ವೀರಾಜಪೇಟೆ, ಜು. 8: ವೀರಾಜಪೇಟೆ ಸ. ಪ.ಪೂ. ಕಾಲೇಜು ಆವರಣದಲ್ಲಿ ರೂ. 3 ಕೋಟಿ 20 ಲಕ್ಷ ಅನುದಾನದಲ್ಲಿ ನಡೆಯುತ್ತಿರುವ ಒಳಾಂಗಣ- ಕ್ರೀಡಾಂಗಣದ ಕಾಮಗಾರಿಯನ್ನು ಸ್ಥಳಿಯ ಶಾಸಕ ಕೆ.ಜಿ. ಬೋಪಯ್ಯ ಮತ್ತು ಅಧಿಕಾರಿ ಗಳು ಪರಿಶೀಲನೆ ನಡೆಸಿದರು.

ಕಟ್ಟಡ ಪರಿಶೀಲನೆ ಸಂದರ್ಭ ಮಾತನಾಡಿದ ಶಾಸಕ ಬೋಪಯ್ಯ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅವಧಿಯಲ್ಲಿ ವೀರಾಜಪೇಟೆಗೆ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಮತ್ತು ಜಿಮ್, ಶಟಲ್ ಬ್ಯಾಡ್‍ಮಿಂಟನ್ ಕೋರ್ಟ್‍ಗೆ ಕಟ್ಟಡದ ನಿರ್ಮಾಣ ಕ್ಕಾಗಿ ಅನುದಾನ ಬಿಡುಗಡೆಯಾಗಿತ್ತು. ಈಗ ಕಾಮಗಾರಿ ಮುಗಿಯುವ ಹಂತದಲ್ಲಿದೆ ಎಂದರಲ್ಲದೆ ಈ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸಬೇಕೆಂದು ಗುತ್ತಿಗೆದಾರರಿಗೆ ಆದೇಶಿಸಿದರು.

ಇದೇ ಸಂದರ್ಭ ಸರಕಾರಿ ಪದವಿ ಪೂರ್ವ ಕಾಲೇಜಿನ ಹಳೆಯ ಕಟ್ಟಡವನ್ನು ಶಾಸಕರು ವೀಕ್ಷಿಸಿದ ಬಳಿಕ ಮಾತನಾಡಿ, ಈ ಕಾಲೇಜಿಗೆ ನಬಾರ್ಡ್ ಯೋಜನೆಯಿಂದ ರೂ. 2.50 ಕೋಟಿ ಅನುದಾನ ಬಂದಿದ್ದು ನಾಲ್ಕು ಕೊಠಡಿಗಳು ಮತ್ತು ಮೂರು ಪ್ರಯೋಗಾಲಯ ಸೇರಿ ಒಟ್ಟು 7 ಕೊಠಡಿಗಳನ್ನು ನಿರ್ಮಿಸಲಾಗುವದು. ಕೊಠಡಿಗಳ ನಿರ್ಮಾಣದಿಂದ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಕಟ್ಟಡ ಪರಿಶೀಲನೆ ಸಂದರ್ಭ ಜಿ.ಪಂ.ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ, ಲೋಕೊಪಯೋಗಿ ಇಲಾಖೆಯ ಅಭಿಯಂತರರಾದ ಸುರೇಶ್, ಯತೀಶ್, ನವಿನ್ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಟ್ರಪಂಡ ರಘುನಾಣಯ್ಯ, ಮಲ್ಲಂಡ ಮದು ದೇವಯ್ಯ, ಪಟ್ಟಣ ಪಂಚಾಯಿತಿ ಸದಸ್ಯರಾದ ಆಶಾ ಸುಬ್ಬಯ್ಯ, ಟಿ. ಎಂ. ಜೂನ, ಟಿ.ಕೆ.ಯಶೋಧ, ಹೆಚ್. ಪಿ. ಮಹದೇವ್, ಸುಸ್ಮಿತಾ, ಪೂರ್ಣಿಮಾ ಇತರರು ಉಪಸ್ಥಿತರಿದ್ದರು.