ಸೋಮವಾರಪೇಟೆ, ಜು. 13: ಪ್ರಯಾಣ ಸಂದರ್ಭ ಎಲ್ಲರೂ ಜಾಗ್ರತೆ ವಹಿಸಬೇಕು. ಸ್ವಯಂಕೃತ ಅಪರಾಧಗಳಿಂದ ಸಂಕಷ್ಟಕ್ಕೆ ಸಿಲುಕಿಕೊಳ್ಳದಂತೆ ಎಚ್ಚರಿಕೆ ಅಗತ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಕರೆ ನೀಡಿದರು.
ಇಲ್ಲಿನ ಸಮೃದ್ಧಿ ಜ್ನಾನವಿಕಾಸ ಕೇಂದ್ರದ ಸದಸ್ಯರಿಗೆ ಆಯೋಜಿಸಲಾಗಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಯಾಣ ಮಾಡುವ ದಾರಿಯಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸುವಾಗ ಹಾಕಿಕೊಂಡಿರುವ ಆಭರಣ, ಹಣ ಹಾಗೂ ಆರೋಗ್ಯದ ಬಗ್ಗೆ ನಿಗಾವಹಿಸುವದು ಅಗತ್ಯ ಇದರೊಂದಿಗೆ ಧರಿಸುವ ಆಭರಣ, ಒಯ್ಯುವ ಹಣವನ್ನು ಪ್ರದರ್ಶನ ಮಾಡದೇ ಸರಳತೆಯನ್ನು ಕಾಪಾಡಿಕೊಂಡರೆ ತನ್ನ ರಕ್ಷಣೆಯನ್ನು ತಾನೇ ಮಾಡಿಕೊಂಡಂತಾಗುತ್ತದೆ ಎಂದು ಕಿವಿಮಾತು ಹೇಳಿದರು.
ಸಾರ್ವಜನಿಕ ವಾಹನದಲ್ಲಿ ಪ್ರಯಾಣಿಸುವಾಗ ಸ್ವಯಂ ಭದ್ರತೆಯನ್ನು ಕಾಪಾಡಿಕೊಳ್ಳಬೇಕು. ಅಪರಿಚಿತರಲ್ಲಿ ತನ್ನನ್ನು ಪರಿಚಯಿಸಿಕೊಂಡು ಅಪಾಯಕ್ಕೆ ದಾರಿ ಮಾಡಿಕೊಳ್ಳಬಾರದು. ಚಿಕ್ಕ ಮಕ್ಕಳ ಜತೆಗೆ ಪ್ರಯಾಣಿಸುವಾಗ ಮಕ್ಕಳ ಬಗ್ಗೆ ಕಾಳಜಿ ವಹಿಸಿಕೊಳ್ಳುವಂತೆ ಸಲಹೆ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಿಂದ ತಯಾರಿಸಲ್ಪಟ್ಟ ಉತ್ಪನ್ನಗಳ ಬಗ್ಗೆ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಪದ್ಮಾ ಮಾಹಿತಿ ನೀಡಿದರು. ಪ.ಪಂ. ಸದಸ್ಯೆ ನಳಿನಿ ಗಣೇಶ್, ಸೇವಾ ಪ್ರತಿನಿಧಿಗಳಾದ ತಾರಾಲಕ್ಷ್ಮೀ ಮತ್ತು ಜ್ಯೋತಿ, ಸಮೃದ್ಧಿ ಜ್ಞಾನವಿಕಾಸ ಕೇಂದ್ರದ ಸದಸ್ಯರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.