ಕೂಡಿಗೆ, ಜು. 15: ಗ್ರಾಮ ಪಂಚಾಯ್ತಿ ವತಿಯಿಂದ ಮನೆ ನೀಡುವದಾಗಿ ಭರವಸೆ ನೀಡಿ, ಮನೆ ನಿರ್ಮಿಸಲು ಉದ್ದೇಶಿಸಿದ್ದ ಜಾಗದಲ್ಲಿದಲ್ಲಿದ್ದ ತೆಂಗಿನ ಮರಗಳನ್ನು ಕಡಿಸಿದ ನಂತರ ಜನಪ್ರತಿನಿಧಿಯೊಬ್ಬರು ಇವರಿಗೆ ಮನೆ ಮಂಜೂರು ಮಾಡದೆ ಬೇರೆಯವರಿಗೆ ಮನೆ ಮಂಜೂರು ಮಾಡಿದ ಘಟನೆ ಕೂಡಿಗೆ ಗ್ರಾಮ ಪಂಚಾಯ್ತಿಯ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೂಡಿಗೆ ಗ್ರಾಮ ಪಂಚಾಯ್ತಿಗೆ ಸರ್ಕಾರದಿಂದ ನಿವೇಶನ ರಹಿತರಿಗೆ ಈಗಾಗಲೇ 20 ಮನೆಗಳು ಆಶ್ರಯ ಯೋಜನೆಯ ಅಡಿಯಲ್ಲಿ ಮಂಜೂರಾಗಿವೆ. ಮಂಜೂರಾದ ಮನೆಗಳನ್ನು ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು ಮಾಸಿಕ ಸಭೆಯಲ್ಲಿ ತೀರ್ಮಾನಿಸಿದಂತೆ ಪ್ರತಿ ಸದಸ್ಯರಿಗೆ ಎರಡು ಮತ್ತು ಮೂರು ಮನೆಗಳನ್ನು ಹಂಚಿಕೆ ಮಾಡಿಕೊಂಡಿದ್ದಾರೆ.
ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ವಸತಿ ರಹಿತರಾದ ಸಂಧ್ಯಾ ಸಂತೋಷ್ ಎಂಬವರು ಗ್ರಾಮ ಪಂಚಾಯಿತಿಗೆ ಮನೆಗಾಗಿ ಅರ್ಜಿ ಸಲ್ಲಿಸಿದ್ದರು. ಇವರಿಗೆ ಮನೆ ನೀಡುವದಾಗಿ ಜನಪ್ರತಿನಿಧಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಫಲಾನುಭವಿ ಮನೆ ಕಟ್ಟುವ ಜಾಗವನ್ನು ತೋರಿಸಿದ್ದಾರೆ. ಮನೆ ಸಿಗಬಹುದೆಂಬ ಆಸೆಯಿಂದ ಅಲ್ಪ ಸ್ವಲ್ಪ ಆ ಜಾಗದಲ್ಲಿ ನೆಟ್ಟು ಬೆಳೆಸಿದ್ದ ದೊಡ್ಡ ದೊಡ್ಡ ನಾಲ್ಕು ತೆಂಗಿನಮರಗಳನ್ನು ಜನಪ್ರತಿನಿಧಿಯವರಿಗೆ ತೋರಿಸಿದ ಬಳಿಕ ಕಡಿಸಲಾಗಿದೆ.
ಸಂಧ್ಯಾ ಸಂತೋಷ್ ದಂಪತಿಗಳು ತಮ್ಮ ಇಬ್ಬರು ಮಕ್ಕಳೊಂದಿಗೆ ಗೂಡು ಮನೆಯ ತರಹದ ಒಂದು ಪುಟ್ಟ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಮನೆ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಜನಪ್ರತಿನಿಧಿಗಳು ಮನೆಯ ಆಸೆಯಿಂದ ಮರಗಳನ್ನು ಕಡಿಸಿದ ನಂತರ ಆ ಜನಪ್ರತಿನಿಧಿಗಳು ಫಲಾನುಭವಿಗೆ ಮನೆ ನೀಡದೆ ಬೇರೆಯವರಿಗೆ ಮನೆ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಾಲ್ಕು ತೆಂಗಿನ ಮರಗಳಿಂದ ಬರುವ ಫಸಲಿನಲ್ಲಾದರೂ ಒಂದು ತಿಂಗಳ ಜೀವನ ಸಾಗಿಸುತ್ತಿದ್ದೆವು. ಆದರೆ ಈಗ ಫಲ ನೀಡುವ ತೆಂಗಿನಮರಗಳೂ ಇಲ್ಲ, ಇತ್ತ ಮನೆಯೂ ಇಲ್ಲದಂತಾಗಿದೆ ಎಂದು ಸಂಧ್ಯಾ ದಂಪತಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವಸತಿ ರಹಿತರಾಗಿರುವ ನಾವು ಇರಲು ಒಂದು ಮನೆ ಸಿಗಲಿದೆ ಎಂದು ಇದ್ದ ಫಸಲು ನೀಡುವ ಮರಗಳನ್ನು ಕಡಿದ ನಂತರ ಜನಪ್ರತಿನಿಧಿಗಳು ಮನೆಯನ್ನು ಬೇರೆಯವರಿಗೆ ಮಂಜೂರು ಮಾಡಿ ನಮಗೆ ಅನ್ಯಾಯ ವೆಸಗಿದ್ದಾರೆ. ನಮಗೆ ಮನೆ ಮಂಜೂರು ಮಾಡಬೇಕು ಎಂದು ವಸತಿ ರಹಿತರಾದ ಸಂಧ್ಯಾ ದಂಪತಿಗಳು ಕೂಡಿಗೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಶ್ವಿನಿ ಅವರನ್ನು ಮಾತನಾಡಿಸಿದಾಗ, ಈ ಸಾಲಿನಲ್ಲಿ ಗ್ರಾಮ ಪಂಚಾಯಿತಿಗೆ 20 ಮನೆಗಳು ಮಂಜೂರಾಗಿದ್ದು, 2 ಮನೆಗಳು ಅಲ್ಪಸಂಖ್ಯಾತರಿಗೆ, 18 ಮನೆಗಳನ್ನು ಇತರರಿಗೆ ನೀಡಲು ತೀರ್ಮಾನಿಸಲಾಗಿದೆ. ಗ್ರಾ.ಪಂ ಮಾಸಿಕ ಸಭೆಯಲ್ಲಿ ಸದಸ್ಯರು ತೀರ್ಮಾನಿಸಿದಂತೆ ಮನೆಗಳ ಹಂಚಿಕೆ ಕ್ರಮಗಳನ್ನು ಅವರವರ ತೀರ್ಮಾನಕ್ಕೆ ಬಿಡಲಾಗಿದೆ. ಅವರು ನೀಡಿದ ಹೆಸರುಗಳ ಅರ್ಜಿಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಇದೀಗ ಮಲ್ಲೇನಹಳ್ಳಿ ಗ್ರಾಮದ ಸಂಧ್ಯಾ ಅವರು ನೀಡಿರುವ ಅರ್ಜಿಯನ್ನು ಪರಿಶೀಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮಂಜೂರಾಗುವ ರಾಜೀವ್ ಗಾಂಧಿ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ ಬರುವ ಮನೆಗಳ ಪಟ್ಟಿಯಲ್ಲಿ ಇವರಿಗೆ ಮೊದಲ ಆದ್ಯತೆ ನೀಡಲಾಗುವದು ಎಂದು ತಿಳಿಸಿದ್ದಾರೆ.
-ಕೆ.ಕೆ.ನಾಗರಾಜಶೆಟ್ಟಿ.