ಕರಿಕೆ: ಕೊಡಗಿನ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಒಂದಾದ ಭಾಗಮಂಡಲ ಕರಿಕೆ ರಸ್ತೆಯಲ್ಲಿ ಇದೀಗ ಕಳೆದ ಎರಡುಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬಾಚಿಮಲೆ ಎಂಬಲ್ಲಿ ಕಳೆದ ಬಾರಿ ಕುಸಿತಗೊಂಡಿದ್ದ ಜಾಗದಲ್ಲಿ ಇದೀಗ ಮಣ್ಣು ಕುಸಿತ ಉಂಟಾಗಿದ್ದು ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಕಳೆದ ಕೆಲ ತಿಂಗಳುಗಳಿಂದ ಲೋಕೋಪಯೋಗಿ ಇಲಾಖೆಗೆ ಮಣ್ಣು ತೆರವುಗೊಳಿಸುವಂತೆ ತಿಳಿಸಿದ್ದರೂ ಕೂಡ ಇದುವರೆಗೆ ಕ್ರಮ ಕೈಗೊಳ್ಳದಿರುವದು ಇದಕ್ಕೆ ಕಾರಣವಾಗಿದೆ.ಇದೀಗ ಮಡಿಕೇರಿ-ಸುಳ್ಯ ಹೆದ್ದಾರಿಯಲ್ಲಿ ಬಿರುಕು ಕಾಣಿಸಿ ಕೊಂಡಿದ್ದು ಪರ್ಯಾಯ ಸಂಪರ್ಕ ರಸ್ತೆಯಾಗಿರುವ ಇದೇ ಕರಿಕೆ ರಸ್ತೆಯಲ್ಲಿ ಪೂರ್ತಿ ಕೆಸರು ಹೊಂಡಗಳಾಗಿದ್ದು ವಾಹನ ಸವಾರರು ಪರದಾಡು ವಂತಾಗಿದೆ. ಜಿಲ್ಲಾಧಿಕಾರಿ ಗಳು ಕೂಡಲೇ ಸಂಬಂಧಿಸಿದ ಇಲಾಖೆಗೆ ಸೂಕ್ತ ರೀತಿಯಲ್ಲಿ ನಿರ್ದೇಶನ ನೀಡಿ ರಸ್ತೆ ಸಂಚಾರ ಸುಗಮಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬಿದಿರು ಮೆಳೆ ಬಿದ್ದು ಮನೆ ಜಖಂ
ಕರಿಕೆ: ಬಾಳೆಬಳಪು ಕೆ.ವಿ. ಸಿಂದು ಬಿನ್ ಕೆ.ಪಿ ವಿಜಯ ಎಂಬವರ ಮನೆ ಮೇಲೆ ಬೃಹತ್ ಬಿದಿರು ಮೆಳೆಯೊಂದು ಬುಡ ಸಮೇತ ಕಳೆದ ರಾತ್ರಿ ಉರುಳಿ ಬಿದ್ದಿದ್ದು ಮನೆಯ ಮೇಲ್ಚಾವಣಿಯ ಶೀಟು ಜಖಂಗೊಂಡಿದ್ದು ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಮಲೆಕ್ಕಿಗರಾದ ಪ್ರಭಾಕರ್ ಎಸ್.ಎನ್. ಗ್ರಾಮ ಸಹಾಯಕ ಜನಾರ್ಧನ ಭೇಟಿ ನೀಡಿ ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಮನೆಗೆ ಮರಬಿದ್ದು ವೃದ್ಧೆಗೆ ಗಾಯ
ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬಸವನಹಳ್ಳಿ ಗ್ರಾಮದ ನಿವಾಸಿ ಯಶೋಧ ಎಂಬವರು ವಾಸಿಸುತ್ತಿದ್ದ ಗುಡಿಸಲಿನ ಮೇಲೆ ಭಾರೀ ಗಾತ್ರದ ಮರವು ಅರ್ಧಕ್ಕೆ ತುಂಡಾಗಿ ಬಿದ್ದು ಒಂದು ಕಾಲಿಗೆ ತೀವ್ರ ರೀತಿಯ ಪೆಟ್ಟಾಗಿದೆ. ಈ ಘಟನೆಯು ಕಳೆದ ರಾತ್ರಿ 10ಗಂಟೆ ಸಮಯದಲ್ಲಿ ನಡೆದಿದೆ.
ಬಸವನಹಳ್ಳಿ ಗ್ರಾಮದ ಸರ್ವೆ ನಂ 11 ರಲ್ಲಿ ಸುಮಾರು 6 ವರ್ಷಗಳ ಹಿಂದೆ ಶಾಸಕರಾದ ಅಪ್ಪಚ್ಚುರಂಜನ್ 18 ಮಂದಿಗೆ ಇದೇ ಜಾಗಕ್ಕೆ ಹಕ್ಕು ಪತ್ರ ನೀಡಿದ್ದರು. ಆದರೆ ಈ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಮತ್ತು ಅಲ್ಲಿ ಇದ್ದ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ವತಿಯಿಂದ ತೊಡಕಾಗಿತ್ತು.
ಆದರೆ ಈ ಸಂಬಂಧ ಈ ವಿಭಾಗದ ಪಂಚಾಯಿತಿ ಸದಸ್ಯರು ಫಲಾನುಭವಿಗಳು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಅಲ್ಲಿ ಮನೆ ನಿರ್ಮಿಸಲು ಇಲಾಖೆಯವರು ಮರ ತೆರವುಗೊಳಿಸುವಂತೆ ಒತ್ತಾಯಿಸಿದ್ದರು. ಅದರಂತೆ ಗುಡ್ಡೆಹೊಸೂರು ಪಿ.ಡಿ.ಓ. ಶ್ಯಾಂ ತಮ್ಮಯ್ಯ ಅವರು ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿದ್ದರು.
ಅಲ್ಲದೆ ಕಳೆದ ತಿಂಗಳು ನಡೆಯಬೇಕಿದ್ದ
(ಮೊದಲ ಪುಟದಿಂದ) ಗ್ರಾ.ಪಂ. ಸಾಮಾನ್ಯ ಸಭೆಯನ್ನು ಅಲ್ಲಿನ ಬಿ.ಜೆ.ಪಿ. ಬೆಂಬಲಿತ ಸದಸ್ಯರು ಬಹಿಷ್ಕರಿಸಿದ್ದರು. ಅಲ್ಲದೆ ಬೇಗನೆ ಮರ ತೆರವುಗೊಳಿಸದಿದ್ದರೆ ಪ್ರತಿಭಟನೆ ಮಾಡುವದಾಗಿ ತಿಳಿಸಲಾಗಿತ್ತು. ಆದರೆ ಇದುವರೆಗೂ ಮನೆ ನಿವೇಶನದ ಸುತ್ತಮುತ್ತ ಮರ ಕಡಿಯಲು ಅರಣ್ಯ ಇಲಾಖೆ ಮುಂದಾಗಿಲ್ಲ.
ಹಕ್ಕು ಪತ್ರ ಪಡೆದ ಫಲಾನುಭವಿಗಳು ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ.
ಕಳೆದ ರಾತ್ರಿ 10 ಗಂಟೆಯ ಸಮಯಲ್ಲಿ ಯಶೋಧ ಮತ್ತು ಮಗ ಪ್ರಭು ಎಂಬವರು ಮಲಗಿದ್ದ ಸಂದÀರ್ಭ ಮರವು ತುಂಡಾಗಿ ಯಶೋಧ ಅವರು ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಈ ಬಗ್ಗೆ ಶಾಸಕರನ್ನು ಭೇಟಿಯಾಗಿ ಅಲ್ಲಿನ ಲ್ಯಾಂಪ್ಸ್ ಸಹಕಾರ ಸಂಘದ ನಿರ್ದೇಶಕ ಮೋಹನ್ ಅವರು ವಿಷಯವನ್ನು ಗಮನಕ್ಕೆ ತಂದಿದ್ದಾರೆ.
ಭಾರೀ ಮಳೆ ಗಾಳಿಗೆ ಮರಗಳು ಮನೆಗಳ ಮೇಲೆ ಬಿದ್ದು ಇನ್ನೂ ಹೆಚ್ಚಿನ ಸಾವುನೋವುಗಳು ಸಂಭವಿಸುವದಕ್ಕಿಂತ ಮೊದಲು ಅರಣ್ಯ ಇಲಾಖೆಯವರು ಮನೆ ನಿವೇಶನದ ಸುತ್ತಮುತ್ತಲಿನ ಮರಗಳನ್ನಾದರೂ ತೆರವುಗೊಳಿಸಿದರೆ ಮುಂದೆ ನಡೆಯುವ ಅನಾಹುತಗಳನ್ನು ತಡೆಯಬಹುದು. ಇಂದು ಗುಡ್ಡೆಹೊಸೂರು ಪಿ.ಡಿ.ಓ. ಶ್ಯಾಂ ಮತ್ತು ಅಧ್ಯಕ್ಷೆ ಕೆ.ಎಸ್. ಭಾರತಿ, ಅಲ್ಲಿನ ಸದಸ್ಯೆ ಡಾಟಿ ಉಮೇಶ್, ಮತ್ತು ಮಾಜಿ ಸದಸ್ಯ ಮಹೇಂದ್ರ, ಲ್ಯಾಂಪ್ಸ್ ಸಹಕಾರ ಸಂಘದ ನಿರ್ದೇಶಕ ಬಿ.ಕೆ. ಮೋಹನ್ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ ತಕ್ಷಣದಿಂದಲೇ ಶೆಡ್ಗಳ ಪಕ್ಕದಲ್ಲಿರುವ ಮರಗಳನ್ನು ಇಲಾಖೆಯವರು ತೆರವುಗೊಳಿಸುವಂತೆ ಇಲ್ಲಿನ ಪಿ.ಡಿ.ಓ. ಶ್ಯಾಂ ಮತ್ತು ಅಧ್ಯಕ್ಷೆ ಕೆ.ಎಸ್.ಭಾರತಿ ಅವರು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಮನೆ ನಿವೇಶನಕ್ಕೆ ಹಕ್ಕುಪತ್ರ ಸರಕಾರದಿಂದಲೇ ನೀಡಿದ ಮೇಲೆ ಮರ ತೆಗೆದು ಬಡವರಿಗೆ ಮನೆ ನಿರ್ಮಿಸಲು ಮತ್ತೆ ಇಲಾಖೆಯವರೇ ತೊಂದರೆ ನೀಡುತ್ತಿದ್ದಾರೆಂದು ಅಲ್ಲಿ ನೆಲೆಸಿರುವ ಮಂದಿ ದೂರಿದ್ದಾರೆ.
ಭಾಗಮಂಡಲ: ಹೋಬಳಿ ವ್ಯಾಪ್ತಿಯಲ್ಲಿ ಶನಿವಾರವೂ ಉತ್ತಮ ಮಳೆಯಾಗಿದೆ. ಭಾಗಮಂಡಲ ತಲಕಾವೇರಿ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಸತತ ಮಳೆಗೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರು ತುಂಬಿ ಹರಿಯುತ್ತಿದೆ. ಶನಿವಾರ ಮಧ್ಯಾಹ್ನದವರೆಗೆ ಮಳೆಯ ಬಿರುಸು ಕಡಿಮೆಯಾಗಿದ್ದು, ಅಪರಾಹ್ನ ಬಿಡುವುಕೊಟ್ಟು ಮಳೆ ಸುರಿಯಿತು. ಮುಂಗಾರುಮಳೆ ಒಂದು ತಿಂಗಳು ತಡವಾಗಿ ಸುರಿಯುತ್ತಿದ್ದು, ಹಿನ್ನೆಡೆಯಾಗಿದ್ದ ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಚೇರಂಬಾಣೆ, ಚೆಟ್ಟಿಮಾನಿ, ತಣ್ಣಿಮಾನಿ, ಕೋರಂಗಾಲ, ಅಯ್ಯಂಗೇರಿ ಮತ್ತಿತರ ಭಾಗಗಳಲ್ಲಿ ರೈತರು ಭತ್ತದ ಕೃಷಿಗೆ ಮುಂದಾಗಿದ್ದರು. ಮಳೆಯ ಕೊರತೆಯಿಂದ ಭತ್ತದ ಬಿತ್ತನೆಗೆ ಹಿನ್ನೆಡೆಯಾಗಿತ್ತು. ಇದೀಗ ಭತ್ತದ ಗದ್ದೆಗಳಲ್ಲಿ ನೀರು ತುಂಬಿರುವದರಿಂದ ಉಳುಮೆ ಕಾರ್ಯ ಮಾಡಿ ಬಿತ್ತನೆ ಕೆಲಸಕ್ಕೆ ರೈತರು ಮುಂದಾಗಿದ್ದಾರೆ.
ಭಾಗಮಂಡಲದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು 62 ಇಂಚು ಮಳೆ ಕಡಿಮೆಯಾಗಿದೆ.
ದಕ್ಷಿಣ ಕೊಡಗು
ಶ್ರೀಮಂಗಲ: ದಕ್ಷಿಣ ಕೊಡಗಿನ ಬಿರುನಾಣಿ, ಹುದಿಕೇರಿ, ಟಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಮಧ್ಯೆ ಮಧ್ಯೆ ಬಿಡುವು ನೀಡಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಶುಕ್ರವಾರ ರಾತ್ರಿ ಈ ವ್ಯಾಪ್ತಿಯಲ್ಲಿ ಗಾಳಿ ಸಹಿತ ಧಾರಕಾರ ಮಳೆಯಾಗಿದ್ದು, ಶನಿವಾರ ಸಂಜೆಯವರೆಗೂ ಮಳೆ ಮುಂದುವರೆದಿದೆ. ಬಿರುನಾಣಿ ವ್ಯಾಪ್ತಿಗೆ ಕಳೆದ 24 ಗಂಟೆಗಳಲ್ಲಿ 5.20 ಇಂಚು ಮಳೆಯಾಗಿದೆ.
ಟಿ. ಶೆಟ್ಟಿಗೇರಿ ವ್ಯಾಪ್ತಿಗೆ 4.42 ಇಂಚು ಮಳೆಯಾಗಿದೆ. ಶುಕ್ರವಾರ ರಾತ್ರಿ ಭಾರೀ ಗುಡುಗು ಸಹಿತ ಮಳೆ ಸುರಿದಿದೆ. ಶ್ರೀಮಂಗಲ, ಟಿ. ಶೆಟ್ಟಿಗೇರಿ, ಬಿರುನಾಣಿ, ಹುದಿಕೇರಿ ವ್ಯಾಪ್ತಿಯಲ್ಲಿ ಬಿ.ಎಸ್.ಎನ್.ಎಲ್. ಮೊಬೈಲ್ ಸೇವೆ ಕಡಿತವಾಗಿ ಗ್ರಾಹಕರಿಗೆ ತೀವ್ರ ತೊಂದರೆಯುಂಟಾಗಿತ್ತು. ಶನಿವಾರ ಬೆಳಿಗ್ಗೆ 10 ಗಂಟೆಯ ನಂತರ ದೂರವಾಣಿ ಸೇವೆ ದುರಸ್ತಿ ಪಡಿಸಲಾಗಿದೆ.
ಈ ವ್ಯಾಪ್ತಿಯ ಲಕ್ಷ್ಮಣತೀರ್ಥ ಮತ್ತು ಕಕ್ಕಟ್ಟ್ಪೆÇಳೆ ನದಿಯ ನೀರಿನ ಹರಿವಿನ ಮಟ್ಟ ಹೆಚ್ಚಾಗಿದೆ. ಪೆÇನ್ನಂಪೇಟೆ, ಕಾನೂರು, ಹರಿಹರ, ಕುಟ್ಟ ವ್ಯಾಪ್ತಿಯಲ್ಲಿಯೂ ಶುಕ್ರವಾರ ಉತ್ತಮ ಮಳೆಯಾಗಿದೆ.
ಸಿದ್ದಾಪುರ: ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸಿದ್ದಾಪುರ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಮಳೆಯಿಂದಾಗಿ ಚೆನ್ನಯ್ಯನಕೋಟೆ ಗ್ರಾಮದ ಚೆನ್ನಂಗಿ ಗುಡ್ಲೂರು ಗ್ರಾಮದ ನಿವಾಸಿ ಚಿಣ್ಣಪ್ಪ ಎಂಬವರ ಮನೆಯ ಗೋಡೆ ಬಿರುಕು ಬಿಟ್ಟು ಬಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಲೆಕ್ಕಿಗ ಸಂತೋಷ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿದ್ದಾಪುರ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ಅಮ್ಮತ್ತಿ ಕಂದಾಯ ಪರಿವೀಕ್ಷಕ ಅನಿಲ್ ನೇತೃತ್ವದಲ್ಲಿ ಮುಂಜಾಗ್ರತ ಕ್ರಮವನ್ನು ಕೈಗೊಳ್ಳಲಾಗಿದೆ. ನದಿದಡದ ನಿವಾಸಿಗಳಿಗೆ ಈಗಾಗಲೇ ಮುಂಜಾಗ್ರತೆ ಕೈಗೊಳ್ಳುವ ಬಗ್ಗೆ ನೋಟೀಸ್ ನೀಡಲಾಗಿದೆ.
ನೆಲ್ಯಹುದಿಕೇರಿಯ ಬರಡಿ ಹಾಗೂ ಬೆಟ್ಟದಕಾಡು ಭಾಗದ ನದಿ ದಡದಲ್ಲಿ ವಾಸವಾಗಿರುವ ನಿವಾಸಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಕುಶಾಲನಗರ ಹೋಬಳಿ ಕಂದಾಯ ಇಲಾಖೆಯ ವತಿಯಿಂದ ನೋಟೀಸ್ ನೀಡಲಾಯಿತು.
ಸೋಮವಾರಪೇಟೆ: ಕಳೆದ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಇಂದು ಮಳೆಯ ಪ್ರಮಾಣ ಇಳಿಮುಖಗೊಂಡಿತು.
ನಿನ್ನೆ ಸಂಜೆ ಭಾರೀ ಗಾಳಿಯೊಂದಿಗೆ ರಭಸದಿಂದ ಮಳೆ ಸುರಿಯಿತು. ಆದರೆ ಇಂದು ಬೆಳಗ್ಗೆ ವಾತಾವರಣದಲ್ಲಿ ಬದಲಾವಣೆ ಕಂಡುಬಂದು, ಮೋಡಗಳು ಮರೆಯಾಗಿ ಸಾಧಾರಣ ಮಳೆ ಸುರಿಯಿತು.
ಸುಂಟಿಕೊಪ್ಪ: ಮಳೆ ಗಾಳಿ ರಭಸಕ್ಕೆ ತೋಟದ ಲೈನ್ ಮನೆಗೆ ರಾತ್ರಿ ವೇಳೆ ಬೃಹದಾಕಾರದ ಮರ ಬಿದ್ದು ಮನೆಗೆ ಹಾನಿಯಾಗಿದ್ದು, ಮನೆಯಲ್ಲಿದ್ದವರು ಸಣ್ಣ ಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಲುಗುಲಿ ಪನ್ಯ ಗ್ರಾಮದ ಹಾರ್ಬೈಲ್ ರಸ್ತೆ ಸಮೀಪದಲ್ಲಿ ಕೆ.ಡಿ. ಬೋಪಯ್ಯ ಅವರಿಗೆ ಸೇರಿದ ಲೈನ್ಮನೆಯಲ್ಲಿ ಕುಮಾರ ಅವರ ಪತ್ನಿ ಮುತ್ತಮ್ಮ ಹಾಗೂ ಮಕ್ಕಳಾದ ಚಂದ್ರಶೇಖರ, ಕರುಣಾಕರ, ಡಿಸೋದರಿ ಎಂಬವರು ವಾಸವಾಗಿದ್ದರು. ತಾ. 5 ರಂದು ರಾತ್ರಿ ಮಳೆ ಗಾಳಿ ರಭಸಕ್ಕೆ ಉದ್ದಿನ ಮಠದ ಡಾ. ವಸಂತ ಅವರ ತೋಟದಲ್ಲಿದ್ದ ಬೃಹದಾಕಾರದ ಬೆಂಡೆ ಮರ ಬುಡಸಮೇತ ಮನೆಯ ಮೇಲೆ ಬಿದ್ದಿದ್ದು ಮನೆ ಜಖಂಗೊಂಡಿದೆ. ಹೆಂಚು ಕೌಕೋಲುಗಳು ಮನೆಯಲ್ಲಿ ಮಲಗಿದ್ದವರ ಮೇಲೆ ಬಿದ್ದಿದ್ದರಿಂದ ಸಣ್ಣಪುಟ್ಟ ಗಾಯಗಳಾಗಿವೆÉ.
6 ತಿಂಗಳ ಹಿಂದೆ ಗ್ರಾಮ ಪಂಚಾಯಿತಿಗೆ ಮರವನ್ನು ಕಡಿಯಬೇಕೆಂದು ಮನವಿ ನೀಡಿದರೂ ಮರ ಕಡಿಯದೆ ಇದ್ದುದರಿಂದ ಅನಾಹುತ ಸಂಭವಿಸಲು ಕಾರಣವೆಂದು ಗ್ರಾಮಸ್ಥರು ದೂರಿದ್ದಾರೆ. ಮನೆ ಜಖಂನಿಂದ ಅಂದಾಜು 5 ಲಕ್ಷರೂ ನಷ್ಟವಾಗಿದೆ ಎಂದು ಕಂದಾಯ ಇಲಾಖೆ, ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಸಾಧಾರಣ ಮಟ್ಟದ ಮಳೆಯಾಗುತ್ತಿರುವದರಿಂದ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಗೆ 725 ಕ್ಯೂಸೆಕ್ ನೀರು ಹರಿದುಬಂದಿದೆ.
ಕೂಡಿಗೆ: ಕೂಡಿಗೆ ವ್ಯಾಪ್ತಿಯ ಕೂಡಿಗೆ, ಕೂಡುಮಂಗಳೂರು, ಹಾರಂಗಿ ವ್ಯಾಪ್ತಿಗಳಲ್ಲಿ ತುಂತುರು ಮಳೆಯಾಗುತ್ತಿದೆ. ಸಾಧಾರಣ ಮಳೆ ಬಿದ್ದ ನಂತರ ಬಿಸಿಲು ಬರುತ್ತಿದೆ. ಹಾರಂಗಿ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಬೀಳುತ್ತಿದೆ. ಕೂಡಿಗೆ ವ್ಯಾಪ್ತಿಯ ಜೋಳ ಬಿತ್ತನೆ ಮಾಡಿರುವ ರೈತರಿಗೆ ತುಂತುರು ಮಳೆಯಿಂದ ನಿಟ್ಟುಸಿರು ಬಿಡುವಂತಾಗಿದೆ.
ಹಾರಂಗಿ ಅಣೆಕಟ್ಟೆಯ ನೀರನ್ನೇ ಅವಲಂಭಿಸಿರುವ ರೈತರು ತಮ್ಮ ಗದ್ದೆಗಳಲ್ಲಿ ಸಸಿ ಮಡಿಗಳನ್ನು ಮಾಡಲು ಉಳುಮೆಯಲ್ಲಿ ತೊಡಗಿದ್ದಾರೆ. ಸ್ಪಲ್ಪ ಪ್ರಮಾಣದ ಮಳೆ ಬೀಳುತ್ತಿರುವದರಿಂದ ರೈತರಲ್ಲಿ ಹರ್ಷ ಮೂಡಿದೆ. ಹಾರಂಗಿ ಅಣೆಕಟ್ಟೆಯಲ್ಲಿ ಇಂದು 1.143 ಟಿ.ಎಂ.ಸಿ ಸಂಗ್ರಹವಿದೆ.
ನಾಪೆÇೀಕ್ಲು: ನಾಲ್ಕುನಾಡು ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಮಳೆಯ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ ವಿವಿಧೆಡೆ 75 ರಿಂದ 100 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ. ಆಗೊಮ್ಮೆ ಈಗೊಮ್ಮೆ ಬಿರುಸಿನ ಮಳೆ, ಗಾಳಿ ಬಿಟ್ಟರೆ, ಆಗಾಗ ಸೂರ್ಯದೇವನ ಆಗಮನವೂ ಆಗುತ್ತಿದೆ. ಮಳೆ ಕೊರತೆಯ ಕಾರಣದಿಂದ ಮಳೆಯ ತವರೂರು ಎಂದು ಹೆಸರುಗಳಿಸಿರುವ ಇಲ್ಲಿ ಇನ್ನೂ ವರತೆ ಕಾಣಿಸಿಕೊಂಡಿಲ್ಲ. ತಲಕಾವೇರಿ ಮತ್ತು ಭಾಗಮಂಡಲಕ್ಕೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿರುವದನ್ನು ಹೊರತುಪಡಿಸಿದರೆ, ಇಲ್ಲಿ ಹುಟ್ಟಿ ಹರಿಯುವ ಹೊಳೆ, ಕೊಲ್ಲಿ, ತೋಡುಗಳಲ್ಲಿ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ. ಮಳೆ ನೀರಿನ ಸಹಾಯದಿಂದ ಭತ್ತದ ಕೃಷಿ ಮಾಡುವ ಕೃಷಿಕರು ಸಸಿ ಮಡಿ ತಯಾರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವದು ಕಂಡುಬರುತ್ತಿದೆ.
ನಾಪೋಕ್ಲು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶನಿವಾರ ಗುಡುಗು ಸಹಿತ ಮಳೆ ಸುರಿಯಿತು. ಮಳೆಯಿಂದಾಗಿ ಅಲ್ಲಲ್ಲಿ ನೀರು ಉಕ್ಕಿ ಹರಿಯುತ್ತಿದ್ದು ರಸ್ತೆಗೂ ಅಪಾಯ ಉಂಟಾಗುತ್ತಿದೆ. ಇಲ್ಲಿಗೆ ಸಮೀಪದ ದೊಡ್ಡಪುಲಿಕೋಟು ಗ್ರಾಮದಲ್ಲಿ ಕಳೆದ ವರ್ಷ ರಸ್ತೆಗೆ ನಿರ್ಮಿಸಿದ್ದ ತಡೆಗೋಡೆಯ ಮಣ್ಣು ಕುಸಿಯುತ್ತಿದ್ದು ಅಪಾಯ ಎದುರಾಗಿದೆ. ಈ ಹಿಂದೆ ಮಳೆ ಹೆಚ್ಚಾದಾಗ ಹೊಳೆಯ ನೀರುತುಂಬಿ ಸೇತುವೆ ಮೇಲೆ ಉಕ್ಕಿ ಹರಿಯುತ್ತಿತ್ತು. ಪರಿಣಾಮ ರಸ್ತೆ ಸಂಪರ್ಕ ಕಡಿತಗೊಳ್ಳುತ್ತಿತ್ತು. ಇದೀಗ ತಡೆಗೋಡೆ ಕುಸಿಯುತ್ತಿರುವ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು ಗ್ರಾಮಸ್ಥ ಮಣವಟ್ಟಿರ ದಯಾಚಿಣ್ಣಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ: ಕಳೆದ 3 ದಿನಗಳಿಂದ ತುಂತುರು ಮಳೆಯೊಂದಿಗೆ ಕುಶಾಲನಗರದಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿ ಬಹುತೇಕ ತುಂಬಿ ಹರಿಯುತ್ತಿರುವ ದೃಶ್ಯ ಗೋಚರಿಸಿದೆ.