ಮಡಿಕೇರಿ, ಜು. 8 : ಜಿಲ್ಲೆಯಲ್ಲಿ ನಡೆಯುತ್ತಿರುವ ಕನ್ನಡೇತರ ನಾಮಫಲಕಗಳ ತೆರವು ಕಾರ್ಯಾಚರಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರವೇನೂ ಇಲ್ಲ. ಇದು ಸರಕಾರದ ಆದೇಶಕ್ಕೆ ಅನುಗುಣವಾಗಿ ಸರಕಾರಿ ಅಧಿಕಾರಿಗಳೇ ನಡೆಸುತ್ತಿರುವ ಕಾರ್ಯಾಚರಣೆಯಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸ್ಪಷ್ಟಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ತಿನ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಅವರು, ಕಳೆದ 4-5ದಿನಗಳಿಂದ ಜಿಲ್ಲೆಯ ವಿವಿಧೆಡೆಗಳಲ್ಲಿ ಸರಕಾರದ ಕಾನೂನನ್ನು ಉಲ್ಲಂಘಿಸಿ ರುವ ಕನ್ನಡೇತರ ನಾಮಫಲಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಇದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾಲಿ, ಸದಸ್ಯರಾಗಲಿ ಮಾಡುತ್ತಿಲ್ಲ. ನಿಯಮ ಉಲ್ಲಂಘಿಸಿರುವ ನಾಮಫಲಕಗಳನ್ನು ತೆರವುಗೊಳಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಮೂರು ವರ್ಷಗಳಿಂದ ಜಿಲ್ಲಾಡಳಿತಕ್ಕೆ ಒತ್ತಾಯ ಹೇರುತ್ತಲೇ ಬಂದಿದ್ದು, ಕಳೆದ ಕೆಡಿಪಿ ಸಭೆಯಲ್ಲಿ ಸರಕಾರದ ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಮೊಕದ್ದಮೆ ಹೂಡುವದಾಗಿ ಎಚ್ಚರಿಸಿದ ಬಳಿಕ ಸರಕಾರಿ ಅಧಿಕಾರಿಗಳು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ವಿವರಿಸಿದರು.

ನಾಮಫಲಕಗಳ ತೆರವಿಗೆ ಕಾಲಾವಕಾಶ ನೀಡಬೇಕಿತ್ತು ಎಂದು ಕೆಲವು ವರ್ತಕರು ಅಸಮಾಧಾನ ವ್ಯಕ್ತಪಡಿಸುತ್ತಿರುವದು ಗಮನಕ್ಕೆ ಬಂದಿದೆ. ಆದರೆ ಕಳೆದ ಮೂರು ವರ್ಷಗಳಿಂದ ಈ ಬಗ್ಗೆ ಪರಿಷತ್ತಿನ ಒತ್ತಾಯಕ್ಕೆ ಅಧಿಕಾರಿಗಳು ಸ್ಪಂದಿಸದೆ ಇದೀಗ ದಿಢೀರಾಗಿ ಕಾರ್ಯಾಚರಣೆ ಆರಂಭಿಸಿರುವದು ಇದಕ್ಕೆ ಕಾರಣವಾಗಿದೆ. ವರ್ತಕರು ತಮ್ಮ ಪರವಾನಗಿ ನವೀಕರಣಕ್ಕೆ ಬರುವ ಸಂದರ್ಭದಲ್ಲೇ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡದಿರುವದು, ಸ್ಥಳಕ್ಕೆ ತೆರಳಿ ಪರಿಶೀಲಿಸದಿರುವದು ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯತೆಗೆ ಉದಾಹರಣೆಯಾಗಿದ್ದು, ಇದಕ್ಕೆ ಪರಿಷತ್ತು ಕಾರಣವಲ್ಲ ಎಂದು ಲೋಕೇಶ್ ಸಾಗರ್ ಹೇಳಿದರು.

ಕೊಡಗು ಜಿಲ್ಲೆ ಪ್ರವಾಸಿತಾಣವಾಗಿ ರುವದರಿಂದ ಪ್ರವಾಸಿಗರನ್ನು ಸೆಳೆಯಲು ವೈಭವಪೂರಿತ ನಾಮಫಲಕಗಳನ್ನು ಅಳವಡಿಸುವದಕ್ಕೆ ಪರಿಷತ್ತು ವಿರೋಧಿಸುವದಿಲ್ಲ ಆದರೆ ಸರಕಾರದ ನಿಯಮದಂತೆ ನಾಮಫಲಕದ ಶೇ.60ರಷ್ಟು ಜಾಗವನ್ನು ಕನ್ನಡಕ್ಕೆ ಮೀಸಲಿಟ್ಟು, ಉಳಿದ ಶೇ.40ರ ಭಾಗದಲ್ಲಿ ಇತರ ಯಾವದೇ ಭಾಷೆ ಬಳಸಬಹುದೆಂದು ಸರಕಾರದ ಸ್ಪಷ್ಟ ಆದೇಶವಿದೆ. ಈ ಬಗ್ಗೆ ಕೆಲವು ವರ್ತಕರು ಮತ್ತು ಅಧಿಕಾರಿಗಳು ಗಮನಹರಿಸದಿರುವ ಹಿನ್ನೆಲೆಯಲ್ಲಿ ಪರಿಷತ್ತು ಜಿಲ್ಲಾಡಳಿತವನ್ನು ಒತ್ತಾಯಿ ಸುತ್ತಾ ಬಂದಿದೆಯೇ ಹೊರತು ಇತರ ಯಾವದೇ ಉದ್ದೇಶ ಪರಿಷತ್ತಿಗೆ ಇಲ್ಲ ಎಂದೂ ಅವರು ನುಡಿದರು.

ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಕಾರ್ಯದರ್ಶಿ ಕೋಡಿ ಚಂದ್ರಶೇಖರ್, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಕಾರ್ಯದರ್ಶಿ ಕೆ.ಸಿ. ದಯಾನಂದ ಹಾಗೂ ಮೂರ್ನಾಡು ಹೋಬಳಿ ಅಧ್ಯಕ್ಷ ಕೆ.ಕೆ.ಸುಕುಮಾರ್ ಉಪಸ್ಥಿತರಿದ್ದರು.