ಮಡಿಕೇರಿ, ಜು. 12: ಕರ್ನಾಟಕ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದಿಂದ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರೂ; ಕೃಷಿ ಇಲಾಖೆಯ ಅಧಿಕಾರಿಗಳು ವಿತರಿಸುವ ಬಿತ್ತನೆ ಬೀಜ ಸಹಿತ ಕೃಷಿ ಉಪಕರಣಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಜಿ.ಪಂ. ನಿರ್ಣಯ ಕೈಗೊಂಡು ಸರಕಾರದ ಗಮನ ಸೆಳೆಯುವಂತೆ ಆಗ್ರಹಿಸಿದ್ದಾರೆ.ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಮತ್ತು ಸದಸ್ಯರ ತಂಡ ಟಿ. ಶೆಟ್ಟಿಗೇರಿ, ಶ್ರೀಮಂಗಲ, ಕುಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಆಯ ಭಾಗದ ಜನತೆಯ ಕುಂದುಕೊರತೆ ಆಲಿಸುವ ದಿಸೆಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಅನೇಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾ; ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.ಕೃಷಿ ಇಲಾಖೆಯಿಂದ ಮುಂಗಾರು ನಾಟಿಗಾಗಿ ಬಿತ್ತನೆ ಬೀಜ ಸರಬರಾಜುಗೊಳಿಸುವ ವೇಳೆ; ಸಹಾಯಧನ ಸಹಿತ ನೀಡುವ ಬಿತ್ತನೆ ಬೀಜಕ್ಕೆ ಪ್ರತಿ ಕ್ವಿಂಟಾಲ್‍ಗೆ 2800 ರೂ. ಮೊತ್ತ ಪಡೆಯುತ್ತಿದ್ದು; ರೈತರಿಂದ ಕೇವಲ ರೂ. 1200ಕ್ಕೆ ಮಾರುಕಟ್ಟೆಯಲ್ಲಿ ಖರೀದಿಸಲಾಗುತ್ತಿದೆ ಎಂದು ಬೊಟ್ಟು ಮಾಡಿದರು. ಈ ದುಬಾರಿಯ ಬೀಜ ಪೂರೈಕೆಯಿಂದ ರೈತರಿಗೆ ಹೊರೆಯಾಗಲಿದ್ದು, ಡಿಸೆಂಬರ್‍ನಲ್ಲಿ ರೈತರಿಂದ ಖರೀದಿಸುವ ಭತ್ತಕ್ಕೆ ಮೇ ತಿಂಗಳಿನಲ್ಲಿ ಅಲ್ಪಮೊತ್ತದ ಹಣ ಪಾವತಿಸಲಾಗುತ್ತಿದೆ ಎಂದು ಟೀಕಿಸಿದರು.

ಈ ಬಗ್ಗೆ ಕೃಷಿ ಅಧಿಕಾರಿಯಿಂದ ಮಾಹಿತಿ ಪಡೆದ ಜಿ.ಪಂ. ಅಧ್ಯಕ್ಷರು; ಕೊಡಗು ಜಿಲ್ಲಾ ಪಂಚಾಯತ್ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ಸೂಕ್ತ ಕ್ರಮಕ್ಕೆ ಕೋರುವದಾಗಿ ಭರವಸೆ ನೀಡಿದರು. ಕೃಷಿ ಇಲಾಖೆ ನೀಡುತ್ತಿರುವ ಟಾರ್ಪಲ್, ಕೃಷಿ ಸಂಬಂಧ ಯಂತ್ರೋಪಕರಣಗಳು ಕೂಡ ಕಳಪೆಯಾಗಿದ್ದು, ರೈತರಿಗೆ ವಂಚಿಸಲಾಗುತ್ತಿದೆ ಎಂದು ಆರೋಪ ಕೇಳಿ ಬಂತು.

ಇಲಾಖೆ ರೈತರಿಗೆ ಸಹಾಯಧನದೊಂದಿಗೆ ಅರ್ಧ ಬೆಲೆಯಲ್ಲಿ ಕಲ್ಪಿಸುವ ಯಂತ್ರೋಪಕರಣಗಳಿ ಗಿಂತಲೂ; ಮಾರುಕಟ್ಟೆಯಲ್ಲಿ ಎಲ್ಲವೂ ಕಡಿಮೆ ಬೆಲೆಗೆ ಲಭಿಸುತ್ತಿವೆ ಎಂದು ಗಮನ ಸೆಳೆದರು. ಈ ಬಗ್ಗೆ ಮಾಹಿತಿ ಪಡೆದು ಗುಣಮಟ್ಟದ ಯಂತ್ರೋಪಕರಣ ಪೂರೈಸಲು ಸೂಚಿಸ ಲಾಗುವದು ಎಂದು ಅಧ್ಯಕ್ಷರು ಭರವಸೆ ನೀಡಿದರು.

ಸಭೆಯಲ್ಲಿ ಆಯ ಗ್ರಾ.ಪಂ. ವ್ಯಾಪ್ತಿಯ ಜನಪ್ರತಿನಿಧಿಗಳು ಪಾಲ್ಗೊಂಡು; ದಕ್ಷಿಣ ಕೊಡಗಿನಲ್ಲಿ ವಿದ್ಯುತ್ ಸಮಸ್ಯೆ; ಹದಗೆಟ್ಟಿರುವ ಗ್ರಾಮೀಣ ರಸ್ತೆಗಳು; ಕುಡಿಯುವ ನೀರಿನ ಬವಣೆ; ಕಾಡಾನೆಗಳ ನಿರಂತರ ಉಪಟಳ; ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಮಗೆ ಜನತೆಯ ದೂರು, ಯಾವದೇ ಸಮಸ್ಯೆ ಬಗ್ಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಶ್ರೀಮಂಗಲ, ಕುಟ್ಟ, ಟಿ. ಶೆಟ್ಟಿಗೇರಿ ಮುಂತಾದೆಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತುರ್ತು ಸಂದರ್ಭ ಚುಚ್ಚು ಮದ್ದು ಕೂಡ ಲಭಿಸುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸಭೆಯಲ್ಲೇ ಜಿಲ್ಲಾ ಆರೋಗ್ಯ ಮತ್ತು

(ಮೊದಲ ಪುಟದಿಂದ) ಕುಟುಂಬ ಕಲ್ಯಾಣ ಅಧಿಕಾರಿಗೆ ಕರೆ ಮಾಡಿದ ಜಿ.ಪಂ. ಅಧ್ಯಕ್ಷರು ಸಮಸ್ಯೆ ಇತ್ಯರ್ಥಪಡಿಸುವಂತೆ ತಿಳಿ ಹೇಳಿದರು.

ಸಾರ್ವಜನಿಕರ ಅಹವಾಲು ಗಳನ್ನು ಆಲಿಸಿದ ಸಂದರ್ಭ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಸಿ.ಕೆ. ಬೋಪಣ್ಣ, ಸರೋಜಮ್ಮ, ಸದಸ್ಯರುಗಳಾದ ಬಿ.ಎನ್. ಪ್ರಥ್ಯು, ಶಿವು ಮಾದಪ್ಪ, ಆಯ ಗ್ರಾ.ಪಂ. ಅಧ್ಯಕ್ಷರುಗಳಾದ ಎಂ.ಎನ್. ಸುಮಂತ್, ಕಲ್ಪನಾ ತಿಮ್ಮಯ್ಯ, ಲೀಲಾವತಿ ಸೇರಿದಂತೆ ಇತರ ಜನಪ್ರತಿನಿಧಿಗಳು, ಸ್ಥಳೀಯ ಅಲ್ಲಿನ ಮುಖಂಡರು ಪಾಲ್ಗೊಂಡಿದ್ದರು. ಜನತೆಯ ಸಮಸ್ಯೆಗಳ ಬಗ್ಗೆ ಆಯ ಇಲಾಖೆಗಳ ಅಧಿಕಾರಿಗಳು ಸಮಜಾಯಿಷಿಕೆ ನೀಡಿದರು.