ಮಡಿಕೇರಿ, ಜು. 8: ದಾರಿಯಲ್ಲಿ ಬಿದ್ದು ಸಿಕ್ಕಿದ ಚಿನ್ನಾಭರಣವನ್ನು ಕಳೆದುಕೊಂಡವರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಪ್ರಸಂಗ ಇಂದಿಲ್ಲಿ ಎದುರಾಗಿದೆ.

ಮಡಿಕೇರಿಯ ತ್ಯಾಗರಾಜಕಾಲೋನಿ ನಿವಾಸಿ ಖಲೀಲ್ ಎಂಬವರು ಮನೆ ಕಟ್ಟುವ ಸಲುವಾಗಿ ಹಣದ ಅವಶ್ಯಕತೆಗಾಗಿ ತಮ್ಮಲ್ಲಿದ್ದ ರೂ. 4 ಲಕ್ಷ ಬೆಲೆ ಬಾಳುವ ಚಿನ್ನಾಭರಣವನ್ನು ಅಡವಿಟ್ಟು ಹಣ ಪಡೆಯಲೆಂದು ಕೊಂಡೊಯ್ಯುತ್ತಿದ್ದಾಗ ಚಿನ್ನ ದಾರಿ ಮಧ್ಯೆ ಬಿದ್ದು ಹೋಗಿದೆ. ಖಾಸಗಿ ಬಸ್ ನಿಲ್ದಾಣದಿಂದ ಚೌಕ್‍ವರೆಗಿನ ಮುಖ್ಯ ರಸ್ತೆಯಲ್ಲಿ ಕಳೆದಿದೆ. ಚಿನ್ನ ಕಳೆದುಕೊಂಡ ಖಲೀಲ್ ದಂಪತಿಯರು ನಗರ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಠಾಣಾಧಿಕಾರಿಗಳು ದಂಪತಿಯರೊಂದಿಗೆ ಮೂವರು ಪೊಲೀಸರನ್ನು ಜೊತೆ ಮಾಡಿ ಹುಡುಕಲು ಕಳುಹಿಸಿದ್ದಾರೆ. ಅಷ್ಟರಲ್ಲೇ ಪೇಪರ್‍ನಲ್ಲಿ ಸುತ್ತಿದ್ದ ಚಿನ್ನಾಭರಣದ ಮೇಲೆ ವಾಹನಗಳು ಹರಿದು ಹೋಗಿವೆ. ಅದೇ ದಾರಿಯಲ್ಲಿ ಹೋಗುತ್ತಿದ್ದ ಚೆಟ್ಟಿಮಾನಿ, ಪದಕಲ್ಲು ಗ್ರಾಮದ ಮಂಗೇರಿರ ಗಣೇಶ್ ಅವರ ಕಾಲಿಗೆ ಇದೇ ಕಾಗದದ ಪೊಟ್ಟಣ ಎಡತಾಕಿದೆ. ಕಾಲಿಗೆ ತಾಗಿದ ರಭಸಕ್ಕೆ ಪೊಟ್ಟಣ ಬಿಚ್ಚಿಕೊಂಡಿದ್ದು, ಅದರೊಳಗಿದ್ದ ಚಿನ್ನಾಭರಣ ಗೋಚರಿಸಿದೆ. ಅದನ್ನು ಕೈಯ್ಯಲಿಡಿದು ಅಲ್ಲಿಯೇ ಯಾರಾದರೂ ಹುಡುಕಿಕೊಂಡು ಬರಬಹುದೇನೋ ಎಂದು ಕಾದಿದ್ದಾರೆ.

ಅಷ್ಟರಲ್ಲಾಗಲೇ ಪೊಲೀಸರೊಂದಿಗೆ ಖಲೀಲ್ ದಂಪತಿ ಹುಡುಕುತ್ತಾ ಬಂದಿದ್ದಾರೆ. ಜೋರಾಗಿ ಅಳುತ್ತಿದ್ದ ಖಲೀಲ್ ಪತ್ನಿಯನ್ನು ಗಣೇಶ್ ಏನೆಂದು ವಿಚಾರಿಸಿದಾಗ ಚಿನ್ನ ಕಳೆದಿರುವ ಬಗ್ಗೆ ಹೇಳಿದ್ದಾರೆ. ಆಗಲೇ ಗಣೇಶ್ ತಮಗೆ ಸಿಕ್ಕಿದ ಚಿನ್ನಾಭರಣವನ್ನು ತೋರಿಸಿದ್ದಾರೆ. ನಂತರ ಪೊಲೀಸರು ಗಣೇಶ್ ಅವರನ್ನು ಠಾಣೆಗೆ ಕರೆ ತಂದು ಎಲ್ಲರ ಸಮ್ಮುಖದಲ್ಲಿ ಚಿನ್ನ ಕಳೆದುಕೊಂಡ ಖಲೀಲ್ ದಂಪತಿಗೆ ಹಸ್ತಾಂತರಿಸಿದ್ದಾರೆ.

ಒಂದು ರೂಪಾಯಿ ಬಿದ್ದು ಸಿಕ್ಕರೂ ಬಾಚಿಕೊಳ್ಳುವ ಇಂದಿನ ಕಲಿಯುಗದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸಿಕ್ಕರೂ ಅದನ್ನು ಹಿಂತಿರುಗಿಸಿ ಮಾನವೀಯತೆ ಮೆರೆದ ಗಣೇಶ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಖಲೀಲ್ ದಂಪತಿ ಅವರನ್ನು ತುಂಬು ಮನಸ್ಸಿನಿಂದ ವಂದಿಸಿದ್ದಾರೆ.

-ಲಕ್ಷ್ಮೀಶ್