ಮಡಿಕೇರಿ, ಜು. 6: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಮಡಿಕೇರಿ ತಾಲೂಕಿನಲ್ಲಿ 12,500 ಅರ್ಜಿಗಳು ರೈತರಿಂದ ಬಂದಿದ್ದು, 8300 ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ದಾಖಲಿಸಿಕೊಳ್ಳಲಾಗಿದೆ ಎಂದು ಕೃಷಿ ಇಲಾಖಾಧಿಕಾರಿ ಗಿರೀಶ್ ಮಾಹಿತಿ ನೀಡಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅಧ್ಯಕ್ಷತೆ ಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ ಗಿರೀಶ್, 2000 ರೂ.ಗಳಂತೆ ಮೂರು ಕಂತುಗಳಲ್ಲಿ ರೈತರ ಖಾತೆಗೆ 6000 ರೂ.ಗಳನ್ನು ಜಮಾವಣೆ ಮಾಡಲು ಕೆಲಸ ಕಾರ್ಯಗಳು ನಡೆಯುತ್ತಿವೆ ಎಂದರು. ತಾಲೂಕಿನ 4 ಹೋಬಳಿ ಕಚೇರಿಗಳಲ್ಲಿ ಭತ್ತದ ಬಿತ್ತನೆ ಬೀಜಗಳಾದ ಇಂಟಾನ್, ತುಂಗ, ಜಯ, ಬಿಆರ್-2655, ಅಧಿಕ ವಿತರಣೆಯಾಗುತ್ತಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ, ಕುಂಬಳದಾಳು ಅಂಗನವಾಡಿ ಕೇಂದ್ರದಲ್ಲಿ 3 ಮಕ್ಕಳು ಮಾತ್ರ ಇದ್ದಾರೆ. ನಿಯಾಮನುಸಾರ ಅಂಗನವಾಡಿ ಸಹಾಯಕಿಯರೇ ಮಕ್ಕಳನ್ನು ಕೇಂದ್ರಗಳಿಗೆ ಕರೆದುಕೊಂಡು ಹೋಗಿ, ಮರಳಿ ಕರೆತರಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ ಸಹಾಯಕಿ ಪೋಷಕರಿಗೆ ಮಕ್ಕಳನ್ನು ಕೇಂದ್ರಕ್ಕೆ ತಂದು ಬೀಡುವಂತೆ ಸೂಚನೆ ನೀಡುತ್ತಾರೆ. ಮಾತ್ರವಲ್ಲದೇ 4 ಗಂಟೆವರೆಗೆ ಕೇಂದ್ರ ತೆರಯಬೇಕೆಂಬ ಸೂಚನೆ ಇದ್ದರೂ ಕೂಡ 3.30 ವರೆಗೆ ಮಾತ್ರ ಕೇಂದ್ರದಲ್ಲಿರುತಾರೆ. ಮಕ್ಕಳನ್ನು ಅಂಗಡಿ ಇಲ್ಲವೇ ರಸ್ತೆಯಲ್ಲಿ ನಿಲ್ಲಿಸಿ ಹೋಗುತ್ತೇನೆ. ಅಲ್ಲಿಂದ ನೀವೆ ಕರೆದುಕೊಂಡು ಹೋಗಿ ಎಂದು ಪೋಷಕರಿಗೆ ಆದೇಶ ಮಾಡುತ್ತಾರೆ. ಇನ್ನು ಶಿಕ್ಷಕರಂತೂ ವಾರದಲ್ಲಿ ಮೂರು ದಿನ ಮಾತ್ರ ಅಂಗನವಾಡಿಗೆ ಆಗಮಿಸುತ್ತಾರೆ. ಏಕೆ ಹೀಗೆ ಆಗುತ್ತಿದೆ ಎಂದು ಶಿಶು ಅಭಿವೃದ್ಧಿ ಅಧಿಕಾರಿಯನ್ನು ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಅಧಿಕಾರಿ ಅರುಂಧತಿ, ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ನನಗೆ ಹೆಚ್ಚುವರಿ ಜವಾಬ್ದಾರಿಯೂ ಇದೆ. ನಮ್ಮಲ್ಲಿ ಸೂಪರ್ ವೈಸರ್‍ಗಳ ಕೊರತೆ ಇರುವ ಕಾರಣ ಸಮಸ್ಯೆ ಉಂಟಾಗುತ್ತಿದೆ. 2 ಅಂಗನವಾಡಿಯಲ್ಲಿ ಕಾರ್ಯಕರ್ತೆ ಮತ್ತು 8 ಅಂಗನವಾಡಿಯಲ್ಲಿ ಸಹಾಯಕಿಯರ ಹುದ್ದೆ ಖಾಲಿ ಇದೆ. ಈ ಬಗ್ಗೆ ಗಮನ ಹರಿಸುತ್ತೇನೆ ಎಂದರು.

ಇಲಾಖೆಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ 2,006 ರಿಂದ ಜೂ 2019 ರವರೆಗೆ 3,491 ಬಾಂಡ್‍ಗಳನ್ನು ವಿತರಿಸಲಾಗಿದೆ. ಬಾಂಡ್ ಬರಲು ಬಾಕಿ ಇದ್ದ 372 ರಲ್ಲಿ 130 ಬಾಂಡ್ ಕಚೇರಿಗೆ ಬಂದಿದ್ದು, ವಿತರಣೆ ಮಾಡಲಾಗಿದೆ ಎಂದರು.

ತೋಟಗಾರಿಕೆ ಇಲಾಖೆಯ ಅಧಿಕಾರಿ ಚಂದ್ರಶೇಖರ್ ಮಾತನಾಡಿ, ರೈತರಿಗೆ ಬಟರ್‍ಫ್ರೂಟ್ ಗಿಡ ವಿತರಿಸಲು ಸಿದ್ಧತೆ ನಡೆಯುತ್ತಿದೆ ಎಂದರು. ಮಾಡಹಾಗಲಕಾಯಿಗೆ ಉತ್ತಮ ಬೇಡಿಕೆ ಇದೆ. ಈ ಬಳ್ಳಿಯನ್ನು ವಿತರಿಸಲು ಕ್ರಮ ಕೈಗೊಳ್ಳಿ, ಜೊತೆಗೆ ಜಿಲ್ಲೆಯಲ್ಲಿ ಜೇನು ಪೆಟ್ಟಿಗೆಗೆ ಬೇಡಿಕೆ ಇದೆ. ಈ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ ಎಂದು ಚಂದ್ರಶೇಖರ್‍ಗೆ ಅಧ್ಯಕ್ಷೆ ಸೂಚನೆ ನೀಡಿದರು.

ರೈತರಿಗೆ ಈ ಬಾರಿ ಸುಮಾರು 2 ಲಕ್ಷದ 70 ಸಾವಿರದಷ್ಟು ಕಾಳು ಮೆಣಸಿನ ಗಿಡ ವಿತರಣೆಗೆ ಸಿದ್ಧತೆ ನಡೆಸಲಾಗಿದೆ. ಮುಂದಿನ ತಿಂಗಳಿನಿಂದ ರೈತರಿಗೆ ಉಚಿತವಾಗಿ ಗಿಡವನ್ನು ವಿತರಣೆ ಮಾಡಲಾಗುತ್ತದೆ ಎಂದರು.

ಬೇತು ಪ್ರಾಥಮಿಕ ಶಾಲೆಯಲ್ಲಿ ಎಲ್ಲಾ ಮಕ್ಕಳ ಊಟದ ತಟ್ಟೆಯನ್ನು ದಿನವೊಂದಕ್ಕೆ ಎರಡು ವಿದ್ಯಾರ್ಥಿ ಗಳಂತೆ ಪ್ರತಿನಿತ್ಯ ತೊಳೆಸಲಾಗುತ್ತಿದೆ. ಇದು ಯಾವ ಕ್ರಮ, ಇದರಿಂದ ಮಕ್ಕಳ ಪಾಠ ಪ್ರವಚನದ ಸಮಯ ವ್ಯರ್ಥವಾಗುವದಿಲ್ಲವೇ ಎಂದು ತಾ.ಪಂ ಅಧ್ಯಕ್ಷೆ ಅಸಮಾಧಾನ ವ್ಯಕ್ತಪಡಿಸಿದರು. ಸಂಬಂಧಪಟ್ಟ ಶಾಲೆಯ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡುವಂತೆ ತಾ.ಪಂ.ಇಒ ಲಕ್ಷ್ಮಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅವರಿಗೆ ಸೂಚನೆ ನೀಡಿದರು.

ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆಯಾಗಿದೆ. ಸಮವಸ್ತ್ರಗಳು ಮಾತ್ರ ಲಭ್ಯವಾಗಿಲ್ಲ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆನ್ಲೈನ್‍ನಲ್ಲಿ ಪ್ರಗತಿಯಲ್ಲಿದೆ ಎಂದು ಗಾಯತ್ರಿ ಸಭೆಯ ಗಮನಕ್ಕೆ ತಂದರು.

ಚೆಸ್ಕಾಂ ಅಧಿಕಾರಿ ಮಹೇಶ್ ಮಾತನಾಡಿ, ಮಾರ್ಚ್‍ನಿಂದ ಇಲ್ಲಿವರೆಗೆ ಮಳೆಗೆ 227 ಕಂಬಗಳು ಹಾನಿಗೀಡಾಗಿದ್ದವು. ಈ ಬಗ್ಗೆ ಗಮನಹರಿಸಿದ್ದು, 20 ಕಂಬಗಳು ಮಾತ್ರ ದುರಸ್ಥಿಗೆ ಬಾಕಿ ಉಳಿದಿದೆ ಎಂದರು.

ಎಷ್ಟೇ ಸೂಚನೆ ನೀಡಿದರೂ ಅಲೂಮಿನಿಯಂ ಏಣಿ ಬಳಕೆ ಪ್ರಮಾಣ ಕಡಿಮೆಯಾಗಿಲ್ಲ. ಇದರಿಂದ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ರೈತರು ಅಲೂಮಿನಿಯಂ ಏಣಿ ಬಳಕೆ ಮಾಡಬಾರದು. ಹಾಗೂ ತೋಟದಲ್ಲಿ ವಿದ್ಯುತ್ ವಯರ್‍ಗಳು ಬಿದ್ದಿದ್ದರೆ ಇಲಾಖೆ ಗಮನಕ್ಕೆ ತರುವಂತೆ ಅಧಿಕಾರಿ ಸಭೆಗೆ ತಿಳಿಸಿದರು.

ಮೀನುಗಾರಿಕೆ, ಸಮಾಜ ಕಲ್ಯಾಣ, ಆಯುಷ್, ಅಕ್ಷರ ದಾಸೋಹ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಆಹಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಸೇರಿದಂತೆ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ನಡೆಯಿತು.

ಉಪಾಧ್ಯಕ್ಷ ಬೊಳಿಯಾಡೀರ ಸಂತು ಸುಬ್ರಮಣಿ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.