಳನ್ನು ಬೆಳೆಯುತ್ತಿದ್ದು, ಕಾಫಿಗೆ ಶೇ.48 ರಷ್ಟು ಚಿಕೋರಿ ಸೇರಿಸಲು ಶಿಫಾರಸ್ಸು ಮಾಡಲಾಗಿದೆ. ಇದಕ್ಕೆ ತಾನು ವಿರೋಧಿಸಿದ್ದೇನೆ. ಒಂದು ಕೆ.ಜಿ. ಕಾಫಿ ಪುಡಿಗೆ ಶೇ. 15 ರಿಂದ ಶೇ. 20 ಚಿಕೋರಿ ಸೇರಿಸಬಹುದಷ್ಟೆ. ಕಾಫಿ ಆಂತರಿಕ ಬಳಕೆ ಸಂದರ್ಭ ಚಿಕೋರಿ ಅತ್ಯಧಿಕ ಬಳಕೆಯಿಂದಾಗಿ ಕಾಫಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಚಿಲ್ಲರೆ ಮಾರಾಟಗಾರರು ಚಿಕೋರಿ ಶೇಕಡಾವಾರು ಮಿಶ್ರಣದ ಬಗ್ಗೆ ಗ್ರಾಹಕರಿಗೆ ಸಮರ್ಪಕ ಮಾಹಿತಿ ನೀಡುವ ನಿಟ್ಟಿನಲ್ಲಿ ಕಾರ್ಯವಾಗಬೇಕಾಗಿದೆ.
ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾಫಿ ಮಂಡಳಿಯನ್ನು ಟಿ. ಬೋರ್ಡ್ ಹಾಗೂ ಸಾಂಬಾರ ಮಂಡಳಿಯೊಂದಿಗೆ ವಿಲೀನಗೊಳಿಸಲು ಕೇಂದ್ರ ಸರ್ಕಾರ ಈ ಹಿಂದೆ ನಿರ್ಧಾರ ತಳೆದಿತ್ತು. ಇದಕ್ಕೆ ತಮ್ಮ ವಿರೋಧವಿದೆ. ಕೇಂದ್ರಕ್ಕೆ ಶೇ. 50 ಕ್ಕಿಂತಲೂ ಅಧಿಕ ವಿದೇಶಿ ವಿನಿಮಯ ಕಾಫಿ ಉದ್ಯಮದಿಂದಲೇ ಸಿಗುತ್ತಿದೆ. ರಾಷ್ಟ್ರದಲ್ಲಿ ಕಾಫಿ ಮಂಡಳಿ ವಶದಲ್ಲಿರುವ ಸಾವಿರಾರು ಎಕರೆ ಕಾಫಿ ತೋಟವನ್ನು ಲಾಭದಾಯಕವಾಗಿ ಪರಿವರ್ತಿಸುವದು, ಬೆಂಗಳೂರು, ಚೆನ್ನೈ, ನವದೆಹಲಿ ಹಾಗೂ ಇತ್ಯಾದಿ ರಾಜ್ಯಗಳಲ್ಲಿ ಕಾಫಿ ಮಂಡಳಿ ಕಟ್ಟಡದಲ್ಲಿರುವ ಇತರೆ ಮಳಿಗೆಗಳ ನೂರಾರು ಕೋಟಿ ಬಾಡಿಗೆ ಆದಾಯವನ್ನು ಸದ್ಭಳಕೆ ಮಾಡಿದಲ್ಲಿ ಕಾಫಿ ಮಂಡಳಿ ಮೂಲಕ ಕಾಫಿ ಕೃಷಿಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಿದೆ.
ಕಾರ್ಮಿಕರ ಮಕ್ಕಳು ಹಾಗೂ ಸಣ್ಣಬೆಳೆಗಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಗೊಬ್ಬರ, ಕೀಟನಾಶಕ, ನರ್ಸರಿ ಚೀಲ, ಟಾರ್ಪಾಲಿನ್ ಇತ್ಯಾದಿಗಳನ್ನು ಉಚಿತವಾಗಿ ನೀಡಲೂ ಸಾಧ್ಯವಿದೆ.
ಕಾಫಿ ಮಂಡಳಿಯ ಕೆಲವೊಂದು ನ್ಯೂನ್ಯತೆಗಳನ್ನು ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನಿ ನರೇಂದ್ರಮೋದಿ ಅವರಿಗೆ ಮನವರಿಕೆ ಮಾಡಲು ಈ ಬಾರಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು. ಹಾಲಿ ಕಾಫಿ ಮಂಡಳಿಯ ಕಾರ್ಯದರ್ಶಿ ಶ್ರೀವತ್ಸಕೃಷ್ಣ ಕಾರ್ಯವೈಖರಿ ಬದಲಾಗಬೇಕಾಗಿದೆ. ಕಾಫಿ ಮಂಡಳಿ ಅಧ್ಯಕ್ಷರಿಗೆ ಉಪಾಧ್ಯಕ್ಷರ ಕೊಠಡಿಯನ್ನು ಕಳೆದ ಬಾರಿ ನೀಡಲಾಗಿದ್ದು, ಶೌಚಾಲಯ ವ್ಯವಸ್ಥೆಯೂ
ಅಲ್ಲಿಲ್ಲ ಎಂದು ಹೇಳಿದ ಡಾಲಿ ಚಂಗಪ್ಪ ಅವರು ತಮ್ಮ ಮುಂದಿನ ಮೂರುವರ್ಷದ ಅವಧಿಯಲ್ಲಿ ಕಾಫಿ ಬೆಳೆಗಾರರಿಗೆ ಕಾಫಿ ಮಂಡಳಿಯಿಂದ ಪೂರಕ ನೆರವು ಹಾಗೂ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡಲಾಗುವದು. ಚಿಕೋರಿ ವ್ಯಾಪಕ ಮಿಶ್ರಣ ವಿರುದ್ಧ ಬೆಳೆಗಾರರು ಸಂಘಟಿತ ಹೋರಾಟ ನಡೆಸಬೇಕಾಗಿದೆ. ಕರ್ನಾಟಕ ಕಾಫಿ ಪ್ಲಾಂಟರ್ಸ್, ಇತ್ಯಾದಿ ಸಂಘಟನೆ ಮೂಲಕ ಕಾಫಿ ಬೆಳೆಗಾರರು ಶೇ. 100 ರಷ್ಟು ಮಣ್ಣು ಪರೀಕ್ಷೆ ಮಾಡಿಯೇ ರಸಗೊಬ್ಬರ ಬಳಕೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಅನಿವಾರ್ಯ ಎಂದು ವಿವರಿಸಿದರು. ಕಾಫಿ ಮಂಡಳಿ ಆವರಣದಲ್ಲಿ ಕಾಫಿ ತಯಾರಿ ವಿಧಾನ, ರೋಸ್ಟಿಂಗ್ ವಿಧಾನ ಅಳವಡಿಸುವಂತಾಗಬೇಕು. ಶಂಖದ ಹುಳು ಬಾಧೆ ನಿಯಂತ್ರಣ, ಆನೆ-ಮಾನವ ಸಂಘರ್ಷ ಹತ್ತಿಕ್ಕಲು ವೈಜ್ಞಾನಿಕ ವಿಧಾನ ಅಳವಡಿಕೆ ಅಥವಾ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಅಗತ್ಯವಿದೆ. ಕಾಫಿ ಬೆಳೆಗಾರರೂ ಸಮಸ್ಯೆ ಇದ್ದರೆ 9448813849 ಸಂಖ್ಯೆಗೆ ಕರೆ ಮಾಡಲು ಮನವಿ ಮಾಡಿದ್ದಾರೆ.
ಡಾಲಿ ಚಂಗಪ್ಪ ಕಿರುಪರಿಚಯ
ಕಳೆದ ಅವಧಿಯಲ್ಲಿ 18 ತಿಂಗಳು ಕಾಫಿ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ ಶ್ರೀಮಂಗ¯ ದಿ.ಮಚ್ಚಾಮಾಡ ಮೊಣ್ಣಪ್ಪ ಅವರ ಪುತ್ರ ಡಾಲಿಚಂಗಪ್ಪ ಅವರು ಬಿಎಸ್ಸಿ ವಿದ್ಯಾಭ್ಯಾಸ ಮಾಡಿದ್ದಾರೆ. ಸಣ್ಣ ಹಿಡುವಳಿದಾರರಾಗಿರುವ ಇವರು ಲಕ್ಷ್ಮಣ ತೀರ್ಥ ಕಾಫಿ ಕ್ಯೂರಿಂಗ್ ವಕ್ರ್ಸ್ ಮಾಲೀಕರಾಗಿದ್ದಾರೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು ‘ಎಂಎಲ್ಎ’ ಟಿಕೆಟ್ ಆಕಾಂಕ್ಷಿಯಾಗಿದ್ದರು. ಶ್ರೀಮಂಗಲ ಗ್ರಾ.ಪಂ. ಮಾಜಿ ಅಧ್ಯಕ್ಷರಾಗಿ, ಶ್ರೀಮಂಗಲ ಕಾಲೇಜು ಆಡಳಿಯ ಮಂಡಳಿ ಅಧ್ಯಕ್ಷರಾಗಿ, ಅಲ್ಲಿನ ಎಪಿಸಿಎಂಎಸ್, ವಿಎಸ್ಎಸ್ಎನ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇದೀಗ ಶ್ರೀಮಂಗಲದ ಕಾಳಿ ಪೆಟ್ರೋಲ್ ಪಂಪ್ ಮಾಲೀಕರಾಗಿಯೂ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
ವರದಿ: ಟಿ.ಎಲ್. ಶ್ರೀನಿವಾಸ್