ಗೋಣಿಕೊಪ್ಪ ವರದಿ. ಜು. 13: ಬೆಳಿಗ್ಗೆ 8 ಗಂಟೆಗೆ ಪಿರಿಯಾಪಟ್ಟಣದಿಂದ ಗೋಣಿಕೊಪ್ಪಕ್ಕೆ ಹೊರಡುವ ರಾಜ್ಯ ಸರ್ಕಾರಿ ಬಸ್ ನಿತ್ಯ ಸಂಚರಿಸದ ಕಾರಣ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಇದರಿಂದ ಬಸ್ ನಿತ್ಯ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕಾಗಿದೆ.
ಪಿರಿಯಾಪಟ್ಟಣದಿಂದ ಬರುವ ಬಸ್‍ನಲ್ಲಿ ಗೋಣಿಕೊಪ್ಪ, ಪೊನ್ನಂಪೇಟೆ ಕಡೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಸಾಕಷ್ಟು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಈ ಬಸ್ ನಿತ್ಯ ಸಂಚರಿಸುವದಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಬಸ್ ಸೇವೆಯನ್ನು ನಂಬಿ ಬರುವ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಿರುವ ಅತಂಕ ಮೂಡಿಸಿದೆ. ಬೆಳಗ್ಗೆ ಬರುವ ಬಸ್ ಸಾಯಂಕಾಲ ಮತ್ತೆ ಪಿರಿಯಾಪಟ್ಟಣಕ್ಕೆ ತೆರಳುವದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಆಗೊಮ್ಮೆ-ಈಗೊಮ್ಮೆ ಬರುವದರಿಂದ ತೊಂದರೆ ಹೆಚ್ಚಾಗಿದೆ. ಸಮಯಕ್ಕೆ ಸರಿಯಾಗಿ ನಿತ್ಯ ಈ ಬಸ್ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.