ಮಡಿಕೇರಿ, ಜು. 14: ಮುತ್ತಿನ ಹಾರ ಎಂಬ ಚಿತ್ರ ನಿರ್ದೇಶಿಸಿ ಕೊಡಗಿನ ಸೈನ್ಯ ಪರಂಪರೆ ಹಾಗೂ ಕೊಡವರ ಆಚಾರ-ವಿಚಾರದ ಬಗ್ಗೆ ಬೆಳಕು ಚೆಲ್ಲಿದ್ದ ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಕುರಿತು ಸಿನಿಮಾ ಮಾಡಲು ಚಿಂತಿಸಿದ್ದರಂತೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಾಧಕರ ಕುರಿತಾದ ಕಾರ್ಯಕ್ರಮ ‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮದಲ್ಲಿ ಸಾಧಕರ ಸೀಟಿನಲ್ಲಿ ಕುಳಿತಿದ್ದ ವೇಳೆ ರಾಜೇಂದ್ರಸಿಂಗ್ ಬಾಬು ಅವರು ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಮುತ್ತಿನಹಾರ ಚಿತ್ರದಲ್ಲಿ ನಟಿಸುವ ವೇಳೆ ನಿಜವಾದ ಯೋಧನ ಬದುಕನ್ನು ತೆರೆಯ ಮೇಲೆ ಪ್ರಸ್ತುತಪಡಿಸುವ ನಿಟ್ಟಿನಲ್ಲಿ ವಿಷ್ಣುವರ್ಧನ್ ಬಹಳಷ್ಟು ಕಠಿಣ ಶ್ರಮಪಟ್ಟಿದ್ದರು.

‘ಹಿ ಈಸ್ ಎ ಗ್ರೇಟ್ ಆ್ಯಕ್ಟರ್ ವೀ ಮಿಸ್ ಹಿಮ್’ ಎಂದು ಭಾವುಕರಾಗಿ ಕಣ್ಣೀರಿಟ್ಟ ಅವರು ವಿಷ್ಣುವರ್ಧನ್ ಅವರನ್ನೇ ನಾಯಕನಾಗಿ ತೆಗೆದುಕೊಂಡು ಫೀ.ಮಾ. ಕಾರ್ಯಪ್ಪ ಅವರ ಕುರಿತ ಚಲನ ಚಿತ್ರ; ರೆಬಲ್ ಸ್ಟಾರ್ ಅಂಬರೀಷ್ ಅವರನ್ನು ಬಳಸಿಕೊಂಡು ಜನರಲ್ ತಿಮ್ಮಯ್ಯ ಅವರ ಕುರಿತ ಚಲನ ಚಿತ್ರ ಹೊರತರಬೇಕೆಂಬ ಹಂಬಲವಿತ್ತು. ಇದಕ್ಕಾಗಿ ಸಿದ್ಧತೆಗಳನ್ನು ಆರಂಭಿಸಿದ್ದೆ; ಆದರೆ ಅದು ಸಾಧ್ಯವಾಗಲಿಲ್ಲ ಎಂದು ರಾಜೇಂದ್ರಸಿಂಗ್ ಬಾಬು ವಿಷಾದಿಸಿದರು.