ಚೆಟ್ಟಳ್ಳಿ, ಜು. 14: ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಸಂಶೋಧಿಸಿ ಬೆಳೆಸಲಾಗುತ್ತಿರುವ ಮಡಹಾಗಲ ಕಾಯಿ ಗಿಡಕ್ಕೆ ಬೆಳೆಗಾರರಿಂದ ಭಾರೀ ಬೇಡಿಕೆಯೊಂದಿಗೆ ಮಾರಾಟ ವಾಗುತ್ತಿದೆ ಎಂದು ಕೇಂದ್ರದ ಮುಖ್ಯಾಧಿಕಾರಿ ಡಾ.ಭಾರತಿ ತಿಳಿಸಿದ್ದಾರೆ.

ಒಂದೂವರೆ ವರ್ಷದ ಹಿಂದೆ ಭುವನೇಶ್ವರದ ತೋಟಗಾರಿಕಾ ಕೇಂದ್ರದಿಂದ ಹಲವು ವಿಧದ ಹಾಗಲಕಾಯಿ ಗಿಡವನ್ನು ತಂದು ಚೆಟ್ಟಳ್ಳಿ ಪ್ರಾಯೋಗಿಕ ಕೇಂದ್ರದಲ್ಲಿ ಬಲೆಯನ್ನು ನಿರ್ಮಿಸಿ ನೆಟ್ಟು ಬೆಳೆಸಲಾಗಿತ್ತು. ಪರಿಸರಕ್ಕೆ ತಕ್ಕದಾದ ಆಂಗ್ಲಭಾಷೆಯ ಸ್ವೈನಿಗಾರ್ಡ್ ಕಾಡುಪೀರೆ, ಪಾವಕ್ಕೆ ಎಂದೆಲ್ಲ ಕರೆಯಲ್ಪಡುವ ಈ ಮಡಹಾಗಲಕಾಯಿ ಗಿಡ ಬಳ್ಳಿಯಾಗಿ ಬೆಳೆಯತೊಡಗಿ ಪರಾಗಕ್ರಿಯೆಯನ್ನು ನಡೆಸುವ ಮೂಲಕ 2 ತಿಂಗಳಲ್ಲಿ ಪ್ರತಿ ಬಳ್ಳಿಯಲ್ಲಿ 8ರಿಂದ 10ಕೆ.ಜಿ. ಉತ್ತಮ ಫಸಲಿಗೆ ಬಂದಿದೆ

ಹೆಚ್ಚಿನ ಪ್ರೋಟೀನ್ ಹೊಂದಿರುವ ಮಡಹಾಗಲಕಾಯಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹಾಗೂ ಕೃಷಿಕರಿಗೆ ಕಡಿಮೆ ಸಮಯದಲ್ಲಿ ಹೆಚ್ಚಿನ ಆದಾಯ ನೀಡಬಲ್ಲ ಈ ಬಳ್ಳಿಯನ್ನು ಬೆಳೆಯಲಾಗಿದೆ. ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಬೆಣ್ಣೆಹಣ್ಣು, ಮಡಹಾಗಲಕಾಯಿ ಪ್ರಾತ್ಯಕ್ಷಿಕೆ ಏರ್ಪಡಿಸಿ ಮಾಹಿತಿ ನೀಡಲಾಯಿತು.

ಮಂಗಳೂರು, ಪುತ್ತೂರು, ಉಡುಪಿ, ಹುಬ್ಬಳಿ, ಧಾರವಾಡದಿಂದ ಬೇಡಿಕೆ ಇಟ್ಟಿದ್ದು, ಮುಂದಿನ ನಾಲ್ಕೈದು ತಿಂಗಳಲ್ಲಿ ಕೃಷಿಕರಿಗೆ ನೀಡಲಾಗುವ ದೆಂದು ಅವರು ತಿಳಿದ್ದಾರೆ.