ಸೋಮವಾರಪೇಟೆ, ಜು.8: ಕಾರ್ಮಿಕರನ್ನು ಸಾಗಾಟಗೊಳಿಸುವ ಪಿಕ್ಅಪ್ ಹಾಗೂ ಗೂಡ್ಸ್ ವಾಹನ ಗಳಿಗೆ ನಿರ್ಬಂಧ ವಿಧಿಸಿರುವದರಿಂದ ಕಾಫಿ ಬೆಳೆಗಾರರು ಹಾಗು ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಗಮನಹರಿಸ ಬೇಕೆಂದು ತಾಲೂಕು ಕಾಫಿ ಬೆಳೆಗಾರರ ಹೋರಾಟ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಈ ಬಗ್ಗೆ ಸಂಘದ ಅಧ್ಯಕ್ಷ ಎಂ.ಸಿ.ಮುದ್ದಪ್ಪ ಹಾಗೂ ಪದಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಗುಡ್ಡಗಾಡು ಪ್ರದೇಶಗಳಲ್ಲಿ ಕಾಫಿ ತೋಟಗಳು ಇರುವದರಿಂದ, ಅಂತಹ ಸ್ಥಳಗಳಿಗೆ ಬಸ್ಗಳ ಸೌಲಭ್ಯವಿಲ್ಲ, ಪಿಕ್ಅಪ್ ಹಾಗೂ ಗೂಡ್ಸ್ ವಾಹನಗ ಳನ್ನು ಹೊರತುಪಡಿಸಿ ಬೇರೆ ವಾಹನ ಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯಲು ಅಸಾಧ್ಯವಾಗಿದೆ. ಕಾರ್ಮಿಕರು ಸಿಗದಿದ್ದರೆ, ಕಾಫಿ ತೋಟ ನಿರ್ವಹಣೆ ಅಸಾಧ್ಯವಾಗಿ, ತೋಟಗಳು ಪಾಳುಬೀಳುತ್ತವೆ. ಈ ಕಾರಣದಿಂದ ನಿಯಮವನ್ನು ಸರಳೀಕರಣಗೊಳಿಸು ವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ಪ್ರಸ್ತುತ ಕಾರ್ಮಿಕರನ್ನು ಸಾಗಿಸುವ ವಾಹನಗಳ ವಿರುದ್ಧ ಪೊಲೀಸರು ಕ್ರಮಕೈಗೊಳ್ಳುತ್ತಿರುವದರಿಂದ ಸಮಸ್ಯೆ ಎದುರಾಗಿದೆ.
ಜಿಲ್ಲೆಯ ಮೇಲಾಧಿಕಾರಿಗಳು ಬೆಳೆಗಾರರು ಹಾಗು ಕೃಷಿಕರ ಸಂಕಷ್ಟವನ್ನು ಪರಿಹರಿಸಬೇಕೆಂದು ಮುದ್ದಪ್ಪ ಅವರು ಮನವಿ ಮಾಡಿದ್ದಾರೆ.
ತಾಲೂಕು ತಹಶೀಲ್ದಾರ್ ಗೋವಿಂದರಾಜ್ ಹಾಗೂ ಠಾಣಾಧಿಕಾರಿ ಶಿವಶಂಕರ್ ಅವರ ಮೂಲಕ ಈ ಬಗೆಗಿನ ಮನವಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಯಿತು.