ಶನಿವಾರಸಂತೆ, ಜು. 16: ಸಮೀಪದ ಕೊಡ್ಲಿಪೇಟೆಯ ಶ್ರೀ ರುಕ್ಮಿಣಿ ಪಾಂಡುರಂಗ ದೇವಾಲಯದಲ್ಲಿ ಶ್ರೀ ನಾಮದೇವ ಸಿಂಪಿ ಸಮಾಜದ ವತಿಯಿಂದ ಆಷಾಢ ಮಾಸದ ದ್ವಾದಶಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ದೇವಾಲಯವನ್ನು ತಳಿರು ತೋರಣ ಹಾಗೂ ಹೂವಿನಿಂದ ಅಲಂಕರಿಸಲಾಗಿತ್ತು. ಶ್ರೀ ರುಕ್ಮಿಣಿ ಪಾಂಡುರಂಗ ದೇವರಿಗೆ ವಿಶೇಷ ಅಭಿಷೇಕ ಮಾಡಿ, ನಂತರ ಪ್ರಭಾವಳಿಯೊಂದಿಗೆ ರೇಷ್ಮೆ ವಸ್ತ್ರ, ಆಭರಣ ತೊಡಿಸಿ ಮಲ್ಲಿಗೆ, ಕನಕಾಂಬರ, ಸೇವಂತಿಗೆ ಹೂವು ಹಾಗೂ ತುಳಸಿ ಮಾಲೆಯಿಂದ ಅಲಂಕರಿಸಲಾಯಿತು.

ಮಧ್ಯಾಹ್ನ ಮಹಾಮಂಗಳಾರತಿ ನಡೆಯಿತು. ದ್ವಾದಶಿ ಹಬ್ಬದ ಅಂಗವಾಗಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವಿವಿಧೆಡೆಯಿಂದ ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.

ಅರ್ಚಕ ಮಹಾಬಲೇಶ್ವರ ಜೋಷಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ಮಹಿಳೆಯರು, ಯುವಕರು ಭಕ್ತಿಗೀತೆ, ಭಜನೆಗಳನ್ನು ಹಾಡಿದರು.

ಪೂಜಾ ಸಂದರ್ಭ ಶ್ರೀನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಡಿ. ಮೋಹನ್‍ಕುಮಾರ್ ಕೊಳೇಕರ್, ಉಪಾಧ್ಯಕ್ಷ ಕೆ.ಎಸ್. ವಾಸು ದೇವರಾಜ್, ಕಾರ್ಯದರ್ಶಿ ಜಿ.ಆರ್. ಕಾಂತರಾಜ್ ಗುಜರ್, ನಿರ್ದೇಶಕರಾದ ಕೆ.ಎನ್. ರಮೇಶ್, ಟಿ.ಎನ್. ಚಂದ್ರಶೇಖರ್, ಅರವಿಂದ್, ಕೋದಂಡರಾಮ ರಾವ್, ಸುಂದರ್, ಅರುಣ್‍ಕುಮಾರ್, ಗೋಪಾಲರಾವ್, ಸತೀಶ್, ದೇವರಾಜ್, ಮಂಜುನಾಥ್ ರಾವ್, ವೇಣುಗೋಪಾಲ್, ಅಶ್ವಥ್ ಕುಮಾರ್, ಸುದೀಪ್, ಸಂಜಯ್, ನವೀನ್ ಹಾಜರಿದ್ದರು.