ರೂ. 42 ಲಕ್ಷ ಅನುದಾನ
ಕೂಡಿಗೆ, ಜು. 14: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ತೋಟಗಾರಿಕಾ ಇಲಾಖೆಯು ಕಳೆದ 25 ವರ್ಷಗಳಿಂದ ಯಾವದೇ ಪ್ರಗತಿಯಿಲ್ಲದೆ, ನೆನೆಗುದಿಗೆ ಬಿದ್ದಿತ್ತು. ಇದೀಗ ತೋಟಗಾರಿಕಾ ಇಲಾಖೆಯ ಅನುದಾನವನ್ನು ಬಳಸಿಕೊಂಡು 70 ಎಕರೆ ಪ್ರದೇಶ ಅಭಿವೃದ್ಧಿಯತ್ತ ಸಾಗುತ್ತಿದೆ.
ತೋಟಗಾರಿಕಾ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಇದೀಗ ತೆಂಗು, ಸಪೋಟ, ಸೀಬೆ, ಮೆಣಸು, ಕಿತ್ತಳೆ ಗಿಡಗಳನ್ನು ಹೊಸದಾಗಿ ನೆಡುವದರ ಮೂಲಕ ಮತ್ತು ಹೊಸ ಹೊಸ ತಳಿಯ ಸಸಿಗಳ ನೆಡುವಿಕೆ, ಹನಿ ನೀರಾವರಿ ಪದ್ಧತಿ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. 2018-19ನೇ ಸಾಲಿನಲ್ಲಿ 2.5 ಲಕ್ಷ ಸಸಿ ಅಭಿವೃದ್ಧಿ ಯೋಜನೆಯಡಿ ಸಸಿಗಳನ್ನು ಬೆಳೆಸಲಾಗಿದೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ ಹಾಗೂ ಜಿಲ್ಲಾ ತೋಟಗಾರಿಕಾ ಇಲಾಖೆಯ ಮುಖೇನ ಜಿಲ್ಲೆಯ ಮತ್ತು ಹೊರ ಜಿಲ್ಲೆಗಳ ರೈತರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ.
ಈ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಯಾವದೇ ರೀತಿಯ ಅನುದಾನವನ್ನು ಪಡೆದಿಲ್ಲ. ಹಾಗಾಗಿ ಈ ಕ್ಷೇತ್ರದ ಅಭಿವೃದ್ಧಿ ಕಂಡುಬಂದಿಲ್ಲ. ಹಾರಂಗಿ ತೋಟಗಾರಿಕಾ ಸಸ್ಯಕ್ಷೇತ್ರದಲ್ಲಿ 2017-18ನೇ ಸಾಲಿನಲ್ಲಿ ಇಲಾಖೆಯ ವತಿಯಿಂದ ವಿವಿಧ ಯೋಜನೆಗಳಿಗೆ ರೂ. 42 ಲಕ್ಷ ತೋಟಗಾರಿಕೆ ನಿರ್ವಹಣೆಗೆ ಬಿಡುಗಡೆಯಾಗಿದೆ. ಇದರನ್ವಯ ಇದೀಗ ಹಾರಂಗಿ ತೋಟಗಾರಿಕಾ ಇಲಾಖೆಯು ಪ್ರವಾಸಿ ಕೇಂದ್ರದ ಮಾದರಿಯಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ.
47 ಎಕರೆ ಪ್ರದೇಶದಲ್ಲಿ ವಿವಿಧ ಸಸಿಗಳನ್ನು ನೆಡುವ ಮೂಲಕ ಆಯಾ ಮಣ್ಣಿನ ಅನುಗುಣವಾಗಿ ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿ ಸಸ್ಯ ಅಭಿವೃದ್ಧಿಗೆ ಉತ್ತೇಜನ ನೀಡುವ ರೀತಿಯಲ್ಲಿ ಪ್ರಗತಿಹೊಂದುತ್ತಿದೆ. ಕಳೆದ ಹತ್ತು ವರ್ಷಗಳಿಂದಲೂ ಅತ್ತೂರು ಅರಣ್ಯ ಪ್ರದೇಶಗಳಿಂದ ಕಾಡಾನೆಗಳು ದಾಳಿ ಮಾಡಿ ತೋಟಗಾರಿಕಾ ಇಲಾಖೆಯ 10 ಎಕರೆ ಪ್ರದೇಶದಲ್ಲಿ ಬೆಳೆಸಲಾಗಿದ್ದ ಮಾವು, ತೆಂಗುಗಳನ್ನು ಹಾನಿಮಾಡುತ್ತಿದ್ದವು. ಅಲ್ಲದೆ, ಬೇಸಗೆಯಲ್ಲಿ ಬೆಂಕಿ ಬಿದ್ದು ಹೆಚ್ಚಿನ ತೆಂಗಿನ ಮರಗಳು ಮತ್ತು ಮಾವಿನ ಮರಗಳು ಹಾನಿಯಾಗಿ ಮೈದಾನದಂತಾಗಿತ್ತು. ಇದೀಗ ಆ 10 ಎಕರೆ ಪ್ರದೇಶವೂ ಸೇರಿದಂತೆ ಒಟ್ಟು 70 ಎಕರೆ ತೋಟಗಾರಿಕಾ ಇಲಾಖೆಯ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ತೋಟಗಾರಿಕಾ ಇಲಾಖೆಗೆ ಕಾಯಕಲ್ಪ ದೊರಕಿದಂತಾಗಿದೆ.
ಈ ಕೇಂದ್ರದಲ್ಲಿ ನೂತನವಾಗಿ ವಿಯೆಟ್ನಾಂನ ತಾಂತ್ರಿಕತೆಯ ಪದ್ಧತಿಯಲ್ಲಿ ಒಂದು ಎಕರೆ ಪ್ರದೇಶವನ್ನು ಗುರುತಿಸಿಕೊಂಡು ಮೆಣಸು ಬೆಳೆಸಲು ಮುಂದಾಗಿದೆ. ವಿಯೆಟ್ನಾಂ ಪದ್ಧತಿ ಎಂದರೆ ಕಾಳುಮೆಣಸು ಬಳ್ಳಿ ಹಬ್ಬಲು ಎರಡು ಮೀಟರ್ ಅಂತರಕ್ಕೆ ಸಿಮೆಂಟ್ ಕಂಬಗಳನ್ನು ನೆಡುವದು, ಕಂಬದ ಸುತ್ತಲು ನಾಲ್ಕು ಮೆಣಸು ಬಳ್ಳಿಯ ಕಡ್ಡಿಗಳನ್ನು ನೆಟ್ಟು, ಬೆಳೆದ ಮೆಣಸಿನ ಬಳ್ಳಿಯು ಸಿಮೆಂಟ್ ಕಂಬದ ಮೇಲೆ ಹಬ್ಬಿ, ಚಪ್ಪರದ ಮಾದರಿಯಲ್ಲಿ ಆಗುವದು. ಅಲ್ಲದೆ, ಇದರಲ್ಲಿ ಬೆಳೆದ ಬಳ್ಳಿಗಳನ್ನು ಕಟಾವು ಮಾಡಿ ಮೆಣಸಿನ ಬಳ್ಳಿಗಳನ್ನು ಗಿಡ ಮಾಡಲು ಉಪಯೋಗಿಸಿಕೊಳ್ಳಲಾಗುತ್ತಿದೆ. ಅದಲ್ಲದೆ ರೈತರಿಗೂ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ಈ ಯೋಜನೆಯ ಮೂಲಕ ಮೆಣಸು ಬಳ್ಳಿಯನ್ನು ಬೆಳೆಯಲಾಗುತ್ತಿದೆ. ಇದೇ ರೀತಿಯ ನೂತನ ಮಾದರಿಯಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯ ಅಡಿಯಲ್ಲಿ ವಿವಿಧ ಸಸ್ಯಗಳನ್ನು ಅಭಿವೃದ್ಧಿಪಡಿಸಲು ಹೊಸ ಯೋಜನೆಗಳನ್ನು ಈ 70 ಎಕರೆ ಪ್ರದೇಶದಲ್ಲಿ ರೂಪಿಸಲು ನಿರ್ದೇಶಕರು ಹಾಗೂ ಸಿಬ್ಬಂದಿ ಉತ್ಸುಕರಾಗಿದ್ದಾರೆ.
ವಿಶೇಷವಾಗಿ ಹಾರಂಗಿ ತೋಟಗಾರಿಕಾ ಪ್ರದೇಶಕ್ಕೆ ಸಮೀಪದ ಅತ್ತೂರು ಮತ್ತು ಆನೆಕಾಡು ಮೀಸಲು ಅರಣ್ಯಗಳಿಂದ ಕಾಡಾನೆಗಳು ದಂಡಾಗಿ ದಾಳಿ ಮಾಡುತ್ತಿದ್ದು ಸಾಮಾನ್ಯವಾಗಿತ್ತು. ಆದರೆ ಈಗ ಸುಮಾರು 40 ಎಕರೆ ಪ್ರದೇಶದ ಸುತ್ತಲೂ ಆನೆ ಕಂದಕಗಳನ್ನು ತೋಡಲಾಗಿದೆ. ಅಲ್ಲದೆ, ಆನೆಕಂದಕದ ಸಮೀಪದ ಸೋಲಾರ್ ತಂತಿ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದ ಕಳೆದ 3 ವರ್ಷಗಳಿಂದಲೂ ಕಾಡಾನೆಗಳು ತೋಟಗಾರಿಕಾ ಕ್ಷೇತ್ರಕ್ಕೆ ಪ್ರವೇಶ ಮಾಡಲಾಗಿಲ್ಲ.
ಕ್ಷೇತ್ರದಲ್ಲಿ ಮೂರು ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದೂ, ನೀರು ಸಂಗ್ರಹವಾಗಲು ಮತ್ತು ಸದುಪಯೋಗಕ್ಕೆ ಕೃಷಿ ಹೊಂಡವನ್ನು ತೆಗೆಯಲಾಗಿದೆ. ಈ ಕೃಷಿ ಹೊಂಡಕ್ಕೆ ರಾಷ್ಟ್ರ ಮಟ್ಟದ ನೂತನ ತಾಂತ್ರೀಕತೆಯಲ್ಲಿ ನೀರು ಸಂಗ್ರಹದ ಜೊತೆಗೆ 10 ಹೆಚ್ಪಿ ಮೋಟಾರ್ ಅನ್ನು ಇಟ್ಟು 65 ಸಾವಿರ ಲೀಟರ್ ನೀರು ಎರಡು ಗಂಟೆಗೂ ಹೆಚ್ಚಾಗಿ ಏಕ ಕಾಲದಲ್ಲಿ ಸಸಿಗಳಿಗೆ ರವಾನೆಯಾಗುತ್ತಿದೆ. ಇದರಿಂದ ಈ ಕ್ಷೇತ್ರದಲ್ಲಿ ಬೆಳೆಸಲಾಗುತ್ತಿರುವ ತೆಂಗು, ಮಾವು, ಸಪೋಟ, ಕಿತ್ತಲೆ, ಕಾಳುಮೆಣಸು, ಸೀಬೆ, ಬೆಣ್ಣೆಹಣ್ಣು, ಲಕ್ಷ್ಮಣಫಲ, ಕೋಕಂ ಗಿಡಗಳಿಗೆ ಸಮರ್ಪಕವಾಗಿ ನೀರು ಹರಿಸುವಿಕೆಗೆ ವ್ಯವಸ್ಥೆ ಮಾಡಲಾಗಿದೆ. 40 ಎಕರೆ ಪ್ರದೇಶವು ಸಸ್ಯ ಕ್ಷೇತ್ರವಾಗಿದ್ದು, ಇದರ ವೀಕ್ಷಣೆಗೆ ಸಫಾರಿಯ ರೀತಿಯಲ್ಲಿ ವಾಹನದಲ್ಲೇ ಸಾಗಿ ವೀಕ್ಷಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ವಿದ್ಯುತ್ ಸಮಸ್ಯೆಯುಂಟಾದರೆ ನೈಸರ್ಗಿಕ ಸೋಲಾರ್ ಸಂಗ್ರಹದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಈ ಕೇಂದ್ರಕ್ಕಾಗಿ 63 ಕೆವಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಅಳವಡಿಸಲಾಗಿದೆ. ಅಭಿವೃದ್ಧಿಗೆ ಪೂರಕವಾಗಿ ಮುಂದಿನ ಯೋಜನೆಗೆ ಅನುಕೂಲವಾಗುವಂತೆ ಸಸಿಗಳಿಗೆ ಬೋರ್ವೆಲ್ಗಳಿಂದ ನೀರಿನ ಸರಬರಾಜಿಗೆ ಯಾವದೇ ರೀತಿಯ ತೊಂದರೆಯಾಗದಂತೆ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜ್ ಮುತುವರ್ಜಿ ವಹಿಸಿದ್ದಾರೆ. ಕ್ಷೇತ್ರದಲ್ಲಿ 2018-19ನೇ ಸಾಲಿನಲ್ಲಿ 2.5 ಲಕ್ಷ ಕಾಳುಮೆಣಸು ಬಳ್ಳಿಯಲ್ಲಿ ಜಿಲ್ಲಾ ಪಂಚಾಯಿತಿಯ ನಿಯಮಾನುಸಾರ ರೈತರಿಗೆ ವಿತರಿಸಲಾಗಿದ್ದು, ಇದರಿಂದ ಬಂದ ರೂ. 24 ಲಕ್ಷ ಹಣವನ್ನು ಸರ್ಕಾರಕ್ಕೆ ಸಂದಾಯ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಇದೀಗ ರಾಜ್ಯದಲ್ಲಿ ತೆಂಗು ಬೆಳೆಗೆ ಹೆಸರುವಾಸಿಯಾದ ಚನ್ನರಾಯಪಟ್ಟಣದ ಮಾದರಿಯಲ್ಲಿ ಹೊಸ ತಳಿಯ ತೆಂಗಿನ ಗಿಡಗಳನ್ನು ನರ್ಸರಿ ಮಾದರಿಯಲ್ಲಿ ಬೆಳೆಸಲಾಗಿದೆ. ಈ ಕ್ಷೇತ್ರಕ್ಕೂ ತೆಂಗಿನ ಗಿಡಗಳನ್ನು ಹೊಸ ಪದ್ಧತಿಯ ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ಬೆಳೆಸಲು ಗಿಡಗಳನ್ನು ನೆಡಲಾಗಿದೆ. ಇವುಗಳ ಜೊತೆಗೆ ಕಡಿಮೆ ಮಟ್ಟದಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರವನ್ನು ಹಾಕಿ ಸಸಿಗಳನ್ನು ಬೆಳೆಸಲಾಗುತ್ತಿದೆ. ಇದೀಗ ಹಾರಂಗಿ ತೋಟಗಾರಿಕಾ ಕ್ಷೇತ್ರವನ್ನು ಮಾದರಿ ತೋಟಗಾರಿಕಾ ಕ್ಷೇತ್ರವನ್ನಾಗಿ ಮಾಡಲು ಸಹಾಯಕ ನಿರ್ದೇಶಕ ವರದರಾಜ್ ಪಣತೊಟ್ಟಿದ್ದಾರೆ.