ಮಡಿಕೇರಿ, ಜು. 13: ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆಯೊಂದಿಗೆ ದೇಶದ ಕ್ರೀಡಾರಂಗಕ್ಕೆ ಕೊಡಗಿನ ಹಲವಾರು ಪ್ರತಿಭೆಗಳು ಕಾಣಿಕೆ ನೀಡಿದ್ದಾರೆ. ಬಹುತೇಕ ಎಲ್ಲಾ ಕ್ರೀಡೆಗಳಲ್ಲೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೊಡಗಿನ ಕ್ರೀಡಾಕಲಿಗಳು ಪದಕ-ಕೀರ್ತಿ ತಂದಿದ್ದಾರೆ. ಆದರೆ, ಕ್ರಿಕೆಟ್ ಎಂಬ ಪ್ರಸ್ತುತದ ಭಾರೀ ಜನಪ್ರಿಯತೆ ಹೊಂದಿರುವ ಕ್ರೀಡೆಯಲ್ಲಿ ಜಿಲ್ಲೆಯವರಾದ ಅಯ್ಯುಡ ರಾಬಿನ್ ಉತ್ತಪ್ಪ ಅವರು ಮಾತ್ರ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದಾರೆ.ದೇಶೀಯ ಕ್ರಿಕೆಟ್‍ನಲ್ಲಿ ರಣಜಿ, ಐಪಿಎಲ್, ಕೆಪಿಎಲ್‍ನಂತಹ ಪಂದ್ಯಾವಳಿಗಳಲ್ಲೂ ಕೆಲವರು ಸಾಧನೆ ತೋರಿದ್ದಾರಾದರೂ ದೇಶವನ್ನು ಪ್ರತಿನಿಧಿಸುವಷ್ಟರ ಮಟ್ಟಕ್ಕೆ ತಲಪಿಲ್ಲ. ದೇಶೀಯ ಕ್ರಿಕೆಟ್‍ನಲ್ಲಿ ಎನ್.ಸಿ. ಅಯ್ಯಪ್ಪ, ಶ್ಯಾಮ್ ಪೊನ್ನಪ್ಪ, ಕೆ.ಸಿ. ಕಾರ್ಯಪ್ಪ, ಕೆ.ಪಿ. ಅಪ್ಪಣ್ಣ ಹೀಗೆ ಹಲವರ ಹೆಸರು ಇದೆ. ಇದೀಗ ಈ ಎಲ್ಲರೊಂದಿಗೆ ಕೆಲವು ಕಿರಿಯರು ಕ್ರಿಕೆಟ್‍ನಲ್ಲಿ ತಮ್ಮ ಪ್ರತಿಭೆ ತೋರುವ ಮೂಲಕ ಮುಂದೊಂದು ದಿನ ರಾಜ್ಯ-ದೇಶವನ್ನು ಪ್ರತಿನಿಧಿಸಲಿದ್ದಾರೆಯೇ... ಎಂಬ ಹೊಸ ನಿರೀಕ್ಷೆ ಮೂಡಿಸುತ್ತಿದ್ದಾರೆ.

ಕ್ಯಾ. ಕೆ. ತಿಮ್ಮಪ್ಪಯ್ಯ ಕ್ರಿಕೆಟ್‍ನಲ್ಲಿ ಹೊಸ ಮಿಂಚುರಣಜಿ ಪಂದ್ಯಾವಳಿಯ ಮಾದರಿಯಲ್ಲಿ ವಿವಿಧ ರಾಜ್ಯದ ಪ್ರತಿಷ್ಠಿತ ತಂಡಗಳ ಪಾಲ್ಗೊಳ್ಳುವಿಕೆ ಯೊಂದಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ) ಮೂಲಕ ಆಯೋಜಿಸಲ್ಪಡುವ ಕ್ಯಾಪ್ಟ್ಟನ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಪಂದ್ಯಾವಳಿ ಪ್ರಸ್ತುತ ಜರುಗುತ್ತಿದ್ದು, ಈ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳ ಸುಮಾರು 16 ತಂಡಗಳು ಪಾಲ್ಗೊಂಡಿವೆ. ಇದಲ್ಲದೆ ವಿದೇಶದ ಬಾಂಗ್ಲಾದೇಶದ ತಂಡವೊಂದು ಕೂಡ ಇದರಲ್ಲಿ ಪಾಲ್ಗೊಂಡಿದೆ.

ಈ ಪಂದ್ಯಾವಳಿಗೆ ರಣಜಿ ಪಂದ್ಯದಷ್ಟೇ ಮಹತ್ವವಿದ್ದು, ಇಲ್ಲಿ ಆಟಗಾರರ ಪ್ರದರ್ಶನ ಭವಿಷ್ಯದ ರಣಜಿ ತಂಡದ ಆಯ್ಕೆಗೂ ಪೂರಕವಾಗಿರಲಿದೆ. ಈ ಪಂದ್ಯಾವಳಿಯಲ್ಲಿ ಕರ್ನಾಟಕ ನಾಲ್ಕು ತಂಡಗಳನ್ನು ಹೊಂದಿದೆ. ಕೆ.ಎಸ್.ಸಿ.ಎ. ಇಲವೆನ್, ಕೆ.ಎಸ್.ಸಿ.ಎ. ಪ್ರೆಸಿಡೆಂಟ್ಸ್ ಇಲವೆನ್, ಕೆ.ಎಸ್.ಸಿ.ಎ. ಸೆಕ್ರಟರೀಸ್ ಇಲವೆನ್ ಹಾಗೂ ಕೆ.ಎಸ್.ಸಿ.ಎ. ಕೋಲ್ಟ್ಸ್ ತಂಡಗಳು ಈ ಪ್ರಶಸ್ತಿಗಾಗಿ ಸೆಣಸಲಿವೆ.

ಕೊಡಗಿನ ಐವರು: ಈ ಪಂದ್ಯಾವಳಿಯಲ್ಲಿ ಕೊಡಗಿನ ಐದು ಆಟಗಾರರು

(ಮೊದಲ ಪುಟದಿಂದ) ವಿವಿಧ ತಂಡಗಳಲ್ಲಿ ಸ್ಥಾನ ಪಡೆದಿದ್ದು, ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಐಪಿಎಲ್ ಕ್ರಿಕೆಟ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕೊಂಗಾಂಡ ಸಿ. ಕಾರ್ಯಪ್ಪ ಹಾಗೂ ಚೇಂದಂಡ ಆದಿತ್ಯ ಸೋಮಣ್ಣ ಪ್ರೆಸಿಡೆಂಟ್ಸ್ ಇಲವೆನ್ ತಂಡದಲ್ಲಿದ್ದರೆ, ಕೆ.ಎಸ್.ಸಿ.ಎ. ಸೆಕ್ರಟರೀಸ್ ಇಲವೆನ್ ಅನ್ನು ಕಂಡ್ರತಂಡ ಎಸ್. ದೇವಯ್ಯ, ಕೋದಂಡ ಕಾರ್ತಿಕ್ ಹಾಗೂ ಮಾಚಿಮಂಡ ವಿದ್ವತ್ ಕಾವೇರಪ್ಪ ಪ್ರತಿನಿಧಿಸುತ್ತಿದ್ದಾರೆ.

ಕಾರ್ತಿಕ್‍ಗೆ 6 ವಿಕೆಟ್, ದೇವಯ್ಯ-8

ಪ್ರಸ್ತುತ ಬೆಂಗಳೂರಿನಲ್ಲಿ ನಡೆದ ನಾಲ್ಕು ದಿನಗಳ ಮೊದಲ ಪಂದ್ಯದಲ್ಲಿ ಕೆ.ಎಸ್.ಸಿ.ಎ. ಸೆಕ್ರಟರೀಸ್ ಇಲವೆನ್ ಮುಂಬೈಯ ಡಿ.ವೈ. ಪಾಟೀಲ್ ಅಕಾಡೆಮಿ ತಂಡದ ವಿರುದ್ಧ ಜಯಗಳಿಸಿ ಪೂರ್ಣ ಆರು ಅಂಕ ಸಂಪಾದಿಸಿದೆ. ಈ ಜಯದಲ್ಲಿ ಕೊಡಗಿನವರಾದ ಕಾರ್ತಿಕ್ ಹಾಗೂ ದೇವಯ್ಯ ಪ್ರಮುಖ ಪಾತ್ರವಹಿಸಿದ್ದಾರೆ. ಮೊದಲ ಇನ್ನಿಂಗ್ಸ್‍ನಲ್ಲಿ ಆಲ್ ರೌಂಡರ್ ಕಾರ್ತಿಕ್ 6 ವಿಕೆಟ್ ಪಡೆದು ಸಾಧನೆ ಮಾಡಿದ್ದರೆ ದ್ವಿತೀಯ ಇನ್ನಿಂಗ್ಸ್‍ನಲ್ಲಿ ಕಂಡ್ರತಂಡ ಎಸ್. ದೇವಯ್ಯ ಕೇವಲ 28 ರನ್ ನೀಡಿ 8 ವಿಕೆಟ್ ಕಬಳಿಸುವ ಮೂಲಕ ಮಿಂಚಿದ್ದಾರೆ. ಈ ತಂಡ ಮುಂದಿನ ಪಂದ್ಯದಲ್ಲಿ ವಿದರ್ಭ ತಂಡವನ್ನು ಎದುರಿಸಲಿದೆ.

-ಶಶಿ ಸೋಮಯ್ಯ