ಗೋಣಿಕೊಪ್ಪಲು,ಜು.14: ಭಾರತದ ಕಾಫಿ ಉದ್ಯಮ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬೆಳೆಗಾರರ ಮುಂದೆ ದೊಡ್ಡ ಸವಾಲುಗಳಿವೆ. ದರದ ಏರಿಳಿತ, ಕಾರ್ಮಿಕರ ಸಮಸ್ಯೆ, ಜಾಗತಿಕ ತಾಪಮಾನ, ತೋಟ ನಿರ್ವಹಣೆ, ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷದೊಂದಿಗೆ ಪ್ರಮುಖವಾಗಿ ವಿಶ್ವ ಮಾರುಕಟ್ಟೆಯಲ್ಲಿ ಭಾರತದ ಕಾಫಿ ಇನ್ನೂ ಕೂಡಾ ತನ್ನ ಪ್ರಭಾವಿ ಛಾಪು ಮೂಡಿಸದಿರುವದು; ಕೇಂದ್ರ ಸರ್ಕಾರವು ಬೆಳೆಗಾರರ ಸಮಸ್ಯೆ, ಕಾಫಿ ಮಂಡಳಿ ಮೂಲಕ ಸಹಾಯಧನ ವಿಸ್ತರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಕಾಫಿ ಮಂಡಳಿಯ ನೂತನ ಸದಸ್ಯ ಟಿ.ಟಿ.ಜಾನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಳೆದ ಮೇ.22 ರಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಪಾಲಿಬೆಟ್ಟ ಸಮೀಪ ‘ಹಂಚಿಕಾಡು ಎಸ್ಟೇಟ್’ನ ತನ್ನನ್ನು ಸದಸ್ಯನಾಗಿ ಆಯ್ಕೆ ಮಾಡಿರುವ ಬಗ್ಗೆ ಸಂತಸ ಹಂಚಿಕೊಂಡ ಟಿ.ಟಿ.ಜಾನ್; ಸಾಂಪ್ರದಾಯಿಕವಾಗಿ ಕಾಫಿ ಬೆಳೆಯುವ ಕೊಡಗು, ಚಿಕ್ಕಮಗಳೂರು, ಹಾಸನ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಒಳಗೊಂಡಂತೆ ಇನ್ನಿತರ ಅಸಂಪ್ರದಾಯಿಕ ಕಾಫಿ ಉತ್ಪಾದನೆಯ ಪ್ರದೇಶಗಳಿಗೂ ಭೇಟಿ ನೀಡುವ ಮೂಲಕ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆಹಾಕುವದಾಗಿ ನುಡಿದರು.
ಕಿರು ಪರಿಚಯ
ಹಂಚಿಕಾಡು ಎಸ್ಟೇಟ್ ಮಾಲೀಕ ದಿ. ಟಿ.ಪಿ.ಥೋಮಸ್ ಪುತ್ರರಾದ ಟಿ.ಟಿ.ಜಾನ್ ಬಿ.ಕಾಂ.ಪದವೀಧರ. ಪಾಲಿಬೆಟ್ಟ ‘ಕೂರ್ಗ್ ಕ್ಲಿಪ್ಸ್ ರೆಸಾರ್ಟ್ ಇಂಡಿಯಾ ಪ್ರೈವೇಟ್ ಲಿ.’ ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ‘ಪಾಕ್ರ್ಯುಪೈನ್ ರೆಸಾರ್ಟ್’ ನ ನಿರ್ದೇಶಕರಾಗಿರುವ ಇವರು ಅಮ್ಮತ್ತಿ ಮಂಡಲ ಪಂಚಾಯಿತಿಯ ಮಾಜಿ ಸದಸ್ಯರು, ಹೊಸೂರು ಗ್ರಾ.ಪಂ.ಸದಸ್ಯರಾಗಿ ಹಾಗೂ ವೀರಾಜಪೇಟೆ ತಾ.ಪಂ.ಸದಸ್ಯರಾಗಿಯೂ ಈ ಹಿಂದೆ ಸೇವೆ ಸಲ್ಲಿಸಿದ್ದರು.
- ಟಿ.ಎಲ್.ಎಸ್.