ವೀರಾಜಪೇಟೆ, ಜು. 13: ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸುಧಾರಣೆಗಳನ್ನು ಗಮನದಲ್ಲಿರಿಸಿ ಕೊಂಡು ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಯಶಸ್ಸನ್ನು ಸಾಧಿಸಲು ಅನುಕೂಲ ವಾಗುವಂತೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎನ್.ಸಿ.ಇ.ಆರ್.ಟಿ.)ಯು ಪ್ರೌಢಶಾಲಾ ಐಚ್ಛಿಕ ವಿಷಯಗಳಲ್ಲಿ ಹೊಸ ಪಠ್ಯ ಪುಸ್ತಕಗಳನ್ನು ಜಾರಿ ಗೊಳಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ನಗರದ ಸಂತ ಅನ್ನಮ್ಮ ಪ್ರೌಢಶಾಲೆಯಲ್ಲಿ 10ನೇ ತರಗತಿ ಗಣಿತ ಮತ್ತು ಹಿಂದಿ ವಿಷಯಗಳಿಗೆ ಹೊಸ ಪರಿಕಲ್ಪನೆಯಡಿ ಏರ್ಪಡಿಸಿದ್ದ ಪ್ರಶ್ನಾಕೋಠಿ ತಯಾರಿಕಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಉತ್ತಮಪಡಿಸಲು ಅನುಕೂಲವಾಗುವಂತೆ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಪ್ರಶ್ನಾಕೋಠಿ ತಯಾರಿಸಲಾಗುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂತ ಅನ್ನಮ್ಮ ಪ್ರೌಢಶಾಲಾ ಮುಖ್ಯ ಶಿಕ್ಷಕ ಬೆನ್ನಿ ಜೋಸೆಫ್ ಮಾತನಾಡಿ, ಇಂತಹ ತರಬೇತಿಗಳು ಶಿಕ್ಷಕರು ತಾವು ಭೋದಿಸುವ ವಿಷಯಗಳಲ್ಲಿ ಹೆಚ್ಚಿನ ಪರಿಣತಿ ಹೊಂದಲು ಸಹಕಾರಿಯಾಗಿವೆ ಎಂದರು.
ಸಂಪನ್ಮೂಲ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಹಾಗೂ ಸವರಿನ್ ಡಿಸೋಜ ತರಬೇತಿ ಕಾರ್ಯಾಗಾರದ ಕುರಿತು ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ.ಪಿ. ಉತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಸಂಯೋಜಕ ಪಿ.ಆರ್. ಅಯ್ಯಪ್ಪ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಯಲ್ಲಪ್ಪ ಪೂಜಾರಿ ಪಾಲ್ಗೊಂಡಿದ್ದರು. ಮೂರು ತಾಲೂಕಿನಿಂದ ಗಣಿತ ಹಾಗೂ ಹಿಂದಿ ವಿಷಯಗಳ ಸಂಪನ್ಮೂಲ ಶಿಕ್ಷಕರು ಕಾರ್ಯಾಗಾರದಲ್ಲಿ ಹಾಜರಿದ್ದರು.