ಮಡಿಕೇರಿ, ಜು. 6: ಕರ್ನಾಟಕ ರಾಜಕೀಯದಲ್ಲಿ ಇಂದು ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಒಟ್ಟು 11 ಶಾಸಕರು ರಾಜೀನಾಮೆ ನೀಡಿದ್ದು, ಇತ್ತೀಚೆಗೆ ಆನಂದ್ ಸಿಂಗ್ ರಾಜೀನಾಮೆಯೂ ಸೇರಿದಂತೆ 12 ಮಂದಿ ಮೈತ್ರಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುವದ ರೊಂದಿಗೆ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಬುಡ ಅಲ್ಲಾಡುತ್ತಿದೆ. ಇನ್ನು ಮೂರು ಮಂದಿ ತಾ. 7ರಂದು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.ವಿದೇಶದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಗೈರಲ್ಲಿ ಇಂದು ನಡೆದ ರಾಜಕೀಯ ಕ್ಷಿಪ್ರಕ್ರಾಂತಿ ಕರ್ನಾಟಕದಲ್ಲಿ ಹಲವು ಊಹಾ ಪೊಹಾಗಳನ್ನು ಸೃಷ್ಟಿ ಮಾಡಿದ್ದು, ಶಾಸಕರ ರಾಜೀನಾಮೆಯಲ್ಲಿ ತನ್ನ ಪಾತ್ರವೇನು ಇಲ್ಲವೆಂದು ಬಿಜೆಪಿ ಹೇಳಿಕೊಂಡರೆ ಶಾಸಕರ ಖರೀದಿಗೆ ಆ ಪಕ್ಷ ಮುಂದಾಗಿ ಪ್ರಜಾಪ್ರಭುತ್ವಕ್ಕೆ ಗಂಡಾಂತರ ತಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.ಗುಪ್ತಚರ ಇಲಾಖೆಯ ವೈಫಲ್ಯ ಹಾಗೂ ಆಡಳಿತ ನಡೆಸುವವರ ಕಲ್ಪನೆಯಲ್ಲೂ ಕಂಡಿರದಿದ್ದ ಪಕ್ಷ ಶಾಸಕರ ರಾಜೀನಾಮೆ ಪರ್ವ ಆರಂಭವಾಗಿದ್ದು, 20ಕ್ಕೂ ಹೆಚ್ಚು ಮಂದಿ ಒಟ್ಟು ಮೈತ್ರಿ ಸರಕಾರದ ವಿರುದ್ಧ ಸೆಟೆದು ನಿಲ್ಲುವ ಸುಳಿವನ್ನು ಅತೃಪ್ತ ಶಾಸಕರು ಹೊರಹಾಕಿದ್ದಾರೆ.ಸಿದ್ದರಾಮಯ್ಯ ಅವರೊಂದಿಗೆ ವೈಮನಸು ಹೊಂದಿ ಕಾಂಗ್ರೆಸ್ ಬಿಟ್ಟು ಮೂಲೆಯಲ್ಲಿದ್ದ ಹೆಚ್. ವಿಶ್ವನಾಥ್ ಅವರಿಗೆ ಹುಣಸೂರಿನಲ್ಲಿ ಟಿಕೆಟ್ ಕೊಡಿಸಿ ಗೆಲ್ಲಿಸಿ ಪಕ್ಷದ ರಾಜ್ಯಾಧ್ಯಕ್ಷ ನನ್ನಾಗಿ ಕೂಡ ಮಾಡಿ ರಾಜಕೀಯ ಪುನರ್ಜೀವ ಕೊಟ್ಟಿದ್ದ ಜೆಡಿಎಸ್ ವಿರುದ್ಧವೇ ಇಂದು ವಿಶ್ವನಾಥ್ ಅವರು ಅತೃಪ್ತಿ ವ್ಯಕ್ತಪಡಿಸಿ ರಾಜೀ ನಾಮೆ ನೀಡಿರುವದು ವಿಶೇಷವಾಗಿದೆ. ಸಿದ್ದರಾಮಯ್ಯರವರ ಆಪ್ತವಲಯ ದಲ್ಲಿ ಗುರುತಿಸಿಕೊಂಡಿದ್ದ ಎಸ್.ಟಿ. ಸೋಮಶೇಖರ್ ಹಾಗೂ ಇತರರು ಮೈತ್ರಿ ಸರಕಾರದ ವಿರುದ್ಧ ಮುಗಿ ಬಿದ್ದಿರುವದರ ಹಿಂದೆ ಸಿದ್ದರಾಮಯ್ಯ ರವರ ಕೈವಾಡ ಇದೆ ಎಂದು ಕಾಂಗ್ರೆಸ್ಸಿಗರೇ ಆರೋಪಿಸಿದ್ದಾರೆ.

ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್, ಹುಣಸೂರು ಜೆಡಿಎಸ್‍ನ

(ಮೊದಲ ಪುಟದಿಂದ) ಎಚ್.ವಿಶ್ವನಾಥ್ ಹಾಗೂ ಮಹಾಲಕ್ಷ್ಮಿ ಲೇಔಟ್‍ನ ಶಾಸಕ ಗೋಪಾಲಯ್ಯ ಹಾಗೂ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್, ಮಹೇಶ್ ಕುಮಟಳ್ಳಿ, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಹಾಗೂ ಬಿ.ಟಿ.ಎಂ. ಲೇಔಟ್ ಶಾಸಕ ರಾಮಲಿಂಗಾರೆಡ್ಡಿ, ಕೆಜಿಎಫ್ ಶಾಸಕ ಎಸ್.ಎನ್. ಸುಬ್ಬ ರೆಡ್ಡಿ, ಕೆ.ಆರ್. ಪೇಟೆಯ ನಾರಾಯಣ ಗೌಡ ಹೀಗೆ 10 ಮಂದಿ ರಾಜೀನಾಮೆ ಸಲ್ಲಿಸಿದ್ದಾರೆ. ತಾ. 7ರಂದು ಜಯನಗರ ಶಾಸಕ ಸೌಮ್ಯರೆಡ್ಡಿ, ಕೆ.ಆರ್. ಪುರಂ ಶಾಸಕ ಭೈರತಿ ಬಸವರಾಜ್ ಹಾಗೂ ಆರ್.ಕೆ. ನಗರದ ಶಾಸಕ ಮುನಿರತ್ನ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಒಟ್ಟು 13 ಶಾಸಕರ ಬೆಂಬಲ ಹಿಂತೆಗೆತ ಹಾಗೂ ಇತ್ತೀಚೆಗೆ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದು, ಒಟ್ಟು 14 ಮಂದಿಯ ಬೆಂಬಲದ ಬಲ ಕುಸಿದಿದೆ.

ಕಾಂಗ್ರೆಸ್ 78 ಹಾಗೂ ಜೆಡಿಎಸ್‍ನ 37 ಮತ್ತು ಬಿಎಸ್‍ಪಿ 1, ಪಕ್ಷೇತರರು ಇಬ್ಬರ ಬೆಂಬಲದಿಂದ 118 ಮಂದಿ ಸಂಖ್ಯಾ ಬಲ ಹೊಂದಿದ್ದ ಮೈತ್ರಿ ಸರ್ಕಾರಕ್ಕೆ 14 ಮಂದಿಯ ನಿರ್ಗಮನದಿಂದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದ್ದು, ಇನ್ನೂ 10-15 ಮಂದಿ ರಾಜೀನಾಮೆ ನೀಡುವ ಸಾಧ್ಯತೆ ಬಗ್ಗೆ ಮಾತುಗಳು ಕೇಳಿಬರುತ್ತಿದೆ.

ಸಂಜೆವರೆಗಿನ ಬೆಳವಣಿಗೆಯ ನಂತರ ಅತೃಪ್ತ ಶಾಸಕರು ದೂರವಾಣಿ ಕರೆಗೂ ಅಲಭ್ಯವಾಗಿದ್ದು, ಮುಂದಿನ ಬೆಳವಣಿಗೆಗೆ ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ.

ಅಮೇರಿಕಾದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬೆಂಗಳೂರಿಗೆ ತಾ. 7ರಂದು ಹಿಂತಿರುಗಲಿದ್ದು, ಮುಜುಗರ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ನೇರವಾಗಿ ರಾಜೀನಾಮೆ ಸಲ್ಲಿಸಲಿರುವದಾಗಿ ಹೇಳಲಾಗುತ್ತಿದೆ.

ಈ ಮಧ್ಯೆ ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಕಾಂಗ್ರೆಸ್ ವರಿಷ್ಠ ಸಿದ್ದರಾಮಯ್ಯ ಅವರ ನಿವಾಸಗಳಲ್ಲೂ ನಿರಂತರ ಸಭೆಗಳು ನಡಿದಿವೆ. ದೆಹಲಿಯಿಂದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರು ಹಾಗೂ ಪ್ರಮುಖರೊಂದಿಗೆ ಚರ್ಚಿಸುತ್ತಿದ್ದು, ಸರ್ಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.