ನಿನ್ನೆ ಮೊನ್ನೆಯಂತೆ ಪ್ರಕೃತಿ ವಿಕೋಪ ಸಂಭವಿಸಿ ವರ್ಷ ಸಮೀಪಿಸುತ್ತಿದೆ. ಕಳೆದ ಮಳೆಗಾಲ ಊಹಿಸಲು ಸಾಧ್ಯವಿಲ್ಲದ ಆತಂಕಕಾರಿ ಮಳೆಗಾಲವಾಗಿತ್ತು. ನೋಡನೋಡುತ್ತಿದ್ದಂತೆಯೇ ತನ್ನವರನ್ನು ಕಳೆದುಕೊಂಡು ಸಾಕು ಪ್ರಾಣಿಗಳನ್ನು ಕಳೆದುಕೊಂಡು ಬೆವರು ಸುರಿಸಿ ಕಟ್ಟಿಸಿದ ಮನೆ, ತೋಟ, ಗದ್ದೆಗಳನ್ನೂ ಕಳೆದುಕೊಂಡು ಕಣ್ಣೀರು ಮಾಸುವ ಮುನ್ನವೇ ಮತ್ತೆ ಮಳೆಗಾಲದ ಸಮಯ ಬಂದಿದೆ. ಜನರಲ್ಲಿ ಆತಂಕ ಮನೆ ಮಾಡಿದೆ. ಎಲ್ಲರ ಬಾಯಲ್ಲೂ ಕಳೆದ ವರ್ಷದ ಮಳೆಗಾಲ ಬೇಡ ವರುಣ ದೇವ ದಯೆ ತೋರು ಎಂಬ ಕೋರಿಕೆ ಕೇಳಿ ಬರುತ್ತಿದೆ. ಮರಗಳನ್ನು ಬೆಳೆಸಿ, ಹಸಿರನ್ನು ಉಳಿಸಿ ಎಂಬ ಕೂಗು ದೊಡ್ಡ ದೊಡ್ಡ ಶ್ರೀಮಂತರಿಗೆ ಅರಣ್ಯಾಧಿಕಾರಿಗಳಿಗೆ ಬಹುಷಃ ಕೇಳಿರಲಿಕ್ಕಿಲ್ಲ. ಏಕೆಂದರೆ ಮೊನ್ನೆ ತಾನೆ ಎಷ್ಟೋ ಮರಗಳ ಹನನವಾಗಿದೆ.
ಹಿಂದೊಮ್ಮೆ ಹಿರಿಯ ರಾಜಕಾರಣಿ ಒಬ್ಬರು ದಯವಿಟ್ಟು ತಮ್ಮ ಗದ್ದೆ - ತೋಟಗಳನ್ನು ಹೊರಗಿನವರಿಗೆ ಮಾರದಿರಿ ಮುಂದೊಂದು ದಿನ ತೊಂದರೆ ಅನುಭವಿಸಬೇಕಾಗುವದೆಂಬ ಮನವಿ ಮಾಡಿಕೊಂಡಿದ್ದು ಬಹುಷಃ ಪತ್ರಿಕೆಗಳಿಗೆ ಮಾತ್ರ ಮೀಸಲಾಯಿತೇ...? ಕೊಡಗನ್ನು ರಕ್ಷಿಸುತ್ತಿದ್ದ ಕಾವೇರಮ್ಮಳಿಗೆ ಮುನಿಸು ಉಂಟಾಯಿತೆ? ಇದು ಇಲ್ಲಿ ಪ್ರಶ್ನಾರ್ಹ. ಕಳೆದ ವರ್ಷದ ಛಾಯೆ ಇನ್ನೂ ಹಚ್ಚ ಹಸಿರು. ಕೊಡಗಿನ ಸಂತ್ರಸ್ತರು ಎಂದಾಕ್ಷಣ ಪರಿಹಾರದ ಮಹಾಪೂರ ಹರಿದು ಬಂತು. ಆದರೆ ಅದು ಎಷ್ಟು ಮಂದಿಗೆ ತಲಪಿತು ಎನ್ನುವದು ಬಹುಷಃ ಇಂದಿಗೂ ಅರ್ಥವಾಗದ ಮಾತು.
ಕೊಡಗು ನಮ್ಮ ಹಿರಿಯರ ಕಾಲದಲ್ಲಿ ಇದ್ದಂತೆ ಈಗ ಇಲ್ಲ. ಕಾಲ ಬದಲಾದಂತೆ ಬದಲಾಗುತ್ತಾ ಮುಂದುವರಿದಿದೆ. ಎಲ್ಲ ಅನುಕೂಲತೆಯನ್ನು ಮಾಡಿಕೊಂಡು ಬಂದರೂ ಎಂದೂ ಪ್ರಾಕೃತಿಕ ಸೌಂದರ್ಯವನ್ನು ಹಾಳು ಮಾಡಿಕೊಂಡಿರಲಿಲ್ಲ. ಆದರೀಗ ದುಡ್ಡಿನ ವ್ಯಾಮೋಹ ತುಳುಕಾಡುತ್ತಿದೆ. ಅತಿ ಆದರೆ ಅಮೃತವೂ ವಿಷವೇ. ದುಡ್ಡಿನ ವ್ಯಾಮೋಹಕ್ಕೆ ಒಳಗಾಗಿ ಇದ್ದದ್ದನ್ನು ಮಾರಿ ಸಿಟಿಗಳಿಗೆ ಹೋಗುವ ಆಶೆ. ಭೂಮಿಯನ್ನು ತೆಗೆದುಕೊಂಡವರು ಪ್ರಕೃತಿಗೆ ಬೆಲೆ ಕೊಡದೆ ತಮ್ಮ ಅನುಕೂಲಕ್ಕಾಗಿಬೇಕಾದ ಹಾಗೆ ನಡೆದುಕೊಳ್ಳುತ್ತಾರೆ. ಆದರೆ ಅದರ ಫಲವನ್ನು ಅನುಭವಿಸುವವರು ಮತ್ಯಾರೋ... ಕಳೆದ ಮುಂಗಾರಿನಲ್ಲಿ ಸೂರು ಕಳೆದುಕೊಂಡ ಸಂತ್ರಸ್ತರು ಇನ್ನೂ ನೆಲೆ ದೊರಕದೇ ಅಲೆದಾಡುವಂತಾಗಿದೆ.
ಇದ್ದವರಿಗೇನು ಗೊತ್ತು ಇಲ್ಲದವರ ಸಂಕಷ್ಟ. ನಕ್ಸಲರೆಂದರೆ ತಿರುಗಿ ಬೀಳುವವರು ತಾವೇ. ನಕ್ಸಲೈಟ್ಗಳಾಗುತ್ತೇವೆಂದರೆ ಬಹುಷಃ ಅವರೆಷ್ಟು ನೊಂದಿರ ಬಹುದೆಂದು ಅರ್ಥೈಸಿಕೊಳ್ಳ ಬೇಕಾಗುತ್ತದೆ. ಸತ್ಯವನ್ನೇ ಮರೆಯುತ್ತಿರುವ ಈ ಕಾಲದಲ್ಲಿ ನೊಂದವರಿಗೆ ಜ್ಞಾನದ ದೀಪವನ್ನು ಹಚ್ಚಿ ಸಮಸ್ಯೆಯನ್ನು ಬಗೆಹರಿಸುವ ಕಾರ್ಯ ಆಗಬೇಕಾಗಿದೆ. ಮನುಷ್ಯ ಅಂದಮೇಲೆ ಸಮಸ್ಯೆಗಳು ಬಂದೇ ಬರುತ್ತವೆ. ಆದರೆ ಅದನ್ನು ಹೇಗೆ ಎದುರಿಸಬೇಕೆಂಬದು ಮುಖ್ಯ.
ಭೂಮಿಗೆ ಭಾಷೆ ಕೊಟ್ಟಂತ ಮಳೆ ‘ಆರಿದ್ರಾ’ ಆರಿದ್ರಾ ಮಳೆ ಆರಂಭವಾಗಿ ದಿನಗಳು ಉರುಳಿದರೂ ಭೂಮಿ ತಾಯಿಯನ್ನು ಮರೆತಂತಿದೆ. ಈ ಮಳೆಯೂ ಭೂಮಿಯಲ್ಲಿ ಜಲವನ್ನುಂಟು ಮಾಡಿ ರೈತರಿಗೆ ಭೂಮಿ ಭಿತ್ತನೆಗೆ ಅವಕಾಶ ಒದಗಿಸುತ್ತಿತ್ತು. ಆದರೀಗ ವರುಣದೇವ ಮುನಿಸಿಕೊಂಡಂತಿದೆ. ಕಳೆದ ಮಳೆಗಾಲ ಪ್ರಕೃತಿ ವಿಕೋಪವನ್ನುಂಟು ಮಾಡಿದ್ದಕ್ಕಾಗಿ ವರುಣ ದೇವನನ್ನು ಅನೇಕರು ಶಪಿಸಿದ್ದೂ ಉಂಟು, ಶಾಂತವಾಗುವಂತೆ ಬೇಡಿಕೊಂಡಿದ್ದುಂಟು. ಆದರೀಗ ಒಂದು ತಿಂಗಳು ಕಳೆದರೂ ಏಕೋ ವರುಣ ದೇವ ದಯೆ ತೋರುತ್ತಿಲ್ಲ. ರೈತರಾದಿಯಾಗಿ ಜನರ ಬದುಕಿಗೆ ಬೇಕಷ್ಟು ಪ್ರಮಾಣದ ಮಳೆ ಸುರಿಯಲಿ. ಅಗತ್ಯಕ್ಕಿಂತ ಹೆಚ್ಚು ಸುರಿದು ಅನಾಹುತ ಆಗದಿರಲಿ ಎಂದು ಭಗವಂತನಲ್ಲಿ ಬೇಡೋಣ. - ಕಡ್ಲೇರ ಆಶಾ ಧರ್ಮಪಾಲ್ ಪ್ರಭು.