ಗೋಣಿಕೊಪ್ಪ ವರದಿ, ಜು. 6 : ಶೌಚಾಲಯ ಬಳಕೆ ಮತ್ತು ಶೌಚಾಲಯ ಬದಲಿ ಗುಂಡಿಗಳ ನಿರ್ಮಾಣದಲ್ಲಿ ರಾಜ್ಯಕ್ಕೆ ಕೊಡಗು ಜಿಲ್ಲೆ ಪ್ರಥಮ ಸ್ಥಾನ ಪಡೆಯುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯಾ ಹೇಳಿದರು.
ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾ ಪಂಚಾಯತಿ, ವೀರಾಜಪೇಟೆ ತಾಲ್ಲೂಕು ಪಂಚಾಯತ್, ಪೊನ್ನಂಪೇಟೆ ಗ್ರಾಮ ಪಂಚಾಯತಿ, ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಹಾಗೂ ಕ್ಲೀನ್ ಕೂರ್ಗ್ ಇನಿಷೇಟಿವ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಚ್ಛ ಮೇವ ಜಯತೆ ಜನಾಂದೋಲನ ಮತ್ತು ಕೊಡಗು ಪರಿವರ್ತನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್ಚು ವಿದ್ಯಾವಂತರಿರುವ ಕೊಡಗು ಜಿಲ್ಲೆಯ ನಾಗರಿಕರು ಸ್ವಚ್ಛತೆಗೆ ಒತ್ತು ನೀಡುವ ಮೂಲಕ ರಾಜ್ಯಕ್ಕೆ ಮಾದರಿ ಜಿಲ್ಲೆಯನ್ನಾಗಿ ಮುಂದುವರಿಯಬೇಕಿದೆ. 2006 ರಲ್ಲಿ ಕೊಡಗು ಸಂಪೂರ್ಣ ಬಯಲು ಶೌಚ ಮುಕ್ತ ದಾಖಲೆ ಘೋಷಿಸಿದೆ. ಇದರಂತೆ ಸಾಕಷ್ಟು ಶೌಚಗೃಹ ನಿರ್ಮಿಸಿ, ಪ್ರಸ್ತುತ ಶೌಚಗೃಹ ಬಳಕೆ ಮಾಡುವಂತೆ ಅಭಿಯಾನ ನಡೆಸಲಾಗುತ್ತಿದೆ. ಶೌಚ ಗೃಹದ ಗುಂಡಿಯಿಂದ ಗೊಬ್ಬರ ಬಳಕೆ ಮತ್ತು ಮತ್ತೊಂದು ಗುಂಡಿ ತೋಡುವ ಯೋಜನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಒಂದರಿಂದ ಗೊಬ್ಬರ ಬಳಕೆಯಾದಂತೆ ಮತ್ತೊಂದು ಗುಂಡಿಯನ್ನು ಬಳಸಲು ಅವಕಾಶವಿದೆ. ಒಂದು ಶೌಚ ಗುಂಡಿ ಇರುವವರು ಕಡ್ಡಾಯವಾಗಿ ಎರಡು ಗುಂಡಿಗಳನ್ನು ಶೌಚಗೃಹಕ್ಕೆ ಬಳಸುವಂತಾಗಬೇಕು ಎಂದರು.
ಪ್ಲಾಸ್ಟಿಕ್‍ನಿಂದ ಹೆಚ್ಚು ತ್ಯಾಜ್ಯ ಉಂಟಾಗುತ್ತಿರುವದು ತಿಳಿದಿರುವ ವಿಚಾರವಾಗಿದೆ. ಇದರ ನಿರ್ಮೂಲನೆಗೆ ಎಲ್ಲಾರೂ ಕೈಜೋಡಿಸಬೇಕಿದೆ. ಸಾರ್ವಜನಿಕರು ಬಟ್ಟೆ ಬ್ಯಾಗ್ ಬಳಕೆಗೆ ಮುಂದಾಗಬೇಕು. ಮುಂದಿನ 2 ತಿಂಗಳಲ್ಲಿ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಪರಿವರ್ತಿಸಲಾಗುವದು ಎಂದರು.
ಸಭಾ ಕಾರ್ಯಕ್ರಮವನ್ನು ಜಿ. ಪಂ. ಸದಸ್ಯೆ ಶ್ರೀಜಾ ಸಾಜಿ ಉದ್ಘಾಟಿಸಿದರು. ಈ ಸಂದರ್ಭ ಪೊನ್ನಂಪೇಟೆ ಗ್ರಾ. ಪಂ. ಅಧ್ಯಕ್ಷೆ ಮೂಕಳೇರ ಸುಮಿತಾ ಗಣೇಶ್, ಉಪಾಧ್ಯಕ್ಷೆ ಮಂಜುಳಾ ಸುರೇಶ್, ತಾ. ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಇಒ ಜಯಣ್ಣ, ತಾಲೂಕು ಉಪ ಕಾರ್ಯದರ್ಶಿ ಭೀಮಾಸೇನ್, ಕ್ಲೀನ್ ಕೂರ್ಗ್ ಇನಿಷೇಟಿವ್ ಸಂಸ್ಥೆ ಪ್ರಮುಖರುಗಳಾದ ಅಪರ್ಣಾ, ಸವಿತಾ ಚೆಂಗಪ್ಪ, ಪವನ್ ಇದ್ದರು.
ಗಮನ ಸೆಳೆದ ಪರಿಸರ ಸ್ನೇಹಿ ವಸ್ತುಗಳು : ಪರಿಸರ ರಕ್ಷಣೆಗೆ ಮಾದರಿಗಳ ಮೂಲಕ ವಿದ್ಯಾರ್ಥಿಗಳು ಹೊರ ಚೆಲ್ಲಿದರು. ಪೇಪರ್, ಮರ, ಬಟ್ಟೆ ಇಂತಹವುಗಳನ್ನು ಬಳಸಿ ನೂರಾರು ಬಗೆಯ ಮಾದರಿಗಳನ್ನು ಜನರಿಗೆ ತೋರಿಸಿಕೊಟ್ಟರು. ಪೇಪರ್‍ನಲ್ಲಿ ತಯಾರಿಸಿದ ಅಲಂಕಾರ ವಸ್ತುಗಳು, ಮ್ಯೂಸಿಕ್ ಪರಿಕರಗಳು ಗಮನ ಸೆಳೆದವು.
ವಿಜೇತರುಗಳು : ಅಮ್ಮತ್ತಿ ಗುಡ್‍ಶೆಫರ್ಡ್ ಶಾಲೆಯ ವಿದ್ಯಾರ್ಥಿಗಳಾದ ಆವಂತಿಕಾ ಪ್ರಕಾಶ್, ಎಂ. ಟಿ. ಸಮೃದ್ಧಿ ತಂಡ ತಯಾರಿಸಿದ ಪ್ರದರ್ಶನಕ್ಕೆ ಪ್ರಥಮ ಬಹುಮಾನ ಲಭಿಸಿತು. ವೀರಾಜಪೇಟೆ ಜೂನಿಯರ್ ಕಾಲೇಜುವಿನ ದಿಲನ್ ಮತ್ತು ಮೊಹಮ್ಮದ್ ತಂಡ ದ್ವಿತೀಯ, ಪೊನ್ನಂಪೇಟೆ ಅಪ್ಪಚ್ಚಕವಿ ಶಾಲೆಯ ವರುಣ್ ಉತ್ತಯ್ಯ ಮತ್ತು ಗಣಪತಿ ತಂಡ ತೃತೀಯ, ಗೋಣಿಕೊಪ್ಪ ಸರ್ಕಾರಿ ಶಾಲೆಯ ಎಂ. ಅಭಿಜಿತ್ ಮತ್ತು ಶರಿನ್ ತಾಜ್ ತಂಡಕ್ಕೆ ನಾಲ್ಕನೇ ಸ್ಥಾನ, ಪೊನ್ನಂಪೇಟೆ ಸಾಯಿಶಂಕರ್ ಶಾಲೆಯ ಮಾನ್ಯ ಮತ್ತು ಲಾಂಛನ್ ತಂಡಕ್ಕೆ ಐದನೇ ಸ್ಥಾನ, ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಪ್ರಖ್ಯಾತ್ ಪೆಮ್ಮಯ್ಯ ಅವರ ಪ್ರದರ್ಶನಕ್ಕೆ ಆರನೇ ಸ್ಥಾನ ದೊರೆಯಿತು.
ಮ್ಯಾರಥಾನ್ : ಪರಿವರ್ತನ ಮೇಳ ಪ್ರಯುಕ್ತ ಪ್ರೌಢ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಗೋಣಿಕೊಪ್ಪದಿಂದ ಪೊನ್ನಂಪೇಟೆವರೆಗೆ ಮ್ಯಾರಥಾನ್ ನಡೆಯಿತು. ಬಾಲಕ, ಬಾಲಕಿಯರು ಪಾಲ್ಗೊಂಡು, ಎರಡು ವಿಭಾಗಕ್ಕೂ ಪ್ರತ್ಯೇಕ ಬಹುಮಾನ ನೀಡಲಾಯಿತು.
ಬಾಲಕರ ಮ್ಯಾರಥಾನ್‍ನಲ್ಲಿ ಕೆ. ಎಸ್. ದೇವಯ್ಯ (ಪ್ರ), ಧನು (ದ್ವಿ), ಮಯೂರ್ (ತೃ), ಅಣ್ಣಪ್ಪ (4ನೇ ಸ್ಥಾನ), ಕೆ. ಎಸ್. ಅಮೋಘ (5ನೇ) ಸಂಚಿತ್‍ಗೆ (6ನೇ), ಬಾಲಕಿಯರಲ್ಲಿ ಚೋಂದಮ್ಮ (ಪ್ರ), ಬಿ. ಎಸ್. ನೀಲಮ್ಮ (ದ್ವಿ), ರಮ್ಯ (ತೃ), ಪಿ. ಎಸ್. ಸೌಮ್ಯ (4ನೇ ಸ್ಥಾನ), ನವ್ಯ (5 ನೇ ಸ್ಥಾನ), ಕೆ. ಎಂ. ದೃತಿ (6ನೇ ಸ್ಥಾನ), ಫಾತಿಮಾ (7ನೇ ಸ್ಥಾನ) ಪಡೆದುಕೊಂಡರು.
ಮೇಳದಲ್ಲಿ ಪರಿಸರ ಸ್ನೇಹಿ ಸ್ವಚ್ಛತೆಗೆ ಪೂರಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಬಟ್ಟೆಗಳಿಂದ ತಯಾರಿಸಿದ ವಸ್ತುಗಳು, ಬಿದಿರಿನ ವಸ್ತುಗಳು, ನೀರು ಸ್ವಚ್ಛತೆಯ ಯಂತ್ರಗಳು ಇದ್ದವು.
-ಸುದ್ದಿಪುತ್ರ.