ಚೆಟ್ಟಳ್ಳಿ, ಜು. 12: 2015ರಲ್ಲಿ ಅಸ್ತಿತ್ವಕ್ಕೆ ಬಂದ 15 ಸದಸ್ಯರ ಬಲವಿರುವ ಚೆಟ್ಟಳ್ಳಿ ಗ್ರಾಮ ಆಡಳಿತ ಮಂಡಳಿಯ ಮೇಲೆ ಇಲ್ಲಿನ ಆರು ವಾರ್ಡಿನ 5ರಿಂದ 6 ಸಾವಿರ ಜನರು ಭರವಸೆಯನ್ನು ಇಟ್ಟು ತಮ್ಮ ಜನಸೇವಕರೆಂದು ಆಯ್ಕೆ ಮಾಡಿ ಕಳುಹಿಸಿದರು. ಇದೀಗ ಎಲ್ಲಾ ಸದಸ್ಯರ ಅವಧಿ ಮುಕ್ತಾಯಗೊಳ್ಳಲು ಕೇವಲ 7 ತಿಂಗಳು ಮಾತ್ರ ಬಾಕಿ ಉಳಿದಿವೆ. 15 ಸದಸ್ಯರ ಸಂಖ್ಯಾ ಬಲವಿರುವ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅಧಿಕಾರದಲ್ಲಿದ್ದಾರೆ. ಆದರೆ ವಿಪರ್ಯಾಸವೆಂದರೆ ತಮ್ಮ ಪದಗ್ರಹಣ ಸಂದರ್ಭದಲ್ಲಿ ಆರಂಭಗೊಂಡ ಹೈಟೆಕ್ ಶೌಚಾಲಯ ಕಾಮಗಾರಿ ಕೂಡ ನಾಲ್ಕುವರೆ ವರ್ಷ ಕಳೆದರೂ ಪೂರ್ಣಗೊಳ್ಳಲೇ ಇಲ್ಲ.ಚೆಟ್ಟಳ್ಳಿಯಲ್ಲಿ ಸಾರ್ವಜನಿಕ ಶೌಚಾಲಯವೇ ಇಲ್ಲ. ಸಾರ್ವಜನಿಕರು ಬಯಲಿನಲ್ಲೇ ಮೂತ್ರ ವಿಸರ್ಜನೆ ಮಾಡುವ ಪರಿಸ್ಥಿತಿ.
ಈಗಿರುವ ಮೇಲ್ಛಾವಣಿಯೇ ಇಲ್ಲದ ಶೌಚಾಲಯದತ್ತ ಯಾರೂ ಕೂಡ ಮುಖ ಮಾಡುವದಿಲ್ಲ. ಆ ಜಾಗ ಗಬ್ಬೆದ್ದು ನಾರುತ್ತಿದೆ, ಅಲ್ಲದೇ ಮದ್ಯದ ಬಾಟಲಿಗಳು ರಾರಾಜಿಸುತ್ತಿವೆ. ಇದೀಗ ನಾಲ್ಕು ವರ್ಷದ ಹಿಂದೆ ಆರಂಭಗೊಂಡಿದ್ದ ಕಾಮಗಾರಿಯನ್ನು ಪುನರ್ ಆರಂಭಿಸಿದ್ದು, ಮತ್ತೆ ಯಾವಾಗ ಕಾಮಗಾರಿ ನಿಲ್ಲುತ್ತದೆ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಒಂದೆಡೆ ಅನುದಾನದ ಕೊರೆತೆಯಿಂದ ಶೌಚಾಲಯ ಕಾಮಗಾರಿಯು ಈ ಮೊದಲು ಸ್ಥಗಿತಗೊಂಡಿತ್ತು.
ನಂತರ ಗ್ರಾಮ ಪಂಚಾಯತಿ ಸದಸ್ಯರ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿ ಪ್ರತೀ ಸದಸ್ಯರ ವಾರ್ಡಿನ ಅನುದಾನದಿಂದ 50 ಸಾವಿರ ಮೀಸಲಿಟ್ಟು ಒಟ್ಟು ಆರು ವಾರ್ಡಿನಿಂದ 3 ಲಕ್ಷ ಅನುದಾನವನ್ನು ಶೌಚಾಲಯ ಕಾಮಗಾರಿಗೆ ಬಳಸಿ ಕಾಮಗಾರಿ ಆರಂಭಿಸಲು ಗುತ್ತಿಗೆ ದಾರರಿಗೆ ಸೂಚನೆ ನೀಡಲಾಗಿತ್ತು.
ಆದರೆ ಕಾಮಗಾರಿ ಆರಂಭಿಸದೆ ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರಿಗೆ ಗ್ರಾಮ ಪಂಚಾಯತಿ ಗಡುವು ನೀಡಿತ್ತು. ಕಾಮಗಾರಿ ಆರಂಭಿಸದಿದ್ದರೆ ಟೆಂಡರ್ ರದ್ದುಗೊಳಿಸಲಾಗುವದು ಎಂದು ಎಚ್ಚರಿಕೆ ನೀಡಿತ್ತು. ಇದೀಗ ಎಚ್ಚರಿಕೆಗೊಂಡ ಗುತ್ತಿಗೆದಾರ ಕಾಮಗಾರಿಯನ್ನು ಆರಂಭಿಸಿದ್ದು ಯಾವಾಗ ಪೂರ್ಣಗೊಳ್ಳುತ್ತದೆ ಎಂಬದನ್ನು ಕಾದು ನೋಡಬೇಕಿದೆ.
(ಮೊದಲ ಪುಟದಿಂದ)
ಕಸದ ಸಮಸ್ಯೆಗೆ ಮುಕ್ತಿ ಎಂದು?
ಚೆಟ್ಟಳ್ಳಿಯಲ್ಲಿ ಕಳೆದ ಹಲವು ವರ್ಷಗಳಿಂದ ಇರುವ ಕಸದ ಸಮಸ್ಯೆಗೆ ಇದುವರೆಗೆ ಕೂಡ ಮುಕ್ತಿ ಕಂಡಿಲ್ಲ. ಗ್ರಾಮ ಪಂಚಾಯತಿ ಹಿಂಭಾಗವು ಕಸದ ರಾಶಿಗಳಿಂದ ಕೂಡಿದೆ. ಪ್ಲಾಸ್ಟಿಕ್ ತ್ಯಾಜ್ಯಗಳು ರಾರಾಜಿಸುತ್ತಿವೆÉ. ಸುತ್ತಮುತ್ತಲಿನ ಜನತೆ ರೋಗ ಬರುವ ಭೀತಿಯಿಂದ ಜೀವನ ನಡೆಸುತ್ತಿದ್ದಾರೆ.
ಅಲ್ಲದೆ ಕಸದ ರಾಶಿಗಳ ಪಕ್ಕವೇ ಅಂಚೆ ಕಛೇರಿ, ಹಾಗೂ ಚಾಮುಂಡೇಶ್ವರಿ ವಿದ್ಯುತ್ ನಿಗಮ ಕಚೇರಿ ಕೂಡ ಇದ್ದು, ಇಲ್ಲಿನ ಸಿಬ್ಬಂದಿಗಳಿಗೆ ವಾಸನೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ಕೂಡ ಇದುವರೆಗೆ ಗ್ರಾಮ ಪಂಚಾಯಿತಿ ಕಸದ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಮಾಡದೇ ನಿರ್ಲಕ್ಷ್ಯ ತೋರಿದೆ.
ಜನವರಿ ತಿಂಗಳಲ್ಲಿ ನಡೆದ ಗ್ರಾಮ ಸಭೆಯಲ್ಲಿ ಚೆಟ್ಟಳ್ಳಿಯ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಬೇಕೆಂದು ಸಾರ್ವಜನಿಕರು ಒಕ್ಕೊರಲಿನಿಂದ ಒತ್ತಾಯ ಮಾಡಿದ್ದರು. ಆ ಸಂದರ್ಭ ಗ್ರಾಮ ಪಂಚಾಯತಿ ಆಡಳಿತ ಮಂಡಳಿಯು ಸಮೀಪದ ಬಕ್ಕಾ ಬ್ಯಾರಂಗಿ ಬೆಟ್ಟದಲ್ಲಿ ಕಸ ಹಾಕಲು ಜಾಗ ಗುರುತಿಸಿದ್ದು, ಸದ್ಯದಲ್ಲೇ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದು ಹೇಳಿದ್ದರು. ಇದೀಗ 6 ತಿಂಗಳು ಕಳೆದರೂ ಇಲ್ಲಿನ ಕಸದ ಸಮಸ್ಯೆಗೆ ಮುಕ್ತಿ ಸಿಗಲೇ ಇಲ್ಲ.
ಅಂದಿನ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಚೆಟ್ಟಳ್ಳಿಯ ಹಿರಿಯ ವ್ಯಕ್ತಿಯೊಬ್ಬರು ವೈಜ್ಞಾನಿಕವಾಗಿ ಕಸ ವಿಲೇವಾರಿಯ ಮಾಡುವದರ ಬಗ್ಗೆ ಸಲಹೆ ನೀಡಿದ್ದರು. ಜಿಲ್ಲೆಯ ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ, ಗ್ರಾಮ ಪಂಚಾಯಿತಿಯೂ ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡಿ ಕಸದ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡಿದ್ದಾರೆ ಎಂಬದರ ಬಗ್ಗೆಯೂ ಸಲಹೆ ನೀಡಿದ್ದರು.
ಇಲ್ಲಿನ ಹಲವರು ವರ್ಷಗಳಿಂದ ಇರುವ ಕಸದ ಸಮಸ್ಯೆಗೆ ಯಾವಾಗ ಪರಿಹಾರ ಸಿಗುತ್ತದೆ ಹಾಗೂ ನಾಲ್ಕು ವರ್ಷದಿಂದ ಪೂರ್ಣಗೊಳ್ಳದ ಹೈಟೆಕ್ ಶೌಚಾಲಯ ಕಾಮಗಾರಿ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. -ಕೆ.ಎಂ. ಇಸ್ಮಾಯಿಲ್ ಕಂಡಕರೆ