ಸೋಮವಾರಪೇಟೆ, ಜು. 13: ವಾತಾವರಣದಲ್ಲಿನ ಬದಲಾವಣೆ, ಅಧಿಕ ನಿರ್ವಹಣಾ ವೆಚ್ಚ, ಸೌಕರ್ಯಗಳ ಕೊರತೆ, ಕಾಡು ಪ್ರಾಣಿಗಳ ಹಾವಳಿ, ಅತಿವೃಷ್ಟಿ-ಅನಾವೃಷ್ಟಿ, ಬೆಲೆ ಇಳಿಕೆ, ನೀರಿನ ಕೊರತೆ ಸೇರಿದಂತೆ ಇನ್ನಿತರ ಕಾರಣಗಳಿಂದ ತಾಲೂಕಿನಾದ್ಯಂತ ಕೃಷಿಕ ವರ್ಗ ಕೃಷಿ ಕಾರ್ಯದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದೆ.

ಕಳೆದ 20 ರಿಂದ 25 ವರ್ಷಗಳ ಹಿಂದೆ ಇದ್ದ ಅರ್ಧದಷ್ಟು ಗದ್ದೆಗಳು ಇಂದು ಪಾಳುಬಿದ್ದಿದ್ದು, ಸಾವಿರಾರು ಎಕರೆ ಗದ್ದೆಗಳು ಕಾಫಿ, ಅಡಿಕೆ, ಬಾಳೆ ತೋಟಗಳಾಗಿ ಮಾರ್ಪಟ್ಟಿವೆ. ಇನ್ನು ನೂರಾರು ಎಕರೆ ಗದ್ದೆಗಳು ಪರಿವರ್ತಿತ ನಿವೇಶನಗಳಾಗಿ ಬದಲಾಗಿದ್ದು, ಅನ್ನ ಬೆಳೆಯುವ ಭೂಮಿ ಕಣ್ಮರೆಯಾಗಿದೆ.

ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಹೆಗ್ಗಡಮನೆ, ಕುಡಿಗಾಣ, ನಾಡ್ನಳ್ಳಿ, ಕೊತ್ನಳ್ಳಿ, ಬೆಟ್ಟದಳ್ಳಿ, ಹಂಚಿನಳ್ಳಿ, ಕುಂದಳ್ಳಿ ಗ್ರಾಮಗಳಲ್ಲೂ ಕೃಷಿ ಪ್ರದೇಶ ನಶಿಸುತ್ತಿರುವದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಭಾಗದಲ್ಲಿ ವಾರ್ಷಿಕ 400 ಇಂಚಿಗೂ ಅಧಿಕ ಮಳೆಯಾಗುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿಗೆ ಕೃಷಿಕರು ನಲುಗಿ ಹೋಗಿದ್ದಾರೆ.

ಕಳೆದ ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಜಲಪ್ರವಾಹ ಉಂಟಾಗಿ ನೂರಾರು ಎಕರೆ ಗದ್ದೆಯ ಮೇಲೆ ಹೂಳು, ಮರಳು, ಮಣ್ಣು ತುಂಬಿದ್ದರಿಂದ ಅನಿವಾರ್ಯವಾಗಿ ಈ ವರ್ಷ ಕೃಷಿಯಿಂದ ವಿಮುಖರಾಗುವಂತೆ ಮಾಡಿದೆ.

ಹಿಂದೊಮ್ಮೆ ಮಳೆಗಾಲದಲ್ಲಿ ಎಲ್ಲೆಡೆ ಗದ್ದೆಗಳಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಕೃಷಿ ಕ್ರಮೇಣ ಇಳಿಮುಖಗೊಳ್ಳುತ್ತಿದ್ದು, ರೈತಾಪಿ ವರ್ಗ ಕೃಷಿಯಿಂದ ವಿಮುಖಗೊಳ್ಳುತ್ತಿದೆ. ಎತ್ತುಗಳ ಬದಲಿಗೆ ಟ್ರ್ಯಾಕ್ಟರ್, ಟಿಲ್ಲರ್‍ಗಳಿದ್ದರೂ ಸಹ ಮಳೆಯ ಜೂಟಾಟ, ರಸಗೊಬ್ಬರ, ಕ್ರಿಮಿನಾಶಕ, ಔಷಧಿಗಳ ಬೆಲೆಯಲ್ಲಿ ಏರಿಕೆ, ಅಧಿಕಗೊಂಡಿರುವ ನಿರ್ವಹಣಾ ವೆಚ್ಚಗಳಿಂದ ಕೃಷಿ ಕ್ಷೇತ್ರ ಹಿನ್ನಡೆ ಕಾಣುತ್ತಿದೆ.

ಇದರೊಂದಿಗೆ ಪ್ರಮುಖವಾಗಿ ಯುವ ಜನಾಂಗ ಕೃಷಿಯಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದು, ಹತ್ತಾರು ಎಕರೆ, ಗದ್ದೆ-ತೋಟಗಳಿದ್ದರೂ ಸಹ ಮೇಲಿನ ಕಾರಣಗಳಿಂದ ಪಟ್ಟಣದಲ್ಲಿ ಬದುಕು ಕಟ್ಟಿಕೊಳ್ಳಲು ಯತ್ನಿಸುತ್ತಿದೆ.

ತಾಲೂಕಿನ ಪಶ್ಚಿಮಘಟ್ಟ ಪ್ರದೇಶದಲ್ಲಿ ಯುವ ಜನಾಂಗವೇ ಕಣ್ಮರೆಯಾಗಿದೆ. ನೂರಾರು ಎಕರೆ ಜಾಗ ಹೆಸರಿಗಷ್ಟೇ ಎಂಬಂತಾಗಿದ್ದು, ಕೃಷಿಗೆ ಅಯೋಗ್ಯವಾಗಿರುವದರಿಂದ ಪಟ್ಟಣದತ್ತ ವಲಸೆ ಹೋದವರು ಮತ್ತೆ ಇತ್ತ ತಲೆಹಾಕುತ್ತಿಲ್ಲ. ಈ ಭಾಗದ ಬಹುತೇಕ 90 ರಷ್ಟು ಕೋವಿಗಳು ಮೈಸೂರು, ಬೆಂಗಳೂರಿನ ವಿವಿಧ ಬ್ಯಾಂಕ್, ಕಚೇರಿಗಳಿಗೆ ಭದ್ರತೆ ಒದಗಿಸುತ್ತಿವೆ. ಯುವ ಜನರು ಕೋವಿಯೊಂದಿಗೆ ಗನ್‍ಮ್ಯಾನ್ ಕೆಲಸಕ್ಕೆ ಸೇರಿಕೊಂಡಿದ್ದು, ಗ್ರಾಮಗಳಲ್ಲಿ ಉಳಿದ ವಯಸ್ಕರು ಸಣ್ಣಪುಟ್ಟ ಕೃಷಿ ಮಾಡಿಕೊಂಡು ಜೀವನ ನೂಕುತ್ತಿದ್ದಾರೆ.

ತಾಲೂಕಿನ ಸೂರ್ಲಬ್ಬಿ, ಗರ್ವಾಲೆ, ಮಂಕ್ಯ, ಕಿಕ್ಕರಳ್ಳಿ, ಬೆಟ್ಟದಕೊಪ್ಪ ಭಾಗದಲ್ಲಿ ಕೆಲ ವರ್ಷಗಳ ಹಿಂದೆ ಅತೀ ಹೆಚ್ಚು ತರಕಾರಿಗಳನ್ನು ಬೆಳೆಯಲಾಗುತ್ತಿತ್ತು. ಇಲ್ಲಿನ ಮಂದಿ ವರ್ಷದ ಇತರ ಸಮಯದಲ್ಲಿ ತರಕಾರಿ ಬೆಳೆದು ಜೀವನ ಸಾಗಿಸುತ್ತಿದ್ದರೆ, ಮಳೆಗಾಲದಲ್ಲಿ ಭತ್ತ ಬೆಳೆದು ಸ್ವಾವಲಂಬಿ ಬದುಕು ಕಂಡುಕೊಂಡಿದ್ದರು.

ಇತ್ತೀಚಿನ ವರ್ಷಗಳಲ್ಲಿ ಊರಿನಲ್ಲಿಯೇ ಉಳಿದ ವಯಸ್ಕರಿಗೆ ವಯಸ್ಸು ಏರುತ್ತಿದ್ದಂತೆ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಕೃಷಿಯತ್ತ ಮುಖ ಮಾಡದೇ ತಮಗೆಷ್ಟು ಬೇಕೋ ಅಷ್ಟನ್ನು ಬೆಳೆದುಕೊಳ್ಳುತ್ತಿದ್ದಾರೆ. ಈ ಹಿಂದೆ ತರಕಾರಿಗಳನ್ನು ಪಟ್ಟಣಕ್ಕೆ ತಂದು ಮಾರಾಟ ಮಾಡಿ ಗಳಿಸುತ್ತಿದ್ದ ಆದಾಯದ ಆಸೆಯನ್ನೇ ಇಲ್ಲಿನವರು ಬಿಟ್ಟುಕೊಟ್ಟಿದ್ದು, ಇರುವಷ್ಟು ದಿನ ಹೇಗೋ ದಿನ ನೂಕುತ್ತೇವೆ ಎಂಬ ನಿರಾಶದಾಯಕ ಮಾತುಗಳು ಕಿಕ್ಕರಳ್ಳಿಯ ಚೀಯಣ್ಣ, ಪ್ರಕಾಶ ಸೇರಿದಂತೆ ಇತರರಿಂದ ಕೇಳಿಬರುತ್ತಿವೆ.

ಇನ್ನು ತಾಲೂಕಿನ ಪಶ್ಚಿಮ ಭಾಗದಲ್ಲಿ ಬೆಟ್ಟಗುಡ್ಡಗಳ ತಳಭಾಗದಲ್ಲಿದ್ದ ಗದ್ದೆಗಳು ಕಳೆದ ಮಳೆಗಾಲದಲ್ಲಿ ತನ್ನ ಸ್ವರೂಪವನ್ನೇ ಕಳೆದುಕೊಂಡಿವೆ. ಭಾರೀ ಪ್ರಮಾಣದ ಮಳೆ ಸುರಿದ ಹಿನ್ನೆಲೆ ನಾಟಿ ಮಾಡಿದ್ದ ಗದ್ದೆಗಳು ಕೊಚ್ಚಿಕೊಂಡು ಹೋಗಿದ್ದು, ಕೃಷಿಕರಿಗೆ ಭಾರೀ ನಷ್ಟ ತಂದೊಟ್ಟಿತ್ತು. ಹಲವಷ್ಟು ಗದ್ದೆಗಳು ಕೃಷಿಗೆ ಅಯೋಗ್ಯವಾಗಿ ಪರಿಣಮಿಸಿದ್ದರಿಂದ ಈ ಬಾರಿ ಕೃಷಿ ಕೈಗೊಳ್ಳಲು ಅಸಾಧ್ಯವಾಗಿದೆ. ಕಳೆದ ಬಾರಿಯ ಪ್ರವಾಹ ಸದೃಶ ಪರಿಸ್ಥಿತಿಯನ್ನು ನೆನಪಿಸಿಕೊಂಡು ಹಲವಷ್ಟು ಮಂದಿ ಕೃಷಿಯತ್ತ ಮುಖವನ್ನೇ ಮಾಡಿಲ್ಲ.

ತಾಲೂಕಿನ ನೇರುಗಳಲೆ, ಗೋಣಿಮರೂರು, ಆಲೂರು ಸಿದ್ದಾಪುರ, ಗೌಡಳ್ಳಿ, ಮದಲಾಪುರ, ಕೂಡಿಗೆ, ಹೆಬ್ಬಾಲೆ, ಶಿರಂಗಾಲ, ತೊರೆನೂರು, ಸಿದ್ದಲಿಂಗಪುರ, ಅಳುವಾರ ಭಾಗದ ಸಮತಟ್ಟು ಪ್ರದೇಶದಲ್ಲಿ ಮುಸುಕಿನ ಜೋಳ, ಭತ್ತ ಬೆಳೆಯಲಾಗುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 5ರಷ್ಟು ಮಾತ್ರ ಕೃಷಿ ಪ್ರದೇಶ ಈ ಭಾಗದಲ್ಲಿ ಇಳಿಕೆಯಾಗಿದೆ.

ಆದರೆ ಹಾನಗಲ್ಲು, ಯಡೂರು, ಶಾಂತಳ್ಳಿ, ತಲ್ತರೆಶೆಟ್ಟಳ್ಳಿ, ಹರಗ, ಚಿಕ್ಕತೋಳೂರು, ಕೂತಿ, ದೊಡ್ಡತೋಳೂರು, ತೋಳೂರುಶೆಟ್ಟಳ್ಳಿ, ಕುಂದಳ್ಳಿ, ಬೆಟ್ಟದಳ್ಳಿ, ಕೊತ್ನಳ್ಳಿ, ನಗರಳ್ಳಿ, ಬೀದಳ್ಳಿ, ಬೆಂಕಳ್ಳಿ, ನಾಡ್ನಳ್ಳಿ, ತಡ್ಡಿಕೊಪ್ಪ, ದೊಡ್ಡಮನೆಕೊಪ್ಪ, ನಡ್ಲಕೊಪ್ಪ, ಗರ್ವಾಲೆ, ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಕೃಷಿ ಪ್ರದೇಶದಲ್ಲಿ ಶೇ. 10ರಷ್ಟು ಇಳಿಕೆಯಾಗಿದೆ.

ಕಳೆದ ವರ್ಷ ಹಲವೆಡೆಗಳಲ್ಲಿ ಭೂಮಿ ಕುಸಿತಗೊಂಡು ಹೊಳೆಗೆ ಜಾರಿದ ಪರಿಣಾಮ, ಹೊಳೆಯಲ್ಲಿನ ನೀರಿನ ಹರಿವು ಗದ್ದೆಗಳಿಗೆ ನುಗ್ಗಿ ತುಂಬಿದ್ದ ಹೂಳು ಇಂದಿಗೂ ತೆರವುಗೊಂಡಿಲ್ಲ. ತಾಲೂಕಿನ 55 ಎಕರೆ ಗದ್ದೆ ಪ್ರದೇಶ ಮರಳು, ಹೂಳು, ಮರಗಳಿಂದ ನಾಶವಾಗಿದ್ದು, ಕೃಷಿ ಮಾಡಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ವರ್ಷದ ಪ್ರವಾಹದಿಂದಾಗಿ ಸೋಮವಾರಪೇಟೆ ತಾಲೂಕು ಕೃಷಿ ಇಲಾಖಾ ವ್ಯಾಪ್ತಿಯಲ್ಲಿ 7,977 ರೈತರು ಕೃಷಿ ನಷ್ಟದ ಸಂತ್ರಸ್ತರಾಗಿದ್ದಾರೆ. 4345 ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಹಾನಿಯಾಗಿದೆ ಎಂದು ಸರ್ವೆ ನಡೆಸಿದ ಅಧಿಕಾರಿಗಳು ಸರ್ಕಾರಕ್ಕೆ ವರದಿ ಒಪ್ಪಿಸಿದ್ದಾರೆ.

ತಾಲೂಕಿನ ಇಗ್ಗೋಡ್ಲು, ಮೂವತ್ತೊಕ್ಲು, ತಾಕೇರಿ, ಕಿರಗಂದೂರು, ಕಿಕ್ಕರಳ್ಳಿ, ಹಟ್ಟಿಹೊಳೆ, ಯಡೂರಿನಲ್ಲಿ ಸುಮಾರು 55 ಹೆಕ್ಟೇರ್‍ಗೂ ಅಧಿಕ ಕೃಷಿ ಭೂಮಿ ಹೂಳು ತುಂಬಿದ್ದು, ಭತ್ತ ಸೇರಿದಂತೆ ಇನ್ನಿತರ ಅಹಾರ ಬೆಳೆಗಳನ್ನು ಬೆಳೆಯಲು ಅಯೋಗ್ಯವಾಗಿ ಪರಿಣಮಿಸಿದೆ.

ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ 2,800 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಲಾಗಿದ್ದು, ಮಹಾಮಳೆಗೆ 1,409 ಹೆಕ್ಟೇರ್ ಕೃಷಿ ನಷ್ಟಗೊಂಡು, 1,936 ಮಂದಿ ಕೃಷಿಕರು ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು.

ಕಳೆದ 2016-17ರಲ್ಲಿ 11 ಸಾವಿರ ಹೆಕ್ಟೇರ್‍ನಲ್ಲಿ ಭತ್ತ ಬೆಳೆಯುವ ಗುರಿ ಇಟ್ಟುಕೊಂಡಿದ್ದರೆ, 2017-18ರಲ್ಲಿ 9,438 ಹೆಕ್ಟೇರ್ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಮಹಾಮಳೆಯ ಆರ್ಭಟಕ್ಕೆ 2,793 ಹೆಕ್ಟೇರ್ ಭತ್ತ ಕೃಷಿ ನಷ್ಟಗೊಂಡಿದ್ದು, 5,744 ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು.

ತಾಲೂಕಿನ ಹಲವು ಪ್ರದೇಶಗಳಲ್ಲಿ ಬೆಟ್ಟಕುಸಿತದಿಂದ ಜಾರಿದ ಕಲ್ಲು,ಮಣ್ಣು, ಮರಗಳು ಹೊಳೆಯಲ್ಲಿ ಹರಿದು, ಗದ್ದೆಯನ್ನು ಆಪೋಷನಗೈದಿದೆ. ಸುಮಾರು 55 ಹೆಕ್ಟೇರ್‍ನಷ್ಟು ಗದ್ದೆ ಸರ್ವನಾಶವಾಗಿದ್ದು, ಇಗ್ಗೋಡ್ಲಿನಲ್ಲಿ ನಿರ್ಮಾಣವಾಗಿದ್ದ ಮರಳುಗಾಡಿನ ಸನ್ನಿವೇಶ ಈಗಲೂ ಮುಂದುವರೆದಿದೆ.

ಕಳೆದ ಪ್ರವಾಹಕ್ಕೆ ಹೂಳುತುಂಬಿ 142 ಹೆಕ್ಟೇರ್ ಪ್ರದೇಶಕ್ಕೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಇದರಲ್ಲಿ ಸುಮಾರು 85 ಹೆಕ್ಟೇರ್ ಗದ್ದೆಯಲ್ಲಿ ಶೇಖರಣೆಯಾಗಿದ್ದ ಹೂಳನ್ನು ತೆಗೆದು ಮರು ನಾಟಿ ಮಾಡಲಾಗಿದ್ದರೆ, 57 ಹೆಕ್ಟೇರ್ ಗದ್ದೆ ಕೃಷಿಗೆ ಅಯೋಗ್ಯವಾಗಿದೆ ಎಂದು ಕೃಷಿ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ವರ್ಷದಿಂದ ವರ್ಷಕ್ಕೆ ಕೃಷಿಕರು ಕೃಷಿಯಲ್ಲಿ ಆಸಕ್ತಿಯನ್ನೇ ಕಳೆದುಕೊಳ್ಳುತ್ತಿದ್ದರು. ಕಳೆದ ವರ್ಷದ ಮಹಾಮಳೆಯಂತೂ ಕೃಷಿ ಕ್ಷೇತ್ರದ ಮೇಲೆ ಗಧಾಪ್ರಹಾರ ಮಾಡಿದ್ದು, ಈ ವರ್ಷ ಗಣನೀಯ ಪ್ರಮಾಣದಲ್ಲಿ ಕೃಷಿ ಇಳಿಕೆಯಾಗುವ ಸಾಧ್ಯತೆಯಿದೆ.

-ವಿಜಯ್ ಹಾನಗಲ್