ಕೊಟ್ಟಮುಡಿ ಮಸೀದಿ ತೀರ್ಮಾನ
ಮಡಿಕೇರಿ, ಜು. 13: ಮಾದಕ ವಸ್ತುಗಳ ಮಾರಾಟ, ಸೇವನೆ ಮಾಡುವವರು ಹಾಗೂ ಸಾರ್ವಜನಿಕ ಭಂಗ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಕೊಟ್ಟಮುಡಿ ಹಳೆ ಜುಮ್ಮಾ ಮಸೀದಿ ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ.
ಮಾದಕ ದ್ಯವ್ಯಗಳನ್ನು ಮಾರಾಟ ಮಾಡುವವರನ್ನು, ಸೇವಿಸುವವರು ಕಂಡುಬಂದಲ್ಲಿ ಹಾಗೂ ರಾತ್ರಿ 10 ಗಂಟೆ ನಂತರ ಜಮಾಅತಿಗೆ ಒಳಪಟ್ಟ ಅಂಗಡಿ ಪರಿಸರ ಮತ್ತು ಬಸ್ ತಂಗುದಾಣದಲ್ಲಿ ಸಾರ್ವಜನಿಕ ಭಂಗ ಉಂಟು ಮಾಡುವವರು ಕಂಡು ಬಂದಲ್ಲಿ ನೇರವಾಗಿ ಜಮಾಅತ್ ಮುಖಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗುವದು.
ಮದುವೆ ಸಮಾರಂಭಗಳಲ್ಲಿ ವರನ ಮನೆಯಲ್ಲಾಗಲೀ ಅಥವಾ ವಧುವಿನ ಮನೆಯಲ್ಲಾಗಲೀ ಅನಿಸ್ಲಾಮಿಕ ಕೃತ್ಯಗಳನ್ನು ನಡೆಸುವವರಿಗೆ ಸೂಕ್ತ ದಂಡ ವಿಧಿಸಿ ಜಮಾಅತಿನಿಂದ ಸದಸ್ಯ ಸ್ಥಾನ ವಜಾ ಮಾಡುವದು.
ಮದ್ಯಪಾನ, ಗಾಂಜಾ ಸೇವನೆ ಮಾಡುವವರಿಗೆ ಜಮಾಅತ್ತಿನಿಂದ ಯಾವದೇ ದೃಢೀಕರಣ ಪತ್ರ ನೀಡಲಾಗುವದಿಲ್ಲ. ವಿಚಿತ್ರವಾಗಿ ಹೇರ್ ಕಟ್ಟಿಂಗ್ ಮಾಡಿಸುವವರ ವಿರುದ್ಧ ಜಮಾಅತ್ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ತೀರ್ಮಾನ ಕೈಗೊಂಡಿದೆ.