ಮಡಿಕೇರಿ, ಜು.15 : ವೀರಾಜಪೇಟೆ ತಾಲೂಕಿನ ಕುಟ್ಟಂದಿ ಗ್ರಾಮದ ಗುಡ್ಡಮಾಡು ಪೈಸಾರಿಯಲ್ಲಿ ವಾಸವಿರುವ ಆದಿವಾಸಿಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ನಿರಂತರ ಕಿರುಕುಳ ನೀಡುತ್ತಿದ್ದು, ಜಾಗ ಖಾಲಿ ಮಾಡುವಂತೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಕಾರ್ಯದರ್ಶಿ ವೈ.ಕೆ. ಗಣೇಶ್ ಹಾಗೂ ಸ್ಥಳೀಯರು ಸುಮಾರು 52 ಕುಟುಂಬಗಳು ಗುಡ್ಡಮಾಡು ಪೈಸಾರಿಯಲ್ಲಿ ನೆಲೆ ನಿಂತಿದ್ದು, ಕಳೆದ ಕೆಲವು ತಿಂಗಳುಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ, ಜಾಗ ಖಾಲಿ ಮಾಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
22 ಆದಿವಾಸಿ ಕುಟುಂಬಗಳು ಕಳೆದ 20 ವರ್ಷಗಳಿಂದ ಇಲ್ಲಿ ವಾಸವಿದ್ದು, ಸರಕಾರವೇ ನಿರ್ಮಿಸಿಕೊಟ್ಟ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಕುಡಿಯುವ ನೀರು, ವಿದ್ಯುತ್ ಮತ್ತು ರಸ್ತೆ ವ್ಯವಸ್ಥೆಯನ್ನು ಸರಕಾರವೇ ಮಾಡಿಕೊಟ್ಟಿದೆ. ಇಲ್ಲಿನ ಸುಮಾರು 83 ಎಕರೆ ಪ್ರದೇಶವನ್ನು ಆದಿವಾಸಿ ಗಳಿಗಾಗಿಯೇ ಮೀಸಲಿಡಲಾಗಿದೆ.
ಮೂಲಭೂತ ಸೌಲಭ್ಯಗಳು ಇದೆ ಎನ್ನುವ ಕಾರಣಕ್ಕಾಗಿ ಹೆಚ್ಚುವರಿ 28 ಆದಿವಾಸಿ ಕುಟುಂಬಗಳು ಪಕ್ಕದ ಪೈಸಾರಿಯಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿವೆ. ಇದೇ ಮೇ ತಿಂಗಳಿನಲ್ಲಿ ಆದಿವಾಸಿಗಳು ವಾಸವಿರುವ ಪ್ರದೇಶಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿಗಳು ಇದು ಅರಣ್ಯಕ್ಕೆ ಸೇರಿದ ಜಾಗವಾಗಿದ್ದು, ತಕ್ಷಣ ಸ್ಥಳಾಂತರಗೊಳ್ಳಿ ಎಂದು ಎಚ್ಚರಿಕೆ ನೀಡಿ ಹೋಗಿದ್ದರು. ಜು.10 ರಂದು ಮನೆ ಮಂದಿ ಕೆಲಸಕ್ಕೆ ಹೋಗಿದ್ದಾಗ ಮತ್ತೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳು ವಯೋವೃದ್ಧರಿಗೆ ಹಾಗೂ ಮಕ್ಕಳಿಗೆ ಜಾಗ ಖಾಲಿ ಮಾಡಿ ಎಂದು ಬೆದರಿಕೆ ಹಾಕಿದ್ದಾರೆ.
ಜು.11 ರಂದು ಅರಣ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ಗೋಣಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಪೊಲೀಸರು ಪೊನ್ನಂಪೇಟೆ ಅರಣ್ಯ ಇಲಾಖೆಗೆ ಕರೆ ಮಾಡಿದಾಗ ನಾವು ಕಾರ್ಯಾಚರಣೆ ಮಾಡಿಲ್ಲ ಎಂದು ಹೇಳಿದ್ದಾರೆ. ಜು.13 ಕ್ಕೆ ಮತ್ತೆ ಬಿ.ಶೆಟ್ಟಿಗೇರಿ ಅರಣ್ಯ ಸಿಬ್ಬಂದಿಗಳು ಬಂದು ಜಾಗ ಖಾಲಿ ಮಾಡಿ ಎಂದು ಒತ್ತಡ ಹೇರಿದ್ದಾರೆ. ನೀವು ಮಾಡಿದ ತೋಟ, ಮನೆ ಯಾವದೂ ನಿಮಗೆ ಸಿಗುವದಿಲ್ಲವೆಂದು ಬೆದರಿಸಿದ್ದಾರೆ. ಶೆಡ್‍ಗಳಲ್ಲಿದ್ದ ಟಾರ್ಪಲ್ ಶೀಟ್‍ಗಳನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.
ನಮ್ಮ ವಿರುದ್ಧ ದೂರು ನೀಡಿದರೆ ನಿಮ್ಮ ವಿರುದ್ಧ ಬಲವಾದ ಮತ್ತೊಂದು ದೂರು ದಾಖಲಿಸುವದಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆದರಿಕೆ ಹಾಕುತ್ತಿದ್ದಾರೆ. ವೀರಾಜಪೇಟೆ ತಹಶೀಲ್ದಾರ್ ಬಳಿ ಈ ಬಗ್ಗೆ ದೂರಿಕೊಂಡಾಗ ಇದು ಪೈಸಾರಿ ಜಾಗ ಎಂದು ತಿಳಿದು ಬಂದಿದೆ. ತಹಶೀಲ್ದಾರರು ಅರಣ್ಯ ಇಲಾಖೆಗೆ ಪತ್ರ ಬರೆದು ಪೈಸಾರಿ ಜಾಗವೆಂದು ಸ್ಪಷ್ಟಪಡಿಸಿರುವದಾಗಿ ಗಣೇಶ್ ತಿಳಿಸಿದರು.
ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಎರಡು ಬಾರಿ ಮನವಿ ಪತ್ರ ನೀಡಲಾಗಿದೆ, ಆದರೆ ಏನೂ ಪ್ರಯೋಜನವಾಗಿಲ್ಲ, ನಮ್ಮ ನೋವಿಗೆ ಯಾವುದೇ ಸ್ಪಂದನ ದೊರೆತಿಲ್ಲ.
ಅರಣ್ಯ ಇಲಾಖೆ ಸಿಬ್ಬಂದಿಗಳ ನಿರಂತರ ಕಿರುಕುಳದಿಂದ ನಮಗೆ ಆತಂಕ ಮೂಡಿದ್ದು, ಜಿಲ್ಲಾಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ರಕ್ಷಣೆ ನೀಡಲು ಕ್ರಮ ಕೈಗೊಳ್ಳಬೇಕು ಮತ್ತು ಕಿರುಕುಳ ನೀಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ಪ್ರಮುಖರು ಒತ್ತಾಯಿಸಿದರು. ದುರ್ಬಲರಾದ ನಮಗೆ ಯಾವದೇ ರೀತಿಯಲ್ಲಿ ನೋವುಗಳಾದರು ಅದಕ್ಕೆ ಅರಣ್ಯ ಇಲಾಖೆಯೇ ನೇರ ಹೊಣೆ ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಗುಡ್ಡಮಾಡು ಪೈಸಾರಿಯ ನಿವಾಸಿಗಳಾದ ವೈ.ಟಿ.ಮಣಿ, ಪಿ.ಸಿ.ಚಿಣ್ಣ, ವೈ.ಎಂ. ಸುಬ್ರಮಣಿ, ಜೆ.ಆರ್. ಸುರೇಶ್ ಹಾಗೂ ರವಿ ಜೆ.ಆರ್ ಉಪಸ್ಥಿತರಿದ್ದರು.