ಸೋಮವಾರಪೇಟೆ, ಜು.13: 2018ರಲ್ಲಿ ಜಿಲ್ಲಾ ಪಂಚಾಯಿತಿಯ 27.02 ಅನುದಾನದಲ್ಲಿ ಕೆರೆ ನಿರ್ವಹಣಾ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್ ಕುಮಾರ್ ಒತ್ತಾಯಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಪದ ಯಡೂರು ಗ್ರಾಮದ ಕೆರೆಯನ್ನು ದಾನಿಗಳಾದ ಹರಪಳ್ಳಿ ರವೀಂದ್ರ ಅವರು ತಮ್ಮ ದುಡಿಮೆಯ ಹಣದಲ್ಲಿ ಸಾರ್ವಜನಿಕ ಉಪಯೋಗದ ದೃಷ್ಟಿಯಿಂದ ಹೂಳು ತೆಗೆಸಿದ್ದು, ಇದರ ಭಾವಚಿತ್ರಗಳನ್ನು ಬಳಸಿಕೊಂಡು ಜಿ.ಪಂ. ಇಂಜಿನಿಯ ರಿಂಗ್ ವಿಭಾಗದಿಂದ ಬಿಲ್ ಪಾಸ್ ಮಾಡಲಾಗಿದೆ ಎಂದು ದೂರಿದರು.
2017-18 ರ ಅನುದಾನದಲ್ಲಿ 1.40ಲಕ್ಷ ರೂ.ಗಳ ಕ್ರಿಯಾಯೋಜನೆ ಸಿದ್ಧಪಡಿಸಿ, ಯಡೂರು ಕೆರೆಯಲ್ಲಿ ಹೂಳು ತೆಗೆದು, ಸುತ್ತಮುತ್ತ ಸ್ವಚ್ಛತೆ ಮಾಡಲಾಗಿದೆ ಎಂದು ದಾಖಲಾತಿಗಳನ್ನು ಸೃಷ್ಟಿಸಿ ಗುತ್ತಿಗೆದಾರ ಶ್ರೀನಿವಾಸ್ ಎಂಬವರ ಹೆಸರಿಗೆ ರೂ. 1.38ಲಕ್ಷ ಹಣವನ್ನು ನೀಡಲಾಗಿದೆ ಎಂದು ಆರೋಪಿಸಿದರು.
ಇದರೊಂದಿಗೆ ತಾಲೂಕಿನ ಚೌಡ್ಲು ಗ್ರಾ.ಪಂ. ವ್ಯಾಪ್ತಿಯ ಚೌಡ್ಲು ಊರೊಳಗಿನ ಕೆರೆ ಅಭಿವೃದ್ಧಿಗೆ 2017-18ನೇ ಸಾಲಿನಲ್ಲಿ 2.76ಲಕ್ಷ ರೂ.ಗಳು ಬಿಡುಗಡೆಯಾಗಿದೆ. 2018-19ನೇ ಸಾಲಿನಲ್ಲಿ ಮತ್ತೊಮ್ಮೆ ಚೌಡ್ಲು ದೇವರ ಕೆರೆಯ ಹೂಳು ತೆಗೆದು ಏರಿ ಸರಿಪಡಿಸುವದು ಎಂದು 2.88ಲಕ್ಷ ರೂ.ಗಳು ಬಿಡುಗಡೆಯಾಗಿದೆ. ಆದರೆ ಚೌಡ್ಲು ಗ್ರಾಮದ ಈಶ್ವರ ದೇವಾಲಯದ ಬಳಿ ಒಂದೇ ಕೆರೆ ಇದ್ದು, ಇಲ್ಲೂ ಅವ್ಯವಹಾರವಾಗಿರುವ ಸಂಶಯ ಇದೆ ಎಂದರು.
2017-18ನೇ ಹಾಗೂ 2018-19ನೇ ಸಾಲಿನಲ್ಲಿ 24 ಕೆರೆಗಳ ನಿರ್ವಹಣೆ ಕಾಮಗಾರಿ ನಡೆದಿದ್ದು, ಒಟ್ಟು 62.07ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಆದರೆ ಕಾಮಗಾರಿ ನಡೆಯದೆ ಬಿಲ್ ಮಾಡಿರುವ ಸಂಶಯವಿದ್ದು, ಈ ಬಗ್ಗೆ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಕೆರೆಗಳ ನಿರ್ವಹಣಾ ಯೋಜನೆಯಡಿ 2017-18 ಮತ್ತು 2018-19ನೇ ಸಾಲಿನಲ್ಲಿ 24 ಕೆರೆಗಳ ಕಾಮಗಾರಿ ನಡೆದಿದೆ. ಇದರ ಬಗ್ಗೆ ಪರಿಶೀಲಿಸಿ ಆಯಾ ಗ್ರಾಮಸ್ಥರು ಖಚಿತಪಡಿಸಿಕೊಳ್ಳಬೇಕು. ಕಾಮಗಾರಿ ನಡೆಯದೇ ಬಿಲ್ ಪಡೆದಿದ್ದಲ್ಲಿ ಗ್ರಾಮದ ಪ್ರಮುಖರು ಜಿ.ಪಂ. ಸಿ.ಇ.ಓ. ಅವರಿಗೆ ದೂರು ನೀಡಬೇಕೆಂದು ಮನವಿ ಮಾಡಿದರು.
ಈಗಾಗಲೇ ಗುತ್ತಿಗೆದಾರರ ಮೂಲಕ ಪಾವತಿಯಾಗಿರುವ ಹಣವನ್ನು ಸರಕಾರ ಹಿಂಪಡೆಯ ಬೇಕು. ಇಂತಹ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಗ್ರಾಮಸ್ಥರಾದ ವೈ.ಡಿ. ದಿನೇಶ್, ಸುಧಾಕರ, ಹೇಮಂತ್ ಉಪಸ್ಥಿತರಿದ್ದರು.