ಗೋಣಿಕೊಪ್ಪಲು, ಜು. 13: ತನ್ನ ಮಗನನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ ಎಂದು ಪೊನ್ನಂಪೇಟೆ ಪೊಲೀಸರಿಗೆ ಸಂದೀಪ್ ತಾಯಿ ಹೆಚ್.ಕೆ. ಪಾರ್ವತಿ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದಾರೆ.

ಮೂಲತಃ ನಲ್ಲೂರು ಗ್ರಾಮದ ಕಿರುಗೂರು ಬಳಿಯ ಸಂದೀಪ್ (20) ಬಾಳೆಲೆ ಗ್ರಾಮದ ಸುಳುಗೋಡು ಸಮೀಪದ ಬೈರಮುಂಡಿ ಎಂಬಲ್ಲಿನ ಕಾಫಿ ತೋಟದ ಲೈನ್ ಮನೆಯಲ್ಲಿ ಮಲ್ಲಿಗೆ ಎಂಬಾಕೆಯ ಜೊತೆ ಕಳೆದ ಏಳು ತಿಂಗಳಿನಿಂದ ವಾಸವಾಗಿದ್ದ.

ಕೆಲವೊಮ್ಮಮೆ ಇಬ್ಬರ ನಡುವೆ ಜಗಳವಾಗುತ್ತಿತ್ತು. ಹಲವು ಬಾರಿ ಈ ಬಗ್ಗೆ ಸಂದೀಪ್ ತನ್ನ ಬಳಿ ನೋವನ್ನು ತೋಡಿಕೊಂಡಿದ್ದ. ತಾ. 7 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವಿಷಯ ತಿಳಿದಿದೆ. ಘಟನಾ ಸ್ಥಳಕ್ಕೆ ತೆರಳಿ ನೋಡಿದಾಗ ಕುತ್ತಿಗೆ, ಕೈಯಲ್ಲಿ ಕಚ್ಚಿದ ಗಾಯ ಹಾಗೂ ಕಾಲಿನಲ್ಲಿ ಬೆಂದ ಕಲೆಗಳು ಕಂಡು ಬಂದವು. ಮೃತನ ಸಂಸಾರದವರು ಬರಲಿ ಎಂದು ಹೇಳಿದರೂ ಪೊಲೀಸರು ಆತುರವಾಗಿ ಗೋಣಿಕೊಪ್ಪಲುವಿನ ಆಸ್ಪತ್ರೆಯಲ್ಲಿ ಮರಣೊತ್ತರ ಪರೀಕ್ಷೆ ನಡೆಸಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ಮೃತನ ತಾಯಿ ಆರೋಪಿಸಿದ್ದಾರೆ.