ವೀರಾಜಪೇಟೆ, ಜು. 13: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾ. 29 ರಂದು ಸಾಹಿತ್ಯ ಸಮ್ಮೇಳನ ಅರಮೇರಿ ಕಳಂಚೇರಿ ಮಠದಲ್ಲಿ ನಡೆಯಲಿದೆ. ತಾಲೂಕು ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಅಧ್ಯಕ್ಷತೆಯಲ್ಲಿ ಇಲ್ಲಿನ ಪುರಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಸಾಹಿತಿ ನಾಯಕಂಡ ಬೇಬಿ ಚಿಣ್ಣಪ್ಪ ಅವರನ್ನು ಆಹ್ವಾನಿಸುವಂತೆ ನಿರ್ಧರಿಸಲಾಯಿತು. ಉಳಿದಂತೆ ಕೆಲವು ಸಾಧಕರನ್ನು ಸನ್ಮಾನಿಸಲು ನಿರ್ಧರಿಸಲಾಯಿತು. ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಈ ಸಂದರ್ಭ ಮಾತನಾಡಿ, ಈ ಬಾರಿ ಸರಳವಾಗಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ. ಕೆಲವು ಸಮಿತಿಗಳನ್ನು ಸಮ್ಮೇಳನ ನಡೆಯುವ ಗ್ರಾಮದ ಪ್ರಮುಖರನ್ನು ಒಳಗೊಂಡಂತೆ

(ಮೊದಲ ಪುಟದಿಂದ) ರಚಿಸುವದು ಸೂಕ್ತ. ಇದರಿಂದ ಸ್ಥಳಿಯರೂ ಸಮ್ಮೇಳನದಲ್ಲಿ ಭಾಗವಹಿಸಿ ಸಹಕರಿಸುವಂತಾಗಬೇಕು ಎಂದರು.

ಇದಕ್ಕೆ ಸಮ್ಮತಿಸಿದ ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ ಈ ನಿಟ್ಟಿನಲ್ಲಿ ತಾ.15ರಂದು ಬೆಳಿಗ್ಗೆ 11 ಕ್ಕೆ ಅರಮೇರಿ ಕಳಂಚೇರಿ ಮಠದಲ್ಲಿ ಸಭೆ ನಡೆಸುವದಾಗಿ ತಿಳಿಸಿದರು.ಸಭೆಯಲ್ಲಿ ಖಾಯಂ ಆಹ್ವಾನಿತ ಸದಸ್ಯ ಪಾರ್ಥಚಿಣ್ಣಪ್ಪ ಅಧಿಕಾರಿಗಳ ಗೈರು ಕುರಿತು ಆಕ್ಷೇಪ ವ್ಯಕ್ತಪಡಿಸಿ, ತಾಲೂಕು ತಹಶೀಲ್ದಾರ್, ತಾ.ಪಂ ಕಾರ್ಯನಿರ್ವಹಣಾಧಿüಕಾರಿ, ಶಿಕ್ಷಣಾಧಿಕಾರಿಗಳನ್ನು ಸಭೆಗೆ ಆಹ್ವಾನಿಸಿದರೂ ಬಾರದೆ ಇರುವದರ ಔಚಿತ್ಯವೇನು ಎಂದು ಪ್ರಶ್ನೆ ಮಾಡಿದರು.

ಪ್ರಮುಖವಾಗಿ ಕ್ಷೇತ್ರ ಶಿಕ್ಷಣಧಿಕಾರಿ ಶ್ರೀ ಶೈಲ ಬೀಳಗಿಯವರು ಈ ಸಮ್ಮೇಳನಕ್ಕೆ ಎಲ್ಲಾ ರೀತಿಯ ಸಹಕಾರ ನೀಡಬೇಕು. ಆದರೆ ಅವರು ಇಂದು ಈ ಸಭೆಗೆ ಗೈರಾಗಿರುವದು ಸರಿಯಲ್ಲ. ಮುಂದೆ ಅಧಿಕಾರಿಗಳು ಸಹ ಕನ್ನಡದ ತೇರು ಎಳೆಯಲು ಕೈ ಜೋಡಿಸಬೇಕು ಎಂದರು.

ಸಭೆಯಲ್ಲಿ ಪರಿಷತ್‍ನ ಗೌರವ ಕಾರ್ಯದರ್ಶಿಗಳಾದ ನಳಿನಾಕ್ಷಿ, ಆರ್. ಸುಬ್ರಮಣಿ ಹಾಗೂ ಬಡಕಡ ರಜಿತ ಕಾರ್ಯಪ್ಪ, ಮಾದ್ಯಮ ಕಾರ್ಯದರ್ಶಿ ಕಾಂಗೀರ ಬೋಪಣ್ಣ, ನಿರ್ದೇಶಕರಾದ ಟಾಮಿಥೋಮಸ್, ವಿಮಲ ದಶರಥ್, ಸಾಹಿತಿ ಪ್ರೋ. ಸುಶೀಲ, ಪಟ್ಟಣ ಪಂಚಾಯಿತಿ ಸದಸ್ಯ ಹರ್ಷವರ್ಧನ್, ನಾಡಹಬ್ಬ ಆಚರಣ ಸಮಿತಿ ಅಧ್ಯಕ್ಷ ಸಾಯಿನಾಥ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ಪರಿಷತ್‍ನ ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಮಾಡಿದರು.