ಮಡಿಕೇರಿ, ಜು. 13: ಜಿಲ್ಲೆಯ ವಿವಿಧೆಡೆಗಳಲ್ಲಿ ಶೈಕ್ಷಣಿಕ ಸಂಸ್ಥೆಗಳ ಚಟುವಟಿಕೆ ಜರುಗಿತು.
ಗೋಣಿಕೊಪ್ಪ ವರದಿ: ಎನ್‍ಡಿಎ ಮತ್ತು ನೀಟ್ ಪರೀಕ್ಷೆ ಬರೆಯಲು ಪ್ರೌಢಶಾಲಾ ಮಟ್ಟದಲ್ಲಿಯೇ ಪೂರಕ ಸಿದ್ಧತೆ ನಡೆಸಿಕೊಳ್ಳುವದು ಸೂಕ್ತ ಎಂದು ಹುದಿಕೇರಿ ತಪಸ್ಯ ಶಾಲೆಯ ಮುಖ್ಯಸ್ಥ ಪೃಥ್ವಿ ಪೂಣಚ್ಚ ಸಲಹೆ ನೀಡಿದರು.
ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಎನ್‍ಡಿಎ ಮತ್ತು ನೀಟ್ ಪರೀಕ್ಷೆ ಎದುರಿಸುವ ಬಗ್ಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಈ ಸಂದರ್ಭ ಪ್ರಾಂಶುಪಾಲ ಸಣ್ಣುವಂಡ ಎಸ್. ಮಾದಯ್ಯ, ಪ್ರಾಧ್ಯಾಪಕ ಚೇತನ್ ಚಿಣ್ಣಪ್ಪ ಇದ್ದರು.
ಕರಿಕೆ: ಇಲ್ಲಿನ ಸರಕಾರಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದಲ್ಲಿ ಜನಸಂಖ್ಯಾ ದಿನಾಚರಣೆ, ಸಮುದಾಯ ಜಾಗತೀಕರಣ ಪಾಕ್ಷಿಕ ಮತ್ತು ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಭಾಗಮಂಡಲ ವೈದ್ಯಾಧಿಕಾರಿ ಡಾ. ಪೊನ್ನಮ್ಮ ಅವರು ಆರು ತಿಂಗಳಿನಿಂದ ಒಂದುವರೆ ವರ್ಷದವರೆಗಿನ ಮಕ್ಕಳ ತೂಕ ಎತ್ತರ ಮತ್ತು ತೋಳಿನ ಸುತ್ತಳತೆ, ಆರೋಗ್ಯ ತಪಾಸಣೆಯನ್ನು ನಡೆಸಿದರು. ಈ ಸಂದರ್ಭ ಆರೋಗ್ಯವಂತ ಮಕ್ಕಳನ್ನು ಗುರುತಿಸಿ ಕಿರುಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಕವಿತಾ, ಗ್ರಾಮ ಪಂಚಾಯಿತಿ ಸದಸ್ಯರು, ಕಿರಿಯ ಆರೋಗ್ಯ ಸಹಾಯಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಕೂಡಿಗೆ: ಯಡವಾರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಯಡವಾರೆ ಗ್ರಾಮದ ಕಾಫಿ ಬೆಳೆಗಾರರಾದ ವಿಶ್ವನಾಥ್‍ರಾಜ್ ಅರಸು ಅವರ ಪತ್ನಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ನಂದಿನಿ ವಿಶ್ವನಾಥ್‍ರಾಜ್ ಅರಸು ಅವರು ರೂ. 17,000 ಮೌಲ್ಯದ ಅಕ್ವಾಗಾರ್ಡ್ ನೀರಿನ ಫಿಲ್ಟರ್ ಅನ್ನು ಕೊಡುಗೆ ನೀಡಿದ್ದಾರೆ.
ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ.ಡಿ. ಜನಾರ್ಧನ್, ಶಾಲಾ ಮುಖ್ಯಶಿಕ್ಷಕ ವೈ.ಸಿ. ಕುಮಾರ್, ಸಹ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು.ಕೂಡಿಗೆ: ಕೂಡಿಗೆಯ ಕ್ರೀಡಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶ್ರಮದಾನ ಕಾರ್ಯಕ್ರಮ ನಡೆಯಿತು.
ಆರೋಗ್ಯ ಕೇಂದ್ರದ ಹಿಂಭಾಗದ ಆವರಣದಲ್ಲಿ ಬೆಳೆದು ನಿಂತಿದ್ದ ಪಾರ್ಥೇನಿಯಂ ಗಿಡ ಹಾಗೂ ಕುರುಚಲು ಗಿಡದೊಂದಿಗೆ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭ ಮಾತನಾಡಿದ ಕ್ರೀಡಾ ಶಾಲೆಯ ಅಥ್ಲೇಟಿಕ್ ತರಬೇತುದಾರ ಅಂತೋಣಿ ಡಿಸೋಜ, ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲಿಯೂ ತೊಡಗಿಕೊಳ್ಳುವದು ಮುಖ್ಯ. ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರ ಜೊತೆಗೆ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವದು ಅತಿಮುಖ್ಯವಾಗಿರುತ್ತದೆ ಎಂದರು.
ಈ ಸಂದರ್ಭ ಹಾಕಿ ತರಬೇತುದಾರ ವೆಂಕಟೇಶ್, ಜಿಮ್ನಾಸ್ಟಿಕ್ ತರಬೇತುದಾರ ಕೆ.ವಿ. ಜಗದೀಶ್ ಸೇರಿದಂತೆ 150ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಚೆಟ್ಟಳ್ಳಿ: ವಿದ್ಯೆಯೊಂದಿಗೆ ಇತರ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತೊಡಗಿಸಿ ಕೊಳ್ಳಬೇಕು ಎಂದು ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ಕಿರಿಯ ಸಂಪರ್ಕಾಧಿಕಾರಿ ಅಕ್ಷಿತಾ ಹೇಳಿದರು.
ಚೆಟ್ಟಳ್ಳಿ ಪ್ರೌಢಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಶಾಲೆಗಳಲ್ಲಿ ವಿದ್ಯಾರ್ಥಿ ಸಂಘ ಸೇರಿದಂತೆ ಇತರೆ ಕಾರ್ಯಚಟುವಟಿಕೆ ಇರುವ ಸಂಘದ ಸ್ಥಾಪನೆ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಭಾರ ಮುಖ್ಯೋಪಾಧ್ಯಾಯ ಜಿ.ಸಿ. ಸತ್ಯನಾರಾಯಣ, ಆತ್ಮವಿಶ್ವಾಸ, ನಾಯಕತ್ವ ಗುಣ ಬೆಳಸಿಕೊಳ್ಳಲು ವಿದ್ಯಾರ್ಥಿ ಸಂಘ ಅವಶ್ಯಕವಾಗಿದೆ ಎಂದರು.
ಶಾಲಾ ಸಂಘದ ವಿವಿಧ ಖಾತೆಯ ನಾಯಕರುಗಳು ಪ್ರತಿಜ್ಞಾ ವಿಧಿ ನಡೆಯಿತು. ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭ ಶಿಕ್ಷಕರಾದ ತಿಲಕಾ, ಸುನಂದಾ, ಫಸೀಲ, ಮನೋಜ್, ಸತೀಶ್, ಪ್ರಸನ್ನ ಇದ್ದರು.
ನಾಪೋಕ್ಲು: ನೀರು ಪ್ರತಿ ಜೀವಿಗೆ ಅತ್ಯಮೂಲ್ಯವಾಗಿದ್ದು ನೀರಿನ ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೋಳೆರ ದಯಾ ಚೆಂಗಪ್ಪ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವೀರಾಜಪೇಟೆಯ ಬಿಸಿ ಟ್ರಸ್ಟ್ ಹಾಗೂ ಹುದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಪರಿಸರ ಮಾಹಿತಿ ಹಾಗೂ ಗಿಡನಾಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಜನಾಧಿಕಾರಿ ಸದಾಶಿವಗೌಡ ಮಾತನಾಡಿ, ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಪರಿಸರಕ್ಕೆ ಕೊಡುಗೆ ನೀಡಬಹುದು ಎಂದರು. ಶಾಲಾ ಮುಖ್ಯ ಶಿಕ್ಷಕಿ ಇಂದಿರಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಬಿ. ಶಂಕರನಾರಾಯಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ನಿಷ್ಮ, ಕೃಷಿ ಮೇಲ್ವಿಚಾರಕ ಚೇತನ್, ವಲಯ ಮೇಲ್ವಿಚಾರಕ ಶ್ರೀನಿವಾಸ್ ಸೇವಾ ಪ್ರತಿನಿಧಿಗಳಾದ ರೋಹಿಣಿ, ಕುಮಾರಿ, ಶಾಲಾ ಶಿಕ್ಷಕ ವೃಂದ ಹಾಗೂ ಸಂಘದ ಸದಸ್ಯರು ಹಾಜರಿದ್ದರು.