ಚೆಟ್ಟಳ್ಳಿ, ಜು. 13: ನಲ್ವತ್ತೇಕರೆ ಸುತ್ತಮುತ್ತ ಹಲವಾರು ವರ್ಷಗಳಿಂದ ತಲೆದೋರಿದ ವಿದ್ಯುತ್ ಸಮಸ್ಯೆಯು ನೂತನ ಟ್ರಾನ್ಸ್ ಪಾರ್ಮರ್ ಅಳವಡಿಕೆಯೊಂದಿಗೆ ಇತ್ಯರ್ಥವಾಗಿದೆ. ಕಳೆದ ಹಲವಾರು ದಶಕಗಳಿಂದ ಈ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ನಿರಂತರವಾಗಿ ಸಿಂಗಲ್ ಪ್ಯೂಸ್, ಪವರ್ ಕಟ್ ಸಮಸ್ಯೆಯಿಂದ ನಿವಾಸಿಗಳು ಹಾಗೂ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದರು.

ಈ ಕುರಿತು ಸಾರ್ವಜನಿಕರು ಚೆಟ್ಟಳ್ಳಿ ವಲಯ ಕಿರಿಯ ಅಭಿಯಂತರ ದಿನೇಶ್ ಅವರ ಗಮನಕ್ಕೆ ತಂದು ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ ಜೆ.ಇ .ದಿನೇಶ್ ನಲ್ವತ್ತೇಕರೆಯ ಬೀರನ ಕೈಮಾಡದ ಬಳಿ 63 ಕೆ.ವಿ. ಸಾಮಥ್ರ್ಯದ ಟ್ರಾನ್ಸ್ ಪಾರ್ಮ್‍ರ್ ಅಳವಡಿಸಿ ವ್ಯಾಪ್ತಿಯಲ್ಲಿ ವಿದ್ಯುತ್‍ಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ.

ಈ ಸಂದರ್ಭದಲ್ಲಿ ಪವರ್ ಮ್ಯಾನ್‍ಗಳಾದ ರೋಶನ್, ನಾಗರಾಜ್, ಹುಸೇನ್, ಸುರೇಶ್ ಹಾಗೂ ಗ್ರಾಮಸ್ಥರಾದ ಮಣಿ, ಮಂಜು, ಮತ್ತಿತರರು ಹಾಜರಿದ್ದರು.