ಇದುವರೆಗೆ 11 ಮಂದಿ ರಾಜೀನಾಮೆ ನೀಡಿದ್ದು, ಮಂಗಳವಾರ ಈ ಬಗ್ಗೆ ಪರಿಶೀಲಿಸಲಾಗುವದು ಎಂದು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ತಿಳಿಸಿದ್ದಾರೆ. ಇಂದು ಬೆಳಿಗ್ಗೆ 7 ಮಂದಿ ಶಾಸಕರು ವಿಧಾನಸೌಧ ಪ್ರವೇಶಿಸುತ್ತಿದ್ದಂತೆಯೇ ಖಾಸಗಿ ಕೆಲಸ ನಿಮಿತ್ತ ಹೊರತೆರಳಿದ ರಮೇಶ್ ಕುಮಾರ್ ಮಾಧ್ಯಮ ಮಂದಿಯ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತನ್ನ ಕುಟುಂಬ ಸದಸ್ಯರೊಬ್ಬರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಇಂತಹ ಸಂದರ್ಭದಲ್ಲಿ ಮಾನವೀಯತೆ ಹಾಗೂ ಸೌಜನ್ಯವಿಲ್ಲದ ನೀವು ಹೊರ ನಡೆಯಿರಿ ಎಂದು ಮಾಧ್ಯಮದವರನ್ನು ಗದರಿಸಿದರು. ಆನಂತರ ಮಂಗಳವಾರ ರಾಜೀನಾಮೆ ಅರ್ಜಿಯನ್ನು ಪರಿಶೀಲಿಸುವದಾಗಿ ತಿಳಿಸಿದರು.(ಮೊದಲ ಪುಟದಿಂದ) ಸರಕಾರ ವಿಫಲ: ವಿಶ್ವನಾಥ್ರಾ ಜೀನಾಮೆ ಸಲ್ಲಿಸಿದ ಬಳಿಕ ರಾಜ್ಯಪಾಲರನ್ನು ಭೇಟಿಯಾದ ಶಾಸಕರ ನಿಯೋಗದಲ್ಲಿದ್ದ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಹಾಗೂ ಹುಣಸೂರು ಶಾಸಕ ಎ.ಹೆಚ್. ವಿಶ್ವನಾಥ್ ರಾಜಭವನದ ಎದುರು ಸುದ್ದಿಗೋಷ್ಠಿ ನಡೆಸಿ ಮೈತ್ರಿ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಸರಕಾರ ಆಡಳಿತದಲ್ಲಿಯೂ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳನ್ನೇ ನೇರ ಗುರಿಮಾಡಿದ ವಿಶ್ವನಾಥ್ ಅತೃಪ್ತ ಶಾಸಕರ ಮುಂದಿನ ನಡೆಯನ್ನು ಪ್ರಕಟಿಸುವದಾಗಿ ತಿಳಿಸಿದರು. ತಾವೆಲ್ಲ ಹಿರಿಯ ಶಾಸಕರುಗಳಾಗಿದ್ದು, ಆಪರೇಷನ್ ಕಮಲದಂತಹ ಚಟುವಟಿಕೆಗೆ ಒಳಗಾಗುವ ಮನಸ್ಥಿತಿ ಇರುವವರಲ್ಲ ಎಂದು ಸ್ಪಷ್ಟಪಡಿಸಿ ಬಿಜೆಪಿಯ ಕೈವಾಡವನ್ನು ತಳ್ಳಿ ಹಾಕಿದರು.

ಏನೂ ಗೊತ್ತಿಲ್ಲ: ಸಿದ್ದರಾಮಯ್ಯ

ಇಂದಿನ ಕ್ಷಿಪ್ರ ಬೆಳವಣಿಗೆ ಬಗ್ಗೆ ತನಗೇನೂ ಅರಿವಿಲ್ಲದಿದ್ದು, ಹಲವು ಶಾಸಕರೊಂದಿಗೆ ಸಚಿವ ಡಿ.ಕೆ. ಶಿವಕುಮಾರ್ ಅವರು ಸಂಧಾನ ಸಭೆ ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಿಗ್ಗೆ ತಿಳಿಸಿದರು. ಸಂಜೆ ನಡೆದ ಕಾಂಗ್ರೆಸ್ ಪರಿಷ್ಠರ ಸಭೆಯಲ್ಲಿ ಹಲವು ಶಾಸಕರನ್ನು ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ನಡೆಸಿಕೊಂಡ ಬಗ್ಗೆ ಸಿದ್ದರಾಮಯ್ಯ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸರಿಯಾಗುತ್ತೆ: ಶಿವಕುಮಾರ್

ಹಲವು ಶಾಸಕರು ಪಕ್ಷ ಹಾಗೂ ಸರಕಾರದ ವಿರುದ್ಧ ಅಸಮಾಧಾನಗೊಂಡಿದ್ದು, ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವದು ಎಂದು ಮೈತ್ರಿ ಸರಕಾರದ ಪ್ರಮುಖ ಸಚಿವ ಡಿ.ಕೆ. ಶಿವಕುಮಾರ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಇಂದು ಬೆಳಿಗ್ಗೆ ವಿಧಾನಸಭಾಧ್ಯಕ್ಷರ ಕೊಠಡಿಯಲ್ಲಿ ಅತೃಪ್ತ ಶಾಸಕರು ಪ್ರತ್ಯೇಕ ರಾಜೀನಾಮೆ ಪತ್ರಗಳನ್ನು ಹಿಡಿದು ಅಧ್ಯಕ್ಷರಿಗಾಗಿ ಕಾಯ್ದು ಕುಳಿತಿದ್ದ ಸಂದರ್ಭ ದಿಢೀರಾಗಿ ಅಲ್ಲಿಗೆ ಆಗಮಿಸಿದ ಸಚಿವ ಶಿವಕುಮಾರ್ ಅವರು ಶಾಸಕ ಮುನಿರತ್ನ ಅವರ ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ದು, ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲಾಗಿದೆ.

ಕುಸಿದ ಸಂಖ್ಯಾಬಲ

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ 14 ಶಾಸಕರ ರಾಜೀನಾಮೆಯಿಂದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಲ್ಪಮತಕ್ಕೆ ಕುಸಿದಿದೆ. ಸದ್ಯ ವಿಧಾನಸಭೆಯಲ್ಲಿರುವ ಶಾಸಕರ ಸಂಖ್ಯಾಬಲ 210 ಆಗಿದ್ದು, ಉಭಯ ಪಕ್ಷಗಳ 14 ಶಾಸಕರ ರಾಜೀನಾಮೆಯಿಂದಾಗಿ ಸಮ್ಮಿಶ್ರ ಸರಕಾರ ಇದೀಗ 105ಕ್ಕೆ ಕುಸಿದಿದೆ. ಪ್ರತಿಪ್ಷಕ ಬಿಜೆಪಿಯ ಸಂಖ್ಯಾಬಲ 105 ಆಗಿದೆ. ಬಹುಮತಕ್ಕೆ 106 ಶಾಸಕರ ಬೆಂಬಲ ಅಗತ್ಯವಿದೆ. ಒಂದು ವೇಳೆ ಪಕ್ಷೇತರ ಶಾಸಕರು ಬಿಜೆಪಿ ಕಡೆ ವಾಲಿದರೆ 107 ಆಗಲಿದೆ. ಅಂತಹ ಸಂದರ್ಭದಲ್ಲಿ ಬಿಜೆಪಿ ಸುಲಭವಾಗಿ ಸರಕಾರ ರಚಿಸಬಹುದಾಗಿದೆ.