ಮಡಿಕೇರಿ, ಜು.13: ಹಳ್ಳಿಗಟ್ಟು ಗ್ರಾಮದ ಡಾ.ಅಂಬೇಡ್ಕರ್ ನಗರದಲ್ಲಿ ವಾಸವಾಗಿರುವ ಸುಮಾರು 70 ಆದಿವಾಸಿ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಷಡ್ಯಂತ್ರ ನಡೆಸಲಾಗುತ್ತಿದ್ದು, ಈ ಜಾಗದಲ್ಲಿ ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ಪಂಚಾಯಿತಿಗಳ ಕಸವನ್ನು ತಂದು ಸುರಿಯುವ ಮೂಲಕ ತೊಂದರೆ ನೀಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಬಹುಜನ ಕಾರ್ಮಿಕರ ಸಂಘದ ಗ್ರಾಮ ಸಮಿತಿ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಹಳ್ಳಿಗಟ್ಟು ಗ್ರಾಮ ಸಮಿತಿ ಅಧ್ಯಕ್ಷೆ ಪಿ.ಎ.ತಾಯಮ್ಮ ಅವರು, ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಗ್ರಾಮದ ಸ.ನಂ. 205/1ರಲ್ಲಿ ಅಂಬೇಡ್ಕರ್ ನಗರದಲ್ಲಿ ಸುಮಾರು 70 ಕುಟುಂಬಗಳು ಕಳೆದ 20 ವರ್ಷಗಳಿಂದ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಈ ಕುಟುಂಬಗಳಿಗೆ ನವ ಗ್ರಾಮ ಯೋಜನೆಯಡಿ ನಿವೇಶನ ಕೊಡಿಸಲು ಅರುವತ್ತೊಕ್ಲು ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯವಾಗಿ ವೀರಾಜಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯವರು ವರದಿಯನ್ನೂ ನೀಡಿದ್ದಾರೆ. ಅದರಂತೆ ಅಲ್ಲಿ ವಾಸವಿರುವ ಕುಟುಂಬಗಳಿಗೆ ಪಂಚಾಯಿತಿಯು ಕಂದಾಯ ವಿಧಿಸಿ, ಕಳೆದ 5 ವರ್ಷಗಳಿಂದ ಪಾವತಿ ಮಾಡಿಸಿಕೊಂಡಿದೆ. ಅಲ್ಲದೆ ಸರಕಾರವೇ ಈ ಪ್ರದೇಶದಲ್ಲಿ ಅಂಗನವಾಡಿಯನ್ನೂ ನಿರ್ಮಿಸಿಕೊಟ್ಟಿದೆ. ಆದರೆ ಇತ್ತೀಚಿನ ಎರಡು ವರ್ಷಗಳ ಹಿಂದೆ ಸರಕಾರದ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ, ಪರಿಶಿಷ್ಟ ಪಂಗಡದ ಕುಟುಂಬಗಳು ವಾಸವಿರುವ ಕಾಲೋನಿಯ ಮಧ್ಯಭಾಗದಲ್ಲಿ ಗೋಣಿಕೊಪ್ಪಲು ಮತ್ತು ಪೊನ್ನಂಪೇಟೆ ಗ್ರಾಮ ಪಂಚಾಯಿತಿಯವರಿಗೆ ಕಸವಿಲೇವಾರಿಗೆ ಎರಡು ಎಕರೆ ಜಾಗವನ್ನು ಮಂಜೂರು ಮಾಡಲಾಗಿದೆ. ಜಾಗ ಮಂಜೂರಾತಿಯ ಹಿಂದೆ ಈ ಜಾಗದಿಂದ ಪರಿಶಿಷ್ಟ ಪಂಗಡದವರನ್ನು ಒಕ್ಕಲೆಬ್ಬಿಸುವ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.
ಕಸವನ್ನು ತಂದು ಸುರಿಯುವ ಮೂಲಕ ಕೊಳವೆ ಬಾವಿಗಳ ನೀರನ್ನು ಕಲುಷಿತಗೊಳಿಸಲಾಗಿದೆ. ಕೊಳವೆ ಬಾವಿ ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ ಅದು ಕುಡಿಯಲು ಯೋಗ್ಯವಿಲ್ಲ ಎಂಬ ವರದಿ ಬಂದಿದೆ ಎಂದು ಹೇಳಿದರು.
ಇಲ್ಲಿಯೇ ಕಸ ವಿಲೇವಾರಿ ಮಾಡಲು ಮುಂದಾದಲ್ಲಿ ನಾವುಗಳು ಯಾವದೇ ಕಾರಣಕ್ಕೂ ಜಾಗ ಬಿಟ್ಟುಕೊಡಲು ಸಿದ್ಧರಿಲ್ಲ ಮತ್ತು ಕಸ ಹಾಕಲು ಅವಕಾಶ ನೀಡುವದಿಲ್ಲವೆಂದು ಸ್ಪಷ್ಟಪಡಿಸಿದರು. ನಾವುಗಳು ವಾಸಿಸುವ ಜಾಗದ ಹಕ್ಕಿಗೆ ಸಂಬಂಧಿಸಿದ ವಿಚಾರವನ್ನು ಜಿಲ್ಲಾಡಳಿತ ಸೂಕ್ತರೀತಿಯಲ್ಲಿ ಪರಿಹರಿಸದಿದ್ದಲ್ಲಿ ಎಲ್ಲಾ ಕುಟುಂಬಗಳು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬಹುಜನ ಕಾರ್ಮಿಕರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಪಿ.ಎ. ಕುಸುಮಾ, ಹಳ್ಳಿಗಟ್ಟುವಿನ ವೈ.ಎಂ. ಸುಬ್ರಮಣಿ, ಹೆಚ್.ಎನ್.ಗಣೇಶ, ವೈ.ಆರ್. ರತ್ನ ಪಿ.ಎಲ್. ಕುಸುಮ ಉಪಸ್ಥಿತರಿದ್ದರು.