ಮಡಿಕೇರಿ, ಜು. 7: ಭಾರತೀಯ ಜನತಾ ಪಾರ್ಟಿಯು ಆರಂಭಿಸಿರುವ ಸದಸ್ಯತ್ವ ಅಭಿಯಾನದ ಗುರಿಯನ್ನು ಯಶಸ್ವಿಯಾಗಿ ತಲಪಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಲಹೆ ನೀಡಿದರು. ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಎ. ಕಿಶೋರ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸದಸ್ಯತ್ವ ಅಭಿಯಾನದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಯುವಜನತೆ ಬಿಜೆಪಿ ಸದಸ್ಯತ್ವ ಪಡೆಯುವ ದಿಸೆಯಲ್ಲಿ ಪ್ರಯತ್ನಿಸುವಂತೆ ಕರೆ ನೀಡಿದರು. ಬಿಜೆಪಿ ಮುಖಂಡರಾದ ಎಸ್.ಬಿ. ರವಿಕುಶಾಲಪ್ಪ, ರಾಬಿನ್ ದೇವಯ್ಯ, ರವಿಕಾಳಪ್ಪ, ಸುಬ್ರಮಣ್ಯ ಉಪಾಧ್ಯಾಯ, ನಾಗೇಶ್ ಕುಂದಲ್ಪಾಡಿ, ಆನಂದ ರಘು, ತೆಕ್ಕಡೆ ಶೋಭಾ ಸಹಿತ ಇತರ ಪದಾಧಿಕಾರಿಗಳು, ಪ್ರಮುಖರು ಭಾಗವಹಿಸಿದ್ದರು.