ಮಡಿಕೇರಿ, ಜು. 6: ನಿನ್ನೆ ಸಂಜೆ ನಗರದ ಹೃದಯ ಭಾಗದಲ್ಲಿ ಮೂವತ್ತೆರಡು ವರ್ಷದ ಅವಿವಾಹಿತ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸುವದರೊಂದಿಗೆ, ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ನಗರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ನಗರದ ಹಳೆಯ ಖಾಸಗಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ತರಬೇತಿ ಕೇಂದ್ರವೊಂದರಲ್ಲಿ ಶೀಘ್ರಲಿಪಿ ಕಲಿಕೆ ಬಳಿಕ, ಖಾಸಗಿ ಬಸ್ ನಿಲ್ದಾಣದ ಮೇಲ್ಭಾಗ ರಸ್ತೆಗಾಗಿ ಹೊರಟಿದ್ದ ಆಕೆಯನ್ನು; ಬರೆ ಕುಸಿದಿರುವ ಸ್ಥಳದಲ್ಲಿ ಅಡ್ಡಗಟ್ಟಿರುವ ವ್ಯಕ್ತಿ ಕುತ್ತಿಗೆಯ ಸರ ಮತ್ತು ಮೊಬೈಲ್ ಕಿತ್ತುಕೊಂಡು ಪಕ್ಕದ ಪೊದೆಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ತಿಳಿದುಬಂದಿದೆ.ಈ ವೇಳೆ ಯುವತಿ ಬೊಬ್ಬೆ ಹೊಡೆದಾಗ; ಆಕೆಯನ್ನು ಥಳಿಸಿ ಗಾಯಗೊಳಿಸಿದ್ದು, ಈ ಕೂಗು ಕೇಳಿ ವ್ಯಕ್ತಿಯೊಬ್ಬರು ಬರುವದನ್ನು ಗಮನಿಸಿದ ಆರೋಪಿ ಕಾಲಿಗೆ ಬುದ್ದಿ ಹೇಳಿದ್ದಾನೆ.
(ಮೊದಲ ಪುಟದಿಂದ) ಹಲ್ಲೆಯಿಂದ ಗಾಯಗೊಂಡಿದ್ದ ಆಕೆಯನ್ನು ಇಲ್ಲಿನ ಆಸ್ಪತ್ರೆಗೆ ಸೇರಿಸಿದ್ದು, ಆಕೆಯ ಹೇಳಿಕೆ ಮೇರೆಗೆ ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿದ್ದಾರೆ. ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೇಳಿಕೆಯ ಮೂಲಕ ದೂರನ್ನು ನೀಡಿದ್ದು, ಸದರಿ ದೂರಿನಲ್ಲಿ ಸಂಜೆ ಸುಮಾರು 5 ಗಂಟೆಗೆ ಖಾಸಗಿ ಬಸ್ ನಿಲ್ದಾಣದ ಮೇಲ್ಭಾಗದ ತರಬೇತಿ ಕೇಂದ್ರದಲ್ಲಿ ಶೀಘ್ರಲಿಪಿ ಅಭ್ಯಾಸ ಮಾಡಿಕೊಂಡು ಬರುತ್ತಿದ್ದಾಗ ಬಸ್ ನಿಲ್ದಾಣದ ಬರೆ ಜರಿದ ಸ್ಥಳದ ರಸ್ತೆಯ ಮೇಲ್ಭಾಗ ಸುಮಾರು 25-30 ವರ್ಷ ಪ್ರಾಯದ ಕಪ್ಪು ಶರ್ಟ್ ಧರಿಸಿದ್ದ ವ್ಯಕ್ತಿಯು ಈ ಕೃತ್ಯ ಎಸಗಿದ್ದಾಗಿ ಸುಳಿವು ನೀಡಿದ್ದಾರೆ. ತನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ತನ್ನ ಬಲಗೈನಲ್ಲಿದ್ದ ಮೊಬೈಲನ್ನು ಕಿತ್ತುಕೊಂಡಿದ್ದಾನೆ.
ದೂರಿನ ಸಾರಾಂಶ: ಅನಂತರ ರಸ್ತೆಯ ಬಲಭಾಗದಲ್ಲಿ ಇರುವ ತಗ್ಗಾದ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ‘ನಿನ್ನನ್ನು ರೇಪ್ ಮಾಡುತ್ತೇನೆ’ ಎಂದು ಹೆದರಿಸಿ ಎಳೆದಾಡಿದ್ದಾನೆ. ಆಗ ಆಕೆ ಕೂಗಿಕೊಂಡಿದ್ದು, ಸದರಿ ವ್ಯಕ್ತಿಯು ತನ್ನ ಮುಖಕ್ಕೆ, ಮೂಗಿಗೆ, ಹಣೆಗೆ, ತಲೆಗೆ, ಕೆನ್ನೆಗೆ ಹೊಡೆದಿರುತ್ತಾನೆ. ಅಷ್ಟರಲ್ಲಿ ಬೊಬ್ಬೆ ಕೇಳಿ ಸ್ಥಳಕ್ಕೆ ಒಬ್ಬರು ಬಂದಿದ್ದು, ಈ ವೇಳೆ ಆರೋಪಿಯು ತನ್ನನ್ನು ಬಿಟ್ಟು; ಆತನು ಕಸಿದುಕೊಂಡಿದ್ದ ಪೆಂಡೆಂಟ್ ಇರುವ ಚಿನ್ನದ ಚೈನು, ಸ್ಯಾಮ್‍ಸಂಗ್ ಮೊಬೈಲ್‍ನೊಂದಿಗೆ ಓಡಿ ಹೋಗಿರುತ್ತಾನೆ. ಆದ್ದರಿಂದ ತನಗೆ ಮಾನಭಂಗ ಮಾಡಲು ಪ್ರಯತ್ನಿಸಿ ಜೀವ ಬೆದರಿಕೆ ಹಾಕಿದ ವ್ಯಕ್ತಿಯನ್ನು ಪತ್ತೆಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಆಕೆ ಕೋರಿದ್ದಾರೆ. ಸದರಿ ದೂರನ್ನು ಮಡಿಕೇರಿ ಪೊಲೀಸ್ ಠಾಣೆ ಮೊ.ಸಂ.63/19 ಕಲಂ 394, 354, 506 ಐಪಿಸಿ ರೀತ್ಯ ದಾಖಲಿಸಿಕೊಳ್ಳಲಾಗಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಉಪಾಧೀಕ್ಷಕ ಕೆ.ಎಸ್. ಸುಂದರ್‍ರಾಜ್ ಮಾರ್ಗದರ್ಶನದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ನಗರ ಪೊಲೀಸ್ ಠಾಣಾಧಿಕಾರಿ ಎಂ. ಷಣ್ಮುಗಂ, ಎ.ಎಸ್.ಐ. ರಮೇಶ್, ಸಿಬ್ಬಂದಿಗಳಾದ ಕೆ.ಕೆ. ದಿನೇಶ್, ಎ.ವಿ. ಕಿರಣ್, ಸಿ.ಯು. ಚರ್ಮಣ್ಣ, ಹರೀಶ, ನಾಗರಾಜ್ ಎಸ್. ಕಡಗಣ್ಣವರ್, ಪ್ರವೀಣ್ ಬಿ.ಕೆ. ಮತ್ತು ಭಾನುಪ್ರಕಾಶ್ ಅವರುಗಳನ್ನು ಒಳಗೊಂಡ ತಂಡ ಪ್ರಕರಣ ದಾಖಲಾದ 12 ಗಂಟೆಯೊಳಗೆ ರಾಜ ರಾಜೇಶ್ವರಿ ನಗರ ನಿವಾಸಿಯಾದ ಆರೋಪಿ ಅವಿನಾಶ್ ಅಲಿಯಾಸ್ ಅವಿ (29) ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಯಿಂದ ಫಿರ್ಯಾದಿಗೆ ಸಂಬಂಧಿಸಿದ 8 ಗ್ರಾಂ ಚಿನ್ನದ ಚೈನು, ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಪೊಲೀಸರ ತಂಡದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ. ಈ ಕೃತ್ಯವನ್ನು ಭೇದಿಸಿರುವ ಪೊಲೀಸ್ ತಂಡದ ಕಾರ್ಯಕ್ಕೆ ಜನವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತಗೊಂಡಿದೆ.