ಶ್ರೀಮಂಗಲ, ಜು. 6: ಶ್ರೀಮಂಗಲ ಪಟ್ಟಣದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಮಳೆಗೆ ಸೋರುತ್ತಿದ್ದು, ಗ್ರಂಥಾಲಯದಲ್ಲಿ ಬೆಲೆಬಾಳುವ ಪುಸ್ತಕಗಳು ತೇವಾಂಶದಿಂದ ಹಾಳಾಗುವ ಅಪಾಯ ಎದುರಾಗಿದೆ.

ಶ್ರೀಮಂಗಲ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆ ಬೀಳುತ್ತದೆ. ಗ್ರಂಥಾಲಯ ಕಟ್ಟಡ ಆರ್.ಸಿ.ಸಿ. ಕಟ್ಟಡವಾದರೂ ಮೇಲ್ಛಾವಣಿ ಸೋರುತ್ತಿಲ್ಲ. ಆದರೆ ಕಟ್ಟಡದ ಕಿಟಿಕಿ ಬಾಗಿಲುಗಳಿಗೆ ಹಾಗೂ ಸುತ್ತಲೂ ನಿರ್ಮಿಸಿರುವ ಸಜ್ಜೆಯಿಂದ ನೀರು ನಿಂತು ಕಟ್ಟಡದ ಗೋಡೆ ಸಂಪೂರ್ಣ ತೇವಗೊಂಡಿದೆ. ಗ್ರಂಥಾಲಯದಲ್ಲಿ ಅಮೂಲ್ಯವಾದ ಪುಸ್ತಕಗಳಿದ್ದು, ತೇವಾಂಶಕ್ಕೆ ಸಿಲುಕಿ ಪುಸ್ತಕಗಳ ಹಾಳೆ ನೆನೆಯುತ್ತಿವೆ.

ಕಟ್ಟಡದ ಕಿಟಕಿ ಹಾಗೂ ಬಾಗಿಲುಗಳು ಗೆದ್ದಲು ತಿಂದು ಹಾಳಾಗಿದ್ದು, ಹಲವು ಕಿಟಕಿಗಳ ಗಾಜು ಒಡೆದಿರುವದರಿಂದ ಮಳೆ ಗಾಳಿಗೆ ಮಳೆಯ ನೀರು ಒಳಗೆ ಬರದಂತೆ ತಡೆಯಲು ಚೀಲ ಹಾಗೂ ಪ್ಲಾಸ್ಟಿಕ್ ಹೊದಿಕೆಗಳನ್ನು ಹೊದಿಸಲಾಗಿದೆ. ಶ್ರೀಮಂಗಲ ಗ್ರಾ.ಪಂನ ನಿರ್ವಹಣೆಯಲ್ಲಿರುವ ಗ್ರಂಥಾಲಯವನ್ನು ಗ್ರಾಮ ಪಂಚಾಯಿತಿಯ ಕಟ್ಟಡ ದುರಸ್ತಿಗೊಳಿಸುವ ಹಿನೆÀ್ನಲೆ ಕಳೆದ 4 ವರ್ಷದಿಂದ ಜಿಲ್ಲಾ ಪಂಚಾಯಿತಿ ಸಮುದಾಯ ಭವನಕ್ಕೆ ಸ್ಥಳಾಂತರಿಸಿ ನಡೆಸಲಾಗುತ್ತಿದೆ. ಮಳೆಗಾಲದಲ್ಲಿ ಗ್ರಂಥಾಲಯಕ್ಕೆ ಗಾಳಿ ಮಳೆಯಿಂದ ಒಳ ನುಸುಳುವ ನೀರಿನಿಂದಾಗಿ ಪುಸ್ತಕ ಹಾಗೂ ಪತ್ರಿಕೆ ಓದಲು ಬರುವವರಿಗೆ ಅನಾನುಕೂಲವಾಗುತ್ತಿದೆ. ಪುಸ್ತಕಗಳನ್ನು ತೆರೆದ ಕಪಾಟುಗಳಲ್ಲಿ ಇಟ್ಟಿರುವದರಿಂದ ಸುಲಭವಾಗಿ ತೇವಾಂಶವನ್ನು ಹೀರಿಕೊಳ್ಳುತ್ತದೆ. ಒಟ್ಟಿನಲ್ಲಿ ಕಟ್ಟಡದ ದುರಾವಸ್ಥೆಯಿಂದ ಅಮೂಲ್ಯವಾದ ಗ್ರಂಥ ಭಂಡಾರಕ್ಕೆ ಹಾನಿಯಾಗುತ್ತಿದ್ದು, ಅಮೂಲ್ಯ ಪುಸ್ತಕದ ರಕ್ಷಣೆಗೆ ಸಂಬಂಧಪಟ್ಟವರು ತುರ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶ್ರೀಮಂಗಲ ಸಾರ್ವಜನಿಕ ಗ್ರಂಥಾಲಯದ ಕಟ್ಟಡದ ದುಸ್ಥಿತಿಯ ಬಗ್ಗೆ ಗಮನ ಹರಿಸಲಾಗುವದು. ಈ ಕಟ್ಟಡದ ದುರಸ್ತಿಗೆ ಈಗಾಗಲೇ ಅನುದಾನ ಕಾಯ್ದಿರಿಸಲಾಗಿದೆ. ಮಳೆಗಾಲಕ್ಕೆ ಮುನ್ನವೇ ಈ ಕಟ್ಟಡದ ದುರಸ್ತಿ ಆಗಬೇಕಾಗಿತ್ತು. ಕೆಲವು ತಾಂತ್ರಿಕ ಕಾರಣದಿಂದ ಮಾಡಲು ಸಾಧ್ಯವಾಗಲಿಲ್ಲ. ಆದಷ್ಟು ಬೇಗ ಈ ಕಾಮಗಾರಿಯನ್ನು ಕೈಗೆತ್ತಿಕೊಂಡು ಸರಿಪಡಿಸಲಾಗುವದು ಎಂದು ಗ್ರಾ.ಪಂ. ಅಧ್ಯಕ್ಷೆ ಕಲ್ಪನಾ ತಿಮ್ಮಯ್ಯ ತಿಳಿಸಿದ್ದಾರೆ.