ಸುಂಟಿಕೊಪ್ಪ, ಜು. 8: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅವಘಡಕ್ಕೀಡಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಆರವತ್ತೋಕ್ಲು ನಿವಾಸಿ ಹರ್ಷಿತ್‍ಗೌಡ (27) ಎಂಬಾತ ಮಾರುತಿ ಕಾರು (ಕೆಎ.45 ಎಂ02) ಅವಘಡದಲ್ಲಿ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ.

ಕುಶಾಲನಗರ ಸಮೀಪದ ಗೊಂದಿ ಬಸವನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಹರ್ಷಿತ್‍ಗೌಡ ಖಾಸಗಿ ಕಂಪನಿಯ ಕಾರು ಚಾಲಕನಾಗಿದ್ದು, ತಾ.7 ರಂದು ಕುಶಾಲನಗರದಿಂದ ತನ್ನ ತಂದೆಯನ್ನು ಅರವತ್ತೋಕ್ಲು ಗ್ರಾಮಕ್ಕೆ ತಾ.8 ರಂದು ನಡೆಯಲಿರುವ ಅವರ ಅಜ್ಜನ ತಿಥಿ ಕರ್ಮಾಂತರಕ್ಕೆ ಮಾರುತಿ ಕಾರಿನಲ್ಲಿ ಬಿಟ್ಟು ಗೆಳೆಯ ಸುಮಂತ ಎಂಬಾತನೊಂದಿಗೆ ರಾತ್ರಿ ವೇಳೆ 8.30ಕ್ಕೆ ಹಿಂತಿರುಗುವ ವೇಳೆÉ ರಾಷ್ಟ್ರೀಯ ಹೆದ್ದಾರಿಯ ಶಾಂತಗಿರಿ ಬಳಿಯ ಕೂರ್ಗಳ್ಳಿ ತೋಟದ ಬೀಚ್‍ವುಡ್ ರೆಸಾರ್ಟ್ ಬಳಿ ಕಾರು ಪಲ್ಟಿಯಾಗಿದ್ದು ತೀವ್ರ ಗಾಯಗೊಂಡ ಹರ್ಷಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸುಮಂತ್‍ಗೆ ಸಣ್ಣ ಪುಟ್ಟ ಗಾಯವಾಗಿದೆ.

ಘಟನಾ ಸ್ಥಳಕ್ಕೆ ಕುಶಾಲನಗರ ವೃತ್ತ ನಿರೀಕ್ಷಕ ಕುಮಾರ್ ಆರಾಧÀ್ಯ, ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಹಾಗೂ ಸಿಬ್ಬಂದಿ ತೆರಳಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಸಲಾಯಿತು.

ಘಟನೆ ನಡೆದ ಸ್ಥಳದಲ್ಲಿ ‘ಅಪಘಾತ ವಲಯ’ ಎಂಬ ನಾಮಫಲಕ ಅಳವಡಿಸಲಾಗಿದ್ದರೂ ಕೂಡ ಅನೇಕ ಅಪಘಾತಗಳು ನಡೆಯುತ್ತಿರುವದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.