ಸಿದ್ದಾಪುರ, ಜು. 15: ಕಳೆದ ಎರಡು ವಾರಗಳ ಹಿಂದೆ ಜ್ವರ ಕಾಣಿಸಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಚಾಲಕನೊರ್ವ ಹೆಚ್1ಎನ್1 ಸೋಂಕಿನಿಂದ ಮೃತಪಟ್ಟಿರುವ ಘಟನೆ ನಡೆದಿದೆ.ಸಿದ್ದಾಪುರದ ಹೈಸ್ಕೂಲ್ ಪೈಸಾರಿಯ ನಿವಾಸಿ ಕಾರು ಚಾಲಕನಾಗಿದ್ದ ಪಿ.ಸಿ ರಾಜು (53) ಎಂಬವರು ಕಳೆದ ಎರಡು ವಾರಗಳ ಹಿಂದೆ ಜ್ವರದಿಂದ ಬಳಲುತ್ತಿದ್ದು, ನಂತರ ಅಮ್ಮತ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಸಂದರ್ಭ, ಹೆಚ್1ಎನ್1 ಸೋಂಕು ಇರುವದು ಪತ್ತೆಯಾಗಿತ್ತು. ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರದಂದು ನಿಧನರಾಗಿದ್ದಾರೆ.
ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಕಾರುಚಾಲಕರ ಸಂಘದ ಸಮಾವೇಶದಲ್ಲಿ ರಾಜು ಅವರಿಗೆ ಉತ್ತಮ ಚಾಲಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. (ಮೊದಲ ಪುಟದಿಂದ) ಮೃತರು ತುಳು ಜನಪದ ಕೂಟದ ಉಪಾಧ್ಯಕ್ಷ, ಬಿ.ಎಂ.ಎಸ್‍ನ ಕಾರ್ಯದರ್ಶಿ, ಮೊಗೇರ ಸಂಘ, ವಾಹನ ಚಾಲಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಮಂಗಳೂರು ಆಸ್ಪತ್ರೆಯ ವೆಚ್ಚ 1 ಲಕ್ಷಕ್ಕಿಂತ ಹೆಚ್ಚು ಇರುವದರಿಂದ ಹಣ ಪಾವತಿಸದೇ ಮೃತ ದೇಹವನ್ನು ಆಸ್ಪತ್ರೆಯವರು ಬಿಟ್ಟು ಕೊಡುತ್ತಿಲ್ಲ ಎಂಬ ಮಾಹಿತಿ ಬಂದಿದ್ದು, ಸಿದ್ದಾಪುರ ಬಿ.ಜೆ.ಪಿ. ಪ್ರಮುಖರು ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಸಂಪರ್ಕಿಸಿದ್ದು, ಶಾಸಕರು ಮಂಗಳೂರು ಭಾರತೀಯ ಜನತಾ ಪಕ್ಷದ ಪ್ರಮುಖರನ್ನು ಸಂಪರ್ಕಿಸಿರುವ ಹಿನ್ನೆಲೆಯಲ್ಲಿ ಮೃತ ದೇಹವನ್ನು ಕುಟುಂಬಸ್ಥರಿಗೆ ಬಿಟ್ಟು ಕೊಡುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ.