ಮಡಿಕೇರಿ, ಜು. 15: ಪ್ರಕೃತಿ ರಮಣೀಯ ಉತ್ತಮ ವಾತಾವರಣದಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲಿ; ವಿಶೇಷವಾಗಿ ಈ ನಾಡಿನ ಸ್ಥಳೀಯರು ಪರಿಸರ ಮಾಲಿನ್ಯಗೊಳ್ಳದಂತೆ ಕಾಳಜಿ ವಹಿಸಬೇಕೆಂದು; ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಉಪನಿರ್ದೇಶಕ ಗಣೇಶನ್ ಅವರು ಕರೆ ನೀಡಿದ್ದಾರೆ. ಪ್ರಸಕ್ತ ಕೊಡಗಿನಲ್ಲಿ ಕಾವೇರಿ ಹೊಳೆ ನೀರು ಸೇರಿದಂತೆ; ಜಿಲ್ಲೆಯಲ್ಲಿ ಕಂಡುಬರುತ್ತಿರುವ ವಾಯು ಮಾಲಿನ್ಯ ಇತ್ಯಾದಿ ಸಂಬಂಧ ‘ಶಕ್ತಿ’ ಸಂದರ್ಶನದಲ್ಲಿ ಅವರು ಬೇಸರ ವ್ಯಕ್ತಪಡಿಸಿದರು.ಕೊಡಗು ನೈಸರ್ಗಿಕವಾಗಿ ಉತ್ತಮ ವಾತಾವರಣದಿಂದ ಕೂಡಿದ್ದು; ದೊಡ್ಡ ದೊಡ್ಡ ಕಾರ್ಖಾನೆಗಳು ಇತ್ಯಾದಿ ಇಲ್ಲದಿರುವ ಅಂಶವನ್ನು ಬೊಟ್ಟು ಮಾಡಿದರು. ಹೀಗಿದ್ದೂ ಯಾರೋ ಹೊರಗಿನವರು ಹೊಂದಿರುವ ದೊಡ್ಡ ದೊಡ್ಡ ಕಾಫಿ ತೋಟ, ರೆಸಾರ್ಟ್‍ಗಳನ್ನು ನೋಡಿಕೊಳ್ಳುತ್ತಿರುವ ಇಲ್ಲಿನ ಸ್ಥಳೀಯರು ಕೊಡಗಿನ ಪರಿಸರ ಸಂರಕ್ಷಣೆ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿರುವದು ಬೇಸರದ ಸಂಗತಿ ಎಂದು ಅಭಿಪ್ರಾಯಪಟ್ಟರು.

ನದಿ ಮಾಲಿನ್ಯ : ಕೇಂದ್ರ ಸರಕಾರದಿಂದ ನದಿಗಳ ಪಾವಿತ್ರ್ಯ ನಿರ್ವಹಣೆ ಸಂಬಂಧ ಅನೇಕ ವರ್ಷಗಳಿಂದ ವರದಿ ಸಂಗ್ರಹಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಕಾವೇರಿ ಸೇರಿದಂತೆ ಯಾವ ಹೊಳೆ ನೀರು ಕೂಡ ಇಂದು ಸಂಸ್ಕರಿಸದೆ ನೇರವಾಗಿ ಕುಡಿಯಲು ಬಳಕೆಗೆ ಸಾಧ್ಯವಿಲ್ಲದಾಗಿದೆ ಎಂದು ಅಧಿಕಾರಿ ಆತಂಕ ವ್ಯಕ್ತಪಡಿಸಿದರು.

ತಿಂಗಳಿಗೊಮ್ಮೆ ಪರೀಕ್ಷೆ : ಮುಖ್ಯವಾಗಿ ಕಾವೇರಿ ನದಿ ನೀರನ್ನು ಭಾಗಮಂಡಲ, ನಾಪೋಕ್ಲು, ಕುಶಾಲನಗರ, ಬೈಚನಹಳ್ಳಿ ಹಾಗೂ ಕಣಿವೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅಂತೆಯೇ ಕೂಟುಹೊಳೆ ನೀರನ್ನು ಪರೀಕ್ಷೆ ಒಳಪಡಿಸಿ, ಮೈಸೂರಿನ ಪ್ರಯೋಗಾಲಯದಿಂದ ವರದಿ ಸಂಗ್ರಹಿಸಲಾಗುತ್ತಿದ್ದು, ನೀರಿನ ಗುಣಮಟ್ಟ ‘ಬಿ’ ಶ್ರೇಣಿಯಲ್ಲಿದೆ ಎಂದು ಮಾಹಿತಿ ನೀಡಿದರು. ‘ಎ’ ಶ್ರೇಣಿಯ ಗುಣಮಟ್ಟವಿದ್ದರೆ ನೇರವಾಗಿ ಬಳಕೆಗೆ (ಮೊದಲ ಪುಟದಿಂದ) ಸಾಧ್ಯವಿದ್ದು, ಶುದ್ಧ ನೀರೆಂದು ಪರಿಗಣಿಸಬಹುದು ಎಂದ ಅಧಿಕಾರಿ, ಕೊಡಗಿನ ಗಡಿಯಾಚೆ ಕಾವೇರಿಯು ‘ಡಿ’ ಹಂತದ ಮಾಲಿನ್ಯವಿರುವದಾಗಿ ವಿಷಾದಿಸಿದರು.

ನಮ್ಮದೇ ಕೊಡಗು : ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಅಧಿಕಾರಿ ಡಾ. ಎಂ.ಕೆ. ಸುಧಾ ಅವರು, ‘ಶಕ್ತಿ’ಯೊಂದಿಗೆ ಅನಿಸಿಕೆ ಹಂಚಿಕೊಳ್ಳುತ್ತಾ; ಈ ಸುಂದರ ಪರಿಸರದಿಂದ ಕೂಡಿರುವ ಕೊಡಗು ನಮ್ಮದೇ ಎಂಬ ಅರಿವು ಪ್ರತಿಯೊಬ್ಬರಿಗೆ ಇದ್ದರೆ ನೀರು, ಗಾಳಿಯ ಮಾಲಿನ್ಯಕ್ಕೆ ಮುಂದಾಗಲಾರರು ಎಂದು ಆಶಯ ವ್ಯಕ್ತಪಡಿಸಿದರು.

ಕೊಡಗಿನಲ್ಲಿ ಕಾಫಿ ಪಲ್ಪಿಂಗ್ ಇತರ ರೆಸಾರ್ಟ್ ಹೊಟೇಲ್ ಉದ್ಯಮಗಳ ತ್ಯಾಜ್ಯಗಳನ್ನು ಅವರವರ ಜಾಗದಲ್ಲಿ ಇಂಗುಗುಂಡಿಗಳ ಮೂಲಕ ನಿಯಂತ್ರಣಗೊಳಿಸಿ ನದಿ, ತೋಡುಗಳಿಗೆ ಬಿಡದಿದ್ದರೆ ಮಾಲಿನ್ಯ ತಡೆಗಟ್ಟುವದು ಸುಲಭವೆಂದು ತಿಳಿಹೇಳಿದರು.