ಮಡಿಕೇರಿ, ಜು. 13: ಐತಿಹಾಸಿಕವಾದ ಇಂಗ್ಲೆಂಡ್‍ನ ಲಾಡ್ರ್ಸ್ ಮೈದಾನ ತಾ. 14ರಂದು (ಇಂದು) 12ನೇ ಆವೃತ್ತಿಯ ವಿಶ್ವಕಪ್ ಕ್ರಿಕೆಟ್‍ನ ಅಂತಿಮ ಸಮರಕ್ಕೆ ಸಜ್ಜುಗೊಂಡಿದೆ. ಈ ಬಾರಿಯ ಪಂದ್ಯಾವಳಿಯಲ್ಲಿ ಯಾರೇ ಗೆದ್ದರೂ ಅದು ಹೊಸ ಚಾಂಪಿಯನ್ ಆಗಿ ಹೊರ ಹೊಮ್ಮಲಿದೆ.ಕ್ರಿಕೆಟ್ ಜನಕರೇ ಆಗಿರುವ ಇಂಗ್ಲೆಂಡ್ ತಂಡ ಈ ತನಕ ವಿಶ್ವಕಪ್ ಗೆದ್ದಿಲ್ಲ. ಅದರಂತೆ ಇಂಗ್ಲೆಂಡ್‍ಗೆ ಎದುರಾಳಿಯಾಗಿರುವ ನ್ಯೂಜಿಲ್ಯಾಂಡ್ ಕೂಡ ಇಲ್ಲಿಯವರೆಗೆ ವಿಶ್ವ ಚಾಂಪಿಯನ್ ಪಟ್ಟ ಪಡೆಯುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತಂಡಗಳ ವಿಶ್ವಕಪ್‍ನ ಹೋರಾಟ ಈ ಬಾರಿ ಕುತೂಹಲ ಹೆಚ್ಚಿಸಿದೆ. ಸೆಮಿಫೈನಲ್ ತನಕ ಮುಂಚೂಣಿಯಲ್ಲಿದ್ದ ಭಾರತ ಸೆಮಿಫೈನಲ್‍ನಲ್ಲಿ ನ್ಯೂಜಿಲ್ಯಾಂಡ್ ಎದುರು ಮುಗ್ಗರಿಸುವ ಮೂಲಕ ಶತಕೋಟಿ ಭಾರತೀಯರ ಕನಸು ಭಗ್ನಗೊಂಡಿದೆಯಾದರೂ ಈ ತನಕ ಕಪ್ ಗೆಲ್ಲದ ಎರಡು ತಂಡಗಳ ಫೈನಲ್ ಪ್ರವೇಶದಿಂದ ಕೌತುಕ ಉಳಿಸಿದೆ.