ಮಡಿಕೇರಿ, ಜು. 15: ಕೊಡಗಿನಲ್ಲಿ ಮುಂಗಾರು ವೇಳೆ ರೈತನ ನಿರೀಕ್ಷೆಯ ಮಳೆಗಾಲದಲ್ಲಿ ಪ್ರಸಕ್ತ ಬರಗಾಲದ ಛಾಯೆ ಗೋಚರಿಸುವಂತಾಗಿದ್ದು; ಕಳೆದ ವರ್ಷ ತೀವ್ರಗೊಂಡಿರುವ ವರುಣನ ಅವಕೃಪೆ ಪ್ರಾಕೃತಿಕ ವಿಕೋಪಕ್ಕೆ ಎಡೆಯಾಗಿದ್ದರೆ; ಈ ವರ್ಷ ಮತ್ತಷ್ಟು ಆತಂಕದೊಂದಿಗೆ ಅನ್ನದಾತನ ನೆಮ್ಮದಿ ಕೆಡಿಸಿದೆ. ಕಾರಣ ಕಳೆದ ವರ್ಷ ಈ ಅವಧಿಗೆ ನೂರು ಇಂಚುಗಳಿಗೂ ಅಧಿಕ ಮಳೆಯಾಗಿದ್ದ ಪ್ರದೇಶಗಳಲ್ಲಿ ಪ್ರಸಕ್ತ ಅವಧಿಗೆ ಸರಾಸರಿ 25 ರಿಂದ 30 ಇಂಚು ಮಳೆಯಾಗಿದೆ ಎಂದು ಗ್ರಾಮೀಣ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.ದಕ್ಷಿಣ ಕೊಡಗಿನ ಬಿರುನಾಣಿ ವ್ಯಾಪ್ತಿಯಲ್ಲಿ ಮಾತ್ರ ಸುಮಾರು 70 ಇಂಚು ಮಳೆಯಾಗಿದೆ. ತಲಕಾವೇರಿ - ಭಾಗಮಂಡಲ - ಸಂಪಾಜೆ - ಶಾಂತಳ್ಳಿ ವ್ಯಾಪ್ತಿಯಲ್ಲಿ ಆಶಾದಾಯಕ ಮಳೆಯಾದರೆ; ಇತರೆಡೆಗಳಲ್ಲಿ ಸಾಧಾರಣ ಮಳೆ ದಾಖಲಾಗಿದ್ದು; ಕೃಷಿ ಭೂಮಿ ನೀರಿಲ್ಲದೆ, ಬಿತ್ತನೆ ಹಾಗೂ ನಾಟಿ ಕಾರ್ಯಕ್ಕೆ ತೊಡಕಾಗಿದೆ. ಹೀಗಾಗಿ ಗದ್ದೆ ಬಯಲಿನ ಬಹು ಭಾಗಗಳಲ್ಲಿ ಈಗಷ್ಟೇ ರೈತರು ಸಸಿಮಡಿಗೆ ಬಿತ್ತನೆಯಲ್ಲಿ ತೊಡಗಿದ್ದಾರೆ. ಅದು ಶೀತಗದ್ದೆಗಳಲ್ಲಿ ಮಾತ್ರ ಸಾಧ್ಯವಾಗಿದೆ. ಇನ್ನು ಮಾನಿ ಗದ್ದೆಗಳಲ್ಲಿ ಉಳುಮೆ ಮಾಡಿದ್ದರೂ; ನೀರಿಲ್ಲದೆ; ಕೃಷಿ ಕಾರ್ಯಕ್ಕೆ ತೀವ್ರ ಹಿನ್ನೆಡೆಯಾಗಿದ್ದು; ಕೃಷಿ ಚಟುವಟಿಕೆಯಲ್ಲಿ ಅನ್ನದಾತನು ಆತಂಕದೊಂದಿಗೆ ಭವಿಷ್ಯದ ಚಿಂತೆಯಲ್ಲಿ ಬಳಲುವಂತಾಗಿದೆ.
ಇಲಾಖೆ ಮಾಹಿತಿ : ಕೊಡಗಿನ ಮಟ್ಟಿಗೆ ಕೃಷಿ ಇಲಾಖೆಯ ಪ್ರಕಾರ ಈಗಿನ ಸನ್ನಿವೇಶದಲ್ಲಿ ಶೇ. 20 ರಷ್ಟು ಮಾತ್ರ ಸಸಿಮಡಿ ಬಿತ್ತನೆಯಲ್ಲಿ ಪ್ರಗತಿಯಾಗಿದೆ. ಅಲ್ಲದೆ ಉತ್ತರಕೊಡಗಿನ ಗ್ರಾಮಾಂತರದ ಅಲ್ಲಲ್ಲಿ ಸುಮಾರು 50 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತದ ನಾಟಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೆ ಸೋಮವಾರಪೇಟೆ ತಾಲೂಕಿನ ಬಯಲು ಸೀಮೆಯ ಅಲ್ಲಲ್ಲಿ 2780 ಹೆಕ್ಟೇರ್ ಮಾತ್ರ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ. 4000 ಹೆಕ್ಟೇರ್ ಪೈಕಿ ಮಳೆಯ ವ್ಯತ್ಯಾಸದಿಂದ ಈ ಕೃಷಿಗೂ ಹಿನ್ನೆಡೆ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸಕ್ತ ಎದುರಾಗಿರುವ ಮಳೆಯ ವ್ಯತ್ಯಾಸದಿಂದ ಮಡಿಕೇರಿ ತಾಲೂಕಿನಲ್ಲಿ 6500 ಹೆಕ್ಟೇರ್ ನಾಟಿ ಕೃಷಿಯ ಪೈಕಿ; ಕೇವಲ 50 ಹೆಕ್ಟೇರ್ ಭತ್ತ ನಾಟಿ ಹೊರತು ನಿರೀಕ್ಷಿತ ಪ್ರಗತಿಯಾಗಿಲ್ಲವೆಂದು ವಿವರಿಸಿದ್ದಾರೆ.
ವೀರಾಜಪೇಟೆ : ಅಂತೆಯೇ ವೀರಾಜಪೇಟೆ ತಾಲೂಕಿನಲ್ಲಿ 14 ಸಾವಿರ ಹೆಕ್ಟೇರ್ ಭತ್ತದ ನಾಟಿಯ ಗುರಿ ಹೊಂದಿದ್ದು; ಈಗಿನ ವಾತಾವರಣದಲ್ಲಿ ಕೇವಲ 465 ಹೆಕ್ಟೇರ್ ಪ್ರದೇಶಕ್ಕೆ
(ಮೊದಲ ಪುಟದಿಂದ) ಆಗುವಷ್ಟು ಮಾತ್ರ ರೈತರು ಬಿತ್ತನೆಯೊಂದಿಗೆ ಸಸಿಮಡಿ ಸಿದ್ಧಗೊಳಿಸಿರುವ ವರದಿ ಲಭಿಸಿದೆ. ಬಿಟ್ಟಂಗಾಲ ವ್ಯಾಪ್ತಿಯಲ್ಲಿ ಮಾತ್ರ ಈ ತಾಲೂಕಿನ ಮಟ್ಟಿಗೆ ನಾಟಿಗೆ ತಯಾರಿ ನಡೆದಿದ್ದು; ಇತರೆಡೆ ಬಿತ್ತನೆ ಕಂಡು ಬಂದಿದೆ.
ಸೋಮವಾರಪೇಟೆ : ಸೋಮವಾರಪೇಟೆ ತಾಲೂಕಿನ ಗರ್ವಾಲೆ ಹಾಗೂ ಶಾಂತಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಸಿಮಡಿ ಸಿದ್ಧಗೊಂಡು ನಾಟಿಕಾರ್ಯಕ್ಕೆ ಚಾಲನೆ ದೊರೆತಿದೆ; ಉಳಿದಂತೆ ಬಯಲು ಸೀಮೆಯಲ್ಲಿ ಜೋಳ ಬಿತ್ತನೆ ಹೊರತು ಕೃಷಿ ಚಟುವಟಿಕೆಗೆ ಹಿನ್ನೆಡೆ ಎದುರಾಗಿದೆ. ಈ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಭತ್ತದ ಪೈಕಿ 5260 ಹೆಕ್ಟೇರ್ ಕೃಷಿಗೆ ತಯಾರಿ ಕಂಡು ಬಂದಿದೆ.
ಮಡಿಕೇರಿ : ಮಡಿಕೇರಿ ತಾಲೂಕಿನಲ್ಲಿ ವರ್ಷಂಪ್ರತಿ ಕೃಷಿ ಚಟುವಟಿಕೆಯಲ್ಲಿ ಆಶಾದಾಯಕ ಪ್ರಗತಿ ಕಂಡು ಬರುತ್ತಿದ್ದರೂ; ಈ ಸಾಲಿನ ಮಳೆಯಲ್ಲಿ ಉಂಟಾಗಿರುವ ವ್ಯತ್ಯಾಸದಿಂದ ನಿರೀಕ್ಷಿತ ಪ್ರಗತಿ ಕಂಡು ಬಂದಿಲ್ಲ. ಬದಲಾಗಿ 1300 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯಕ್ಕೆ ಸಿದ್ಧತೆ ಎದುರಾಗಿದ್ದು; ಅನೇಕ ಕಡೆಗಳಲ್ಲಿ ಕಳೆದ ವರ್ಷದ ಪ್ರಾಕೃತಿಕ ದುರಂತದಿಂದ ನಾಟಿಗೆ ಹಿನ್ನಡೆಯಾಗಿದೆ.
ಒಟ್ಟಿನಲ್ಲಿ ಪ್ರಸಕ್ತ ಮುಂಗಾರುವಿನಲ್ಲಿ ಕೃಷಿ ಇಲಾಖೆಯು 34500 ಹೆಕ್ಟೇರ್ ಭತ್ತದೊಂದಿಗೆ ಮುಸುಕಿನ ಜೋಳ ಕೃಷಿಯ ನಿರೀಕ್ಷೆ ಹೊಂದಿದ್ದು; ಸದೃಢ ಪರಿಸ್ಥಿತಿಯಲ್ಲಿ ಶೇ. 50 ರಷ್ಟು ಮಾತ್ರ ಸಾಧನೆ ಕಂಡು ಬಂದಿದೆ ಎಂದು ಸಂಬಂಧಿಸಿದ ಇಲಾಖೆಯ ಮೂಲಗಳಿಂದ ಗೊತ್ತಾಗಿದೆ.
ಮಳೆ ವ್ಯತ್ಯಾಸ : ಕಳೆದ ವರ್ಷದ ಪ್ರಾಕೃತಿಕ ವಿಕೋಪ ಹೊರತಾಗಿ ನೋಡಿದರೆ; ಕೊಡಗಿನಲ್ಲಿ ಸಾಮಾನ್ಯವಾಗಿ ಜೂನ್, ಜುಲೈ ತಿಂಗಳಿನಲ್ಲಿ ಆಶಾದಾಯಕ ಮಳೆಯಾಗಿ ರೈತನ ಬದುಕು ಹಸನುಗೊಳ್ಳುವ ರೀತಿಯಲ್ಲಿ ಕೃಷಿ ಭೂಮಿ ಮುಂಗಾರು ಬೆಳೆಗೆ ಪರಿಪಕ್ವವಿರುತ್ತಿತ್ತು. ಈ ಸಾಲಿನಲ್ಲಿ ದಿನಗಳು ಉರುಳಿದಂತೆ ಎಲ್ಲ ನಿರೀಕ್ಷೆಗಳು ಹುಸಿಗೊಳ್ಳುವ ಸನ್ನಿವೇಶದೊಂದಿಗೆ ಅನ್ನದಾತನಲ್ಲಿ ಆತಂಕ ಮನೆ ಮಾಡಿದೆ.
ಇಲಾಖೆಯಿಂದ ನಾಟಿ
ಕೂಡಿಗೆ: ಕೂಡಿಗೆಯ ಕೃಷಿ ಇಲಾಖೆಯ ಗದ್ದೆಗಳಲ್ಲಿ ಭತ್ತದ ನಾಟಿ ಕಾರ್ಯ ಚುರುಕುಗೊಂಡಿದೆ. ಜಿಲ್ಲೆಯಲ್ಲಿ ಮಳೆಯು ಕ್ಷೀಣಗೊಂಡಿದ್ದರೂ ಮಳೆಯ ನೀರಿಲ್ಲದೆ, ಸಮೀಪದಲ್ಲೇ ಹರಿಯುವ ಹಾರಂಗಿ ನದಿಯಿಂದ ಪಂಪ್ ಸೆಟ್ ಮೂಲಕ ನೀರನ್ನು ಹರಿಸಿಕೊಂಡು ನಾಟಿ ಕಾರ್ಯದಲ್ಲಿ ಇಲಾಖೆಯು ತೊಡಗಿದೆ.
ಮಳೆಯು ಕ್ಷೀಣಗೊಂಡಿದ್ದು, ಈ ವ್ಯಾಪ್ತಿಯಲ್ಲಿ ಭತ್ತ ಬಿತ್ತನೆ ಬೀಜ ಹಾಕುವದು, ಮಡಿ ತಯಾರಿಸುವ ಕಾರ್ಯ ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ. ಹಾರಂಗಿ ಜಲಾನಯನ ಪ್ರದೇಶದಲ್ಲಿ ಇನ್ನೂ ಸಸಿ ಮಡಿಗಳ ಬಿತ್ತನೆ ಬೀಜ ಹಾಕದೆ ಸಹಕಾರ ಸಂಘಗಳಲ್ಲಿ ತೆಗೆದುಕೊಂಡಿರುವ ಬಿತ್ತನೆ ಬೀಜಗಳು ಮನೆಗಳಲ್ಲಿಯೇ ಬಾಕಿಯಾಗಿವೆ. ರೈತರು ಸಸಿ ಮಡಿಗಳಿಗಾದರೂ ಸಣ್ಣ ಪ್ರಮಾಣದಲ್ಲಿ ಹಾರಂಗಿ ಅಣೆಕಟ್ಟೆಯಿಂದ ನಾಲೆಗಳ ಮೂಲಕ ನೀರನ್ನು ಹರಿಸಲು ಒತ್ತಾಯಿಸಿದರೂ, ನೀರನ್ನು ಹರಿಸುತ್ತಿಲ್ಲ. ಆದರೆ, ಕೃಷಿ ಇಲಾಖೆಯವರು ಕರ್ನಾಟಕ ರಾಜ್ಯ ಬೀಜೋತ್ಪಾದನ ಕೇಂದ್ರದ ಮೂಲಕ ಈ ಸಾಲಿನಲ್ಲಿ ತುಂಗಾ ತಳಿಗೆ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಬೀಜೋತ್ಪಾದನೆಗೆ ಅನುಕೂಲವಾಗುವಂತೆ ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಸಂಬಂಧ ಮಾತನಾಡಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹೆಚ್.ಎಸ್.ರಾಜಶೇಖರ್ ಅವರು, ತುಂಗಾ ಭತ್ತದ ತಳಿಗೆ ಬೇಡಿಕೆ ಹೆಚ್ಚಿದ್ದು, ಈ ತಳಿಯ ಬೀಜೋತ್ಪಾದನೆಗೆ ಒತ್ತು ನೀಡಲು ಸಸಿಮಡಿಗಳನ್ನು ಕೂಡಿಗೆ ಕೃಷಿ ಇಲಾಖೆಯ 20 ಎಕರೆ ಪ್ರದೇಶದಲ್ಲಿ ನಾಟಿ ಮಾಡಲಾಗುತ್ತಿದೆ ಎಂದರು. ಈ ಸಂದರ್ಭ ಕೃಷಿ ಇಲಾಖೆಯ ಅಧೀಕ್ಷಕ ಮಾಧವರಾವ್ ಮತ್ತು ಸಿಬ್ಬಂದಿ ವರ್ಗ ಇದ್ದರು.