ಶನಿವಾರಸಂತೆ, ಜು. 14: ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಶನಿವಾರ ಶುಂಠಿ ಸಂತೆ ಆರಂಭವಾಗಿದೆ. ಮುಂಜಾನೆಯೇ ಸುತ್ತಮುತ್ತಲಿನ ಗ್ರಾಮಗಳ ರೈತರು ತಾವು ಬೆಳೆದ 300 ಚೀಲಗಳಷ್ಟು ಶುಂಠಿಯನ್ನು ಮಾರಾಟಕ್ಕೆ ತಂದಿದ್ದರು.

ಮೈಸೂರು, ಬೆಂಗಳೂರು, ಮುಂಬಯಿ, ತುಮಕೂರು ಇತರ ನಗರಗಳಿಂದ ಬಂದಿದ್ದ ವ್ಯಾಪಾರಿಗಳ ಬಿರುಸಿನ ವ್ಯಾಪಾರ ಆರಂಭಿಸಿ ರೈತರಿಂದ ಗದ್ದೆ ಶುಂಠಿಯನ್ನು 1 ಕೆ.ಜಿ.ಗೆ ರೂ. 75ರಂತೆ ಹಾಗೂ ತೋಟ ಶುಂಠಿಯನ್ನು 1 ಕೆ.ಜಿ.ಗೆ ರೂ. 60ರಂತೆ ಖರೀದಿಸಿದರು. 60 ಕೆ.ಜಿ. ಗದ್ದೆ ಶುಂಠಿ ತುಂಬಿದ ಚೀಲಕ್ಕೆ ರೂ.4,500-5000 ಹಾಗೂ ತೋಟ ಶುಂಠಿ ತುಂಬಿದ ಚೀಲಕ್ಕೆ ರೂ.4200 ದೊರೆತು ರೈತರು ಸಂತಸಪಟ್ಟರು. ವ್ಯಾಪಾರವೇನೋ ನಡೆಯಿತು. ಆದರೆ ಸಂಜೆ ಮಾರುಕಟ್ಟೆಯಲ್ಲಿ ಗ್ರಾಮ ಪಂಚಾಯಿತಿ ಸ್ವಚ್ಛತೆ ಕಾಪಾಡುತ್ತಿಲ್ಲ ಎಂದು ವ್ಯಾಪಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹಿಸಿದರು.