ಎಲ್ಲೆಲ್ಲೂ ನೊಣ, ಸೊಳ್ಳೆಗಳ ಕಾಟ - ಅಧಿಕಾರಿ, ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಜಿ.ಪಂ. ಸದಸ್ಯ ಗೋಣಿಕೊಪ್ಪಲು, ಜು. 15: ಗೋಣಿಕೊಪ್ಪಲುವಿನ ಬಸ್ ನಿಲ್ದಾಣದ ಸಮೀಪವಿದ್ದ ಕಸದ ಗುಡ್ಡದ ರಾಶಿಗಳನ್ನು ಬೇರೆಡೆಗೆ ಸ್ಥಳಾಂತರಿಸದೇ ಜನನಿಬಿಡ ಪ್ರದೇಶದ ಮಾರ್ಕೆಟ್ ಬಳಿಯಲ್ಲಿ ರಾತೋರಾತ್ರಿ ಸುರಿದು ಕಸ ಸಮಸ್ಯೆಯನ್ನು ಮತ್ತಷ್ಟು ಗಂಭೀರ ಮಾಡಿದ ಹಿನ್ನೆಲೆ ಮುಂಜಾನೆ ಸಾರ್ವಜನಿಕರು, ಜೀಪು ನಿಲ್ದಾಣದ ಚಾಲಕರು, ಮಾಲೀಕರು ತಮ್ಮ ಆಕ್ರೋಷವನ್ನು ಹೊರ ಹಾಕಿ ಪಂಚಾಯಿತಿ ಕಾರ್ಯ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಅವರನ್ನು ಬರ ಮಾಡಿಕೊಂಡು ಸುರಿದಿರುವ ಕಸದ ರಾಶಿಯಿಂದ ಜನತೆ ಅನುಭವಿಸುತ್ತಿರುವ ದಿನನಿತ್ಯದ ಸಮಸ್ಯೆಯನ್ನು ಬಿಚ್ಚಿಟ್ಟರು. ಪಂಚಾಯಿತಿ ಸದಸ್ಯರ ನಡುವಿನ ಹೊಂದಾಣಿಕೆಯ ಕೊರತೆಯಿಂದ ನಗರ ವ್ಯಾಪ್ತಿಯ ಕಸ ತ್ಯಾಜ್ಯಗಳನ್ನು ಬೇರೆಡೆಗೆ ವಿಲೇವಾರಿ ಮಾಡುವ ಬದಲು ಸಿಬ್ಬಂದಿಗಳು ಅದ್ಯಕ್ಷೆ ಸೆಲ್ವಿ ಅವರ ಸೂಚನೆಯಂತೆ ಪಂಚಾಯಿತಿ ಮುಂಭಾಗ ರಾಶಿಯಾಗಿ ಸುರಿದಿದ್ದರು ಇದರಿಂದ ಸಾರ್ವಜನಿಕರು ಆಕ್ರೋಷಗೊಂಡಿದ್ದರೂ ಪಂಚಾಯಿತಿ ಸಭೆಯಲ್ಲಿ ಕಸ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದರು. ಈ ಬಗ್ಗೆ ಮಾಧ್ಯಮಗಳು ಪಂಚಾಯಿತಿ ಕಾರ್ಯವೈಖರಿಯ ಬಗ್ಗೆ ಬೆಳಕು ಚೆಲ್ಲಿದ್ದವು.

ಪಂಚಾಯಿತಿ ಮುಂಭಾಗವಿರುವ ಕಸ ಸಮಸ್ಯೆ ವೀಕ್ಷಿಸಲು ಹಿರಿಯ ಅಧಿಕಾರಿಗಳು ಆಗಮಿಸುವ ಹಿನ್ನೆಲೆ ಎಚ್ಚೆತ್ತ ಸದಸ್ಯರು, ಅಧಿಕಾರಿಗಳು ಅರ್ಧಂಬರ್ಧ ಕಸವನ್ನು ತೆಗೆದು ಇದರ ಮೇಲೆ ಮಣ್ಣು ಸುರಿದು ಕಸ ಕಾಣದಂತೆ ಮಾಡಿದ್ದರು.

ಆದರೆ ಈ ಕಸವನ್ನು ಸಮೀಪವೇ ಇರುವ ಮಾರ್ಕೆಟ್ ಬಳಿಯಲ್ಲಿ ಸುರಿದು ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ ತಂತ್ರ ಮಾಡಿದ್ದರು. ಈ ಕೊಳೆತ ಕಸದಿಂದ ನಗರದಲ್ಲಿ ದುರ್ಗಂಧ ಬೀರುತ್ತಿದ್ದ ಹಿನ್ನೆಲೆ ಸಾರ್ವಜನಿಕರು ತಮ್ಮ ಅಸಮಾಧಾನ ಹೊರಹಾಕಿದ್ದರು.

ಕಸ ಸಮಸ್ಯೆ ಬಗೆ ಹರಿಸುವ ಪ್ರಯತ್ನದಲ್ಲಿ ಕೇವಲ ಸಬೂಬುಗಳನ್ನೇ ಹೇಳುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಹಿನ್ನೆಲೆ ಸಾರ್ವಜನಿಕರ ಕರೆಯ ಮೇರೆಗೆ ಸ್ಥಳಕ್ಕೆ ಆಗಮಿಸಿದ ಸಿ.ಕೆ. ಬೋಪಣ್ಣ ಸ್ಥಳಕ್ಕೆ ಪಂಚಾಯಿತಿ ಸದಸ್ಯರಾದ ರಾಮಕೃಷ್ಣ, ಸುರೇಶ್ ರೈ, ಪಂಚಾಯಿತಿ ಕಾರ್ಯದರ್ಶಿ ಪ್ರಕಾಶ್ ಅವರನ್ನು ಬರಮಾಡಿಕೊಂಡು ತರಾಟೆಗೆ ತೆಗೆದುಕೊಂಡರು.

ಪಂಚಾಯಿತಿಯ ವಾಹನ ಚಾಲಕ ನೌಶದ್ ರಾತ್ರಿ ವೇಳೆಯಲ್ಲಿ ಕಸ ಸುರಿದ ಬಗ್ಗೆ ದಾಖಲೆಗಳಿವೆ, ಸಿಬ್ಬಂದಿಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ನಿಮ್ಮಿಂದ ಸಾಧ್ಯವಿಲ್ಲ. ನಿಮ್ಮಿಂದ ನಾನು ಸಾರ್ವಜನಿಕರಿಂದ ಮಾತು ಕೇಳಬೇಕಾಗಿದೆ. ನಾನೇ ಖುದ್ದಾಗಿ ಜಿಲ್ಲಾ ಪಂಚಾಯಿತಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ, ಕಳೆದ ಎರಡು ತಿಂಗಳಿನಿಂದ ಕಸ ಸಮಸ್ಯೆ ನಿರ್ವಹಿಸಲು ನಿಮ್ಮಿಂದ ಇನ್ನೂ ಸಾಧ್ಯವಾಗಿಲ್ಲ.

ನಡು ರಾತ್ರಿಯಲ್ಲಿ ಪಂಚಾಯಿತಿಯ ವಾಹನಗಳು ಯಾರ ಭಯವೂ ಇಲ್ಲದೇ ಓಡಾಡುತ್ತಿದೆ ಇದಕ್ಕೆಲ್ಲ ಅಧಿಕಾರ ಕೊಟ್ಟವರು ಯಾರು? ನಿಮ್ಮ ಕೆಲಸದಿಂದ ನಾನು ಸಾರ್ವಜನಿಕರ ಮುಂದೆ ತಲೆ ತಗ್ಗಿಸುವಂತಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

ದೂರವಾಣಿ ಮೂಲಕ ತಾಲೂಕು ವೈದ್ಯಾಧಿಕಾರಿಗಳಾದ ಡಾ. ಯತಿರಾಜ್ ಅವರನ್ನು ಸಂಪರ್ಕಿಸಿ ಕಸದ ವಿಷಯದಲ್ಲಿ ಪಂಚಾಯಿತಿ ನಿರ್ಲಕ್ಷತೆ ಬಗ್ಗೆ ಹಾಗೂ ಕಸದ ರಾಶಿಯಿಂದ ಖಾಯಿಲೆಗಳು ಹರಡುವ ಸಾಧ್ಯತೆ ಇರುವದರಿಂದ ತಕ್ಷಣ ನೋಟೀಸ್ ನೀಡುವಂತೆ ಸೂಚಿಸಿದರು. ಕಾರ್ಯದರ್ಶಿ ಪ್ರಕಾಶ್ ಅವರನ್ನು ಬರಮಾಡಿಕೊಂಡು ತಕ್ಷಣವೆ ಜನ ನಿಬಿಡ ಪ್ರದೇಶದಿಂದ ಕಸ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು. ಸಾರ್ವಜನಿಕರು ಪಂಚಾಯಿತಿ ಕಾರ್ಯ ವೈಖರಿಯ ಬಗ್ಗೆ ಹಾಗೂ ಪಂಚಾಯಿತಿ ವಾಹನ ಚಾಲಕನ ಬಗ್ಗೆ ದೂರು ಹೇಳಿದರು.

ಕಸ ಸಮಸ್ಯೆ ಬಗೆ ಹರಿಸಲು ಸ್ಥಳೀಯ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಆನೇಕ ಸಭೆ ನಡೆಸಿ ಕಸ ವಿಲೇವಾರಿಗೆ ಮಾರ್ಗೋಪಾಯ ತಿಳಿಸಿದರೂ ಪಂಚಾಯಿತಿಯ ಸಭೆಯಲ್ಲಿ ಈ ಬಗ್ಗೆ ಕೇವಲ ಸಣ್ಣ ಸಣ್ಣ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಲ ಹರಣದಲ್ಲೆ ಕಳೆಯುತ್ತಿದ್ದಾರೆ. ಕಸ ವಿಲೇವಾರಿಗೆ ಟೆಂಡರುದಾರ ಮುಂದೆ ಬಂದು ಅವಕಾಶ ಕೇಳಿದರೂ ಕೇವಲ ಕಾನೂನನ್ನೇ ಮುಂದಿಟ್ಟುಕೊಂಡು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಪಂಚಾಯಿತಿ ಸದಸ್ಯರ ಒಣ ಪ್ರತಿಷ್ಟೆಯಿಂದ ನಗರವು ಗಬ್ಬೆದ್ದು ನಾರಲು ಕಾರಣವಾಗಿದೆ.

ಕೇವಲ ಪಂಚಾಯಿತಿ ಸಭೆಗಳಲ್ಲಿ ತಮ್ಮ ಪ್ರತಿಷ್ಠೆಗಳನ್ನು ತೋರಿಸುತ್ತಿರುವ ಸದಸ್ಯರು ಕನಿಷ್ಟ ನಗರದಲ್ಲಿ ಗಬ್ಬೆದ್ದು ನಾರುತ್ತಿರುವ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಮಾರ್ಕೆಟ್ ಮುಂದೆ ಕಸದ ರಾಶಿಗಳನ್ನು ಸುರಿದಿದ್ದು ಇದರ ಮುಂದೆಯೇ ಭಾನುವಾರದ ಸಂತೆಯನ್ನು ನಡೆಸಲಾಗಿದೆ. ಈ ಕಸದ ರಾಶಿಯಿಂದ ಹುಳುಗಳು, ಸೊಳ್ಳೆಗಳು ಹೊರಬರುತ್ತಿದ್ದು ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುವಂತಿದೆ. ತಿಂಡಿ, ತರಕಾರಿ ಇದರ ಮುಂದೆಯೇ ವ್ಯಾಪಾರ ಜೋರಾಗಿ ನಡೆಯುತ್ತಿವೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

- ಹೆಚ್.ಕೆ. ಜಗದೀಶ್