ಬೆಂಗಳೂರು, ಜು. 13: ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕೂಟದ ಆಡಳಿತ ಉಳಿಸಲು, ಹೆಚ್. ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಕಾಂಗ್ರೆಸ್ ಪ್ರಮುಖರು ಸತತ ಪ್ರಯತ್ನ ನಡೆಸಿದ್ದಾರೆ. ಛಲದಂಕಮಲ್ಲ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರುಗಳು ರಾಜೀನಾಮೆ ನೀಡಿರುವ ಹಲವು ಅತೃಪ್ತ ಕಾಂಗ್ರೆಸ್ ಶಾಸಕರ ಮನವೊಲಿಕೆಗೆ ಸತತ ಪ್ರÀಯತ್ನ ಮುಂದುವರಿದಿದೆ.
ಜುಲೈ ಹದಿನಾರರವರೆಗೆ ಯಾರನ್ನೂ ಅನರ್ಹಗೊಳಿಸಬಾರದು, ಯಾರ ರಾಜೀನಾಮೆಯನ್ನೂ ಆಂಗೀಕರಿಸಬಾರದು ಎನ್ನುವ ಸರ್ವೋಚ್ಚ ನ್ಯಾಯಾಲಯದಿಂದ ಶುಕ್ರವಾರದ ತೀರ್ಪಿನ ಬಳಿಕ ರಾಜಕೀಯ ಬೆಳವಣಿಗೆ ಇನ್ನೂ ಚುರುಕಾಗುತ್ತಿದೆ. ತಡರಾತ್ರಿ ಎನ್ನದೇ, ಬೆಳ್ಳಂಬೆಳಗ್ಗೆ ಎನ್ನದೇ ಮೈತ್ರಿ ಪಕ್ಷದ ಮುಖಂಡರು, ಅದರಲ್ಲೂ ಪ್ರಮುಖವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜಲಸಂಪನ್ಮೂಲ ಖಾತೆಯ ಸಚಿವ ಡಿ.ಕೆ. ಶಿವಕುಮಾರ್ ಅವರು ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಮೊದಲಿಗೆ ಬೇಕಾಗಿರುವ ಐದು ಶಾಸಕರನ್ನು ಪಕ್ಷದ ವಿರುದ್ಧ ಮತಚಲಾಯಿಸದಂತೆ ಮತ್ತು ವಿಶ್ವಾಸಮತದಂದು ಗೈರಾಗದಂತೆ ನೋಡಿಕೊಳ್ಳುವದು ಅವಶ್ಯಕವಾಗಿರುವದರಿಂದ, ಆ ಬಗ್ಗೆ ಮೈತ್ರಿಪಕ್ಷಗಳು ಕಾರ್ಯತಂತ್ರ ರೂಪಿಸುತ್ತಿವೆ. ಕೆಲವೊಂದು ಮೂಲಗಳ ಪ್ರಕಾರ, ಅದನ್ನು ಪಡೆಯಲು ಬಹುತೇಕ ಯಶಸ್ವಿಯಾಗುವತ್ತ ಸಾಗುತ್ತಿದ್ದಾರೆ.
ಬೆಳಗ್ಗಿನ ಸೂರ್ಯೋದಯಕ್ಕೂ ಮೊದಲೇ ರಾಜೀನಾಮೆ ನೀಡಿರುವ ವಸತಿ ಸಚಿವ ಎಂಟಿಬಿ ನಾಗರಾಜ್ ಮನೆಯಲ್ಲಿ ಠಿಕಾಣಿ ಕೂತಿದ್ದ ಡಿ ಕೆ ಶಿವಕುಮಾರ್, ಅವರನ್ನು ಒಂದು ಹಂತಕ್ಕೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವ ಸುದ್ದಿಯಿದೆ. ಬಳಿಕ ಸಿದ್ದರಾಮಯ್ಯ ಅವರು ಮನವೊಲಿಕೆಗೆ ಪ್ರಯತ್ನ ಮುಂದುವರಿಸಿದ್ದಾರೆ.
ಮುಂಗಾರು ಅಧಿವೇಶನದ ಮೊದಲ ದಿನ, ಸುಮಾರು ನಲವತ್ತು ನಿಮಿಷಕ್ಕೂ ಹೆಚ್ಚುಹೊತ್ತು ಡಿ.ಕೆ. ಶಿವಕುಮಾರ್, ಜಯನಗರದ ಶಾಸಕಿ ಸೌಮ್ಯಾ ರೆಡ್ಡಿಯವರ ಜೊತೆಗೆ ಮಾತುಕತೆ ನಡೆಸಿದ್ದರು. ಇದರ ಜೊತೆಗೆ, ಅಂಜಲಿ ನಿಂಬಾಳ್ಕರ್ ಜೊತೆಗೂ ಚರ್ಚಿಸಿದ್ದರು. ಇವರಿಬ್ಬರ ಹೆಸರು ಅತೃಪ್ತರ ಪಟ್ಟಿಗೆ ಹೋಗುವ ಸಾಧ್ಯತೆಯಿತ್ತು ಎಂದು ಹೇಳಲಾಗುತ್ತಿತ್ತು.
“ನನ್ನದು ಮತ್ತು ರಾಮಲಿಂಗಾರೆಡ್ಡಿದ್ದು ನಲವತ್ತು ವರ್ಷದ ಸ್ನೇಹ, ಮನೆ ಎಂದ ಮೇಲೆ ಡಿಫರೆನ್ಸಸ್ ಸಾಮಾನ್ಯ, ನಾವೆಲ್ಲಾ ಒಂದೇ ಕುಟುಂಬದವರು” ಎಂದು ತಮ್ಮ ಎಂದಿನ ಡೈಲಾಗ್ ಅನ್ನು ಡಿ.ಕೆ. ಶಿವಕುಮಾರ್ ಹೊಡೆದಿದ್ದರು. ವಿಧಾನ ಸಭಾಧಿವೇಶನಕ್ಕೆ ಹಾಜರಾಗುವದಾಗಿ ರೆಡ್ಡಿ ಹೇಳಿರುವದರಿಂದ, ಸಮ್ಮಿಶ್ರ ಸರಕಾರ ನಿಟ್ಟುಸಿರು ಬಿಟ್ಟಂತಾಗಿದೆ.
ಎಂಟಿಬಿ ನಾಗರಾಜ್ ಜೊತೆ ಮಾತುಕತೆಯ ವೇಳೆ ಸಚಿವ ರೇವಣ್ಣ ವಿರುದ್ಧ ಎಂಟಿಬಿ ಕಿಡಿಕಾರಿದ್ದರು. ರೇವಣ್ಣ ಅವರ ಜವಾಬ್ದಾರಿಯನ್ನು ನಾನು ವಹಿಸಿಕೊಂಡು ಎಲ್ಲಾ ಸರಿದಾರಿಗೆ ತರುತ್ತೇನೆಂದು ಕುಮಾರಸ್ವಾಮಿ ಎಂಟಿಬಿಗೆ ವಾಗ್ದಾನ ಮಾಡಿದ್ದಾರೆ ಎನ್ನುವ ಸುದ್ದಿಯಿದೆ. ಎಂಟಿಬಿ ನಾಗರಾಜ್ ಅವರನ್ನು ಮಾಧ್ಯಮದವÀರ ಮುಂದೆ ತಬ್ಬಿಕೊಂಡ ಡಿಕೆಶಿ ನಂತರ ಅವರನ್ನು ಸಿದ್ದರಾಮಯ್ಯನವರ ನಿವಾಸಕ್ಕೆ ಬಿಟ್ಟು ಬಂದರು.
ಸಿದ್ದರಾಮಯ್ಯ ಮಾತನ್ನು ಸುಧಾಕರ್ ಮೀರುವದಿಲ್ಲ ಎಂಟಿಬಿ ನಾಗರಾಜ್ ಜೊತೆಗಿನ ಮಾತುಕತೆ ಒಂದು ಹಂತಕ್ಕೆ ಯಶಸ್ವಿಯಾದ ನಂತರ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಅವರನ್ನು ಮನವೊಲಿಸಲು ಅವರ ಮನೆಗೆ ತೆರಳಿದಾಗ, ಅವರು ಮನೆಯಲ್ಲಿರಲಿಲ್ಲ. ಸುಧಾಕರ್ ಅವರನ್ನೂ ಮನವೊಲಿಸುವಲ್ಲಿ ಸಮ್ಮಿಶ್ರ ಸರಕಾರ ಯಶಸ್ವಿಯಾಗಬಹುದು, ಏಕೆಂದರೆ ಸಿದ್ದರಾಮಯ್ಯ ಮಾತನ್ನು ಸುಧಾಕರ್ ಮೀರುವದಿಲ್ಲ ಎನ್ನುವ ಮಾತಿದೆ. ಆದರೆ, ಸುಧಾಕರ್ ತಮ್ಮ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿದ್ದು ಇನ್ನೂ ಈ ಬಗ್ಗೆ ಸ್ಪಷ್ಟತೆ ಲಭ್ಯವಾಗಿಲ್ಲ.
ಈ ನಡುವೆ ರೋಷನ್ ಬೇಗ್ ಕೂಡಾ ಕುಮಾರಸ್ವಾಮಿ ಜೊತೆಗಿನ ಮಾತುಕತೆಯ ನಂತರ ಸಮಾಧಾನಗೊಂಡಿದ್ದಾರೆ ಎನ್ನುವ ಸುದ್ದಿಯಿದೆ. ಬುಧವಾರ (ಜುಲೈ 17) ವಿಶ್ವಾಸಮತ ಪಡೆಯುವ ಸಾಧ್ಯತೆಯಿದೆ. ಹೀಗಾಗಿ, ಇನ್ನುಳಿದಿರುವ ಎರಡು ಮೂರು ದಿನಗಳನ್ನು ಪ್ರಮುಖವಾಗಿ ಡಿ ಕೆ ಶಿವಕುಮಾರ್ ಭರ್ಜರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ.
ಅನರ್ಹತೆ ಕುರಿತು ‘ಅಫಿಡವಿಟ್’
ಇಬ್ಬರು ಶಾಸಕರ ಅನರ್ಹತೆಗೆ ಕೋರಿ ಕಾಂಗ್ರೆಸ್ ಫೆಬ್ರವರಿ ತಿಂಗಳಿನಲ್ಲಿಯೇ ಸ್ಪೀಕರ್‍ಗೆ ಅರ್ಜಿ ಸಲ್ಲಿಸಿತ್ತು ಎನ್ನುವದು ತಿಳಿದುಬಂದಿದೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರ ವಿರುದ್ಧ ಅನರ್ಹತೆಗಾಗಿ ಕಾಂಗ್ರೆಸ್ ಫೆಬ್ರವರಿ 11ರಂದೇ ದೂರು ನೀಡಿತ್ತು. ಈ ಬಗ್ಗೆ ಶುಕ್ರವಾರ ಸುಪ್ರೀಂಕೋರ್ಟ್‍ಗೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಸ್ಪೀಕರ್ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರದ ವಿರುದ್ಧ ರಮೇಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕೆಲವು ಶಾಸಕರು ಬಂಡಾಯವೆದ್ದಿದ್ದರು. ಸತತ ಪ್ರಯತ್ನದ ಬಳಿಕ ಅವರ ಬಂಡಾಯ ಶಮನ ಮಾಡಲಾಗಿತ್ತು. ಆದರೆ, ರಮೇಶ್ ಜಾರಕಿಹೊಳಿ ಅವರು ಸರ್ಕಾರದಿಂದ ಅಂತರ ಕಾಯ್ದುಕೊಂಡು ತಮ್ಮ ಅಸಮಾಧಾನ ಹೊರಹಾಕುತ್ತಿದ್ದರು. ಕಾಂಗ್ರೆಸ್ ನಾಯಕರೊಂದಿಗೆ ಅವರು ಮಾತುಕತೆಗೆ ಸಿದ್ಧರಿರಲಿಲ್ಲ. ಇದೇ ಸಂದರ್ಭದಲ್ಲಿ ಸರ್ಕಾರ ಅವರ ವಿರುದ್ಧ ದೂರು ನೀಡಿತ್ತು.
ಸುಪ್ರೀಂಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿರುವ ಸ್ಪೀಕರ್ ರಮೇಶ್ ಕುಮಾರ್ ಅವರು, ಈ ಶಾಸಕರು ಸ್ಪೀಕರ್ ಕುರ್ಚಿಯ ಘನತೆಗೆ ಧಕ್ಕೆ ತರಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ್ತೆ ಐವರು ಶಾಸಕರ ಅರ್ಜಿ
ರಾಜ್ಯ ರಾಜಕಾರಣದ ಹಣೆಬರಹ ಏನಾಗಲಿದೆ ಎಂಬುದು ಮಂಗಳವಾರ ನಿರ್ಧಾರವಾಗಲಿದೆ ಎಂಬ ಕುತೂಹಲದ ನಡುವೆಯೇ ಮತ್ತೊಂದು ತಿರುವು ಪಡೆದುಕೊಂಡಿದೆ. ತಮ್ಮ ರಾಜೀನಾಮೆಗಳನ್ನು ಅಂಗೀಕರಿಸುವಲ್ಲಿ ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇನ್ನೂ ಐವರು ಅತೃಪ್ತ ಶಾಸಕರು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ರಾಜೀನಾಮೆ ಸಲ್ಲಿಸಿರುವ 16 ಶಾಸಕರ ಪೈಕಿ ಹತ್ತು ಮಂದಿ ಶಾಸಕರು ಈ ಮೊದಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈಗ ಎಂಟಿಬಿ ನಾಗರಾಜ್, ರೋಷನ್ ಬೇಗ್, ಆನಂದ್ ಸಿಂಗ್, ಮುನಿರತ್ನ ಮತ್ತು ಕೆ. ಸುಧಾಕರ್ ಕೂಡ ರಾಜೀನಾಮೆ ವಿಳಂಬದ ವಿರುದ್ಧ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಐವರು ಶಾಸಕರು ಪ್ರತ್ಯೇಕವಾಗಿ ಅಫಿಡವಿಟ್‍ಗಳನ್ನು ಸಲ್ಲಿಸಿದ್ದಾರೆ. ಜತೆಗೆ ಈ ಮೊದಲೇ ಅರ್ಜಿ ಸಲ್ಲಿಸಿದ್ದ ಹತ್ತು ಶಾಸಕರ ಅರ್ಜಿಗಳೊಂದಿಗೆ ತಮ್ಮ ಅರ್ಜಿಯನ್ನೂ ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿರುವದಾಗಿ ವರದಿಯಾಗಿದೆ.
ರಾಜೀನಾಮೆ ಸಲ್ಲಿಸಿ ಇಷ್ಟು ದಿನ ಆದರೂ ಅಂಗೀಕಾರ ಮಾಡಿಲ್ಲ. ಇಷ್ಟು ದಿನ ಏಕೆ ವಿಳಂಬ ಮಾಡಿದ್ದಾರೆ ಎನ್ನುವದು ಗೊತ್ತಿಲ್ಲ. ನಾವು ಸರ್ಕಾರದ ತಾರತಮ್ಯ ಧೋರಣೆಯ ವಿರುದ್ಧ ಬೇಸರದಿಂದ ರಾಜೀನಾಮೆ ನೀಡಿದ್ದೇವೆಯೇ ಹೊರತು ವೈಯಕ್ತಿಕ ಕಾರಣಕ್ಕೆ ಅಲ್ಲ. ನಮ್ಮ ರಾಜೀನಾಮೆಗೆ ಸರ್ಕಾರದ ದುರಾಡಳಿತವೇ ಕಾರಣ. ಇದನ್ನು ಅರ್ಥ ಮಾಡಿಕೊಳ್ಳದೆ ಸ್ಪೀಕರ್ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಈ ಐವರು ನೇರ ಆರೋಪ ಮಾಡಿದ್ದಾರೆ.
ಕುಮಾರಸ್ವಾಮಿ ಬಹುಮತ ಕಳೆದುಕೊಂಡಿರುವದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದ್ಯಾವ ಧೈರ್ಯದಲ್ಲಿ ಬಹುಮತ ಸಾಬೀತು ಪಡಿಸಲು ಹೊರಟಿದ್ದಾರೆ ಎನ್ನುವದು ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ. ಒಂದೆಡೆ ರಾಜೀನಾಮೆ ಅರ್ಜಿಯನ್ನು ಪುರಸ್ಕರಿಸುವಂತೆ ಕೋರಿ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಪಕ್ಷೇತರ ಶಾಸಕರು ಅಧಿವೇಶನದಲ್ಲಿ ವಿರೋಧ ಪಕ್ಷದವರ ಜೊತೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಡುವಂತೆ ಸ್ಪೀಕರ್ ರಮೇಶ್ ಕುಮಾರ್‍ಗೆ ಮನವಿ ಮಾಡಿದ್ದಾರೆ. ಒಟ್ಟು 18 ಶಾಸಕರ ಬಹುಮತವನ್ನು ಕುಮಾರಸ್ವಾಮಿ ಕಳೆದುಕೊಂಡಿದ್ದಾಗಿದೆ. ಇನ್ನೂ ಯಾವ ಭರವಸೆ ಮೇಲೆ ಅವರು ನಿಂತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ಪಕ್ಷ ತ್ಯಜಿಸುವದಿಲ್ಲ ಎಂದು ಹೇಳಿರುವ ಕಾಂಗ್ರೆಸ್‍ನ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಅವರು ಸೋಮವಾರ ನಡೆಯಲಿರುವ ವಿಧಾನಸಭೆಯ ಅಧಿವೇಶನದಲ್ಲಿ ಹಾಜರಾಗುವದಾಗಿ ತಿಳಿಸಿದ್ದಾರೆ.
ಸ್ಪೀಕರ್‍ಗೆ ಪಕ್ಷೇತರರ ಮನವಿ
ಕಾಂಗ್ರೆಸ್‍ನ ಅತೃಪ್ತ ಶಾಸಕರದ್ದಾಯಿತು. ಇದೀಗ ಪಕ್ಷೇತರ ಶಾಸಕರ ಹೊಸ ವರಸೆ ಆರಂಭವಾಗಿದೆ. ವಿರೋಧ ಪಕ್ಷದ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸುವಂತೆ ಪಕ್ಷೇತರ ಶಾಸಕರು ಸ್ಪೀಕರ್ ರಮೇಶ್‍ಕುಮಾರ್‍ಗೆ ಮನವಿ ಮಾಡಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಶಾಸಕರುಗಳ ರೆಸಾರ್ಟ್ ವಾಸ್ತವ್ಯ ಇಂದೂ ಮುಂದುವರಿದಿದೆ.
ಜುಲೈ 17ರಂದು ವಿಶ್ವಾಸಮತ?
ಸೋಮವಾರ ಸಿಎಂ ವಿಶ್ವಾಸ ಮತ ಯಾಚಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು, ಆದರೆ ಜುಲೈ 17 ರಂದು ವಿಶ್ವಾಸ ಮತಯಾಚನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಅನಿಶ್ಚಿತ ಪರಿಸ್ಥಿತಿಯಲ್ಲಿ ವಿಶ್ವಾಸ ಮತಯಾಚಿಸುವದು ಕಷ್ಟದ ವಿಷಯವಾಗಿದೆ ಎಂದು ಸಮ್ಮಿಶ್ರ ಸರ್ಕಾರದ ಸಚಿವರೊಬ್ಬರು ತಿಳಿಸಿದ್ದಾರೆ.