*ಗೋಣಿಕೊಪ್ಪಲು, ಜು. 6: ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಬುಡಕಟ್ಟು ಜನರ ಬದುಕು ಇಂದಿಗೂ ಹಸನಾಗಲಿಲ್ಲ. ಇವರ ಬಾಳು ಹೇಳ ತೀರದ ಗೋಳಾಗಿದೆ. ಸರ್ಕಾರದಿಂದ ಹಕ್ಕು ಪತ್ರಗಳು ನೀಡಲಾಗಿದ್ದರೂ, ಮೂಲಭೂತ ಸೌಕರ್ಯಗಳು ಮಾತ್ರ ಇದುವರೆಗೆ ಒದಗಿಸಿಲ್ಲ. ಇದು ಕನಸ್ಸಿನ ಮಾತಾಗಿಯೇ ಉಳಿದುಕೊಂಡಿದೆ.
ಕಳೆದ ನಾಲ್ಕು ವರ್ಷಗಳಿಂದ ಹಕ್ಕುಪತ್ರ ಹಿಡಿದು ಸಂಬಂಧಪಟ್ಟ ಇಲಾಖೆಗಳನ್ನು ವಸತಿ ನಿರ್ಮಾಣಕ್ಕಾಗಿ ಹಾತೂರು ಗ್ರಾ.ಪಂ. ವ್ಯಾಪ್ತಿಯ ಕುಂದ ಗ್ರಾಮದ ಬಸವೇಶ್ವರ ಬಡಾವಣೆಯ ನಿವಾಸಿಗಳು ಅಲೆದರೂ ಸ್ವಂತ ಸೂರು ಹೊಂದುವ ಕನಸು ನನಸಾಗಲೇ ಇಲ್ಲ. ಕೆಲ ವರ್ಷಗಳ ಹಿಂದೆ ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಯ ಸೀತಾ ಕಾಲೋನಿಯಲ್ಲಿ ವಾಸವಾಗಿದ್ದ 116 ಕುಟುಂಬಗಳು ತಾವು ವಾಸವಿದ್ದ ಸ್ಥಳದಲ್ಲಿ ಕಸವಿಲೇವಾರಿ ಘಟಕ ನಿರ್ಮಾಣವಾದ ಕಾರಣ ಬುಡಕಟ್ಟು ಕುಟುಂಬದವರನ್ನು ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಹಾತೂರು ಗ್ರಾ.ಪಂ.ಗೆ ಒಳಪಡುವ ಕುಂದ ಗ್ರಾಮಕ್ಕೆ ಸ್ಥಳಾಂತರಿಸಲಾಯಿತು.
ಈ ಜಾಗದಲ್ಲಿ ಕಾಯ್ದಿರಿಸಿದ 6 ಎಕರೆ ಜಾಗವನ್ನು ನಿರಾಶ್ರಿತರ ವಸತಿ ನಿರ್ಮಾಣಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಕಳೆದ ಎರಡು ವರ್ಷಗಳ ಹಿಂದೆ 116 ಕುಟುಂಬಗಳು ಸೀತಾ ಕಾಲೋನಿಯಿಂದ ನೂತನವಾಗಿ ನಿರ್ಮಾಣವಾಗುತ್ತಿರುವ ಬಸವೇಶ್ವರ ಬಡಾವಣೆಗೆ ಸ್ಥಳಾಂತರಗೊಂಡರು. ಹೊಸ ಜೀವನ ಪ್ರಾರಂಭಿಸುವ ಉತ್ಸಾಹದೊಂದಿಗೆ 116 ಕುಟುಂಬಗಳು ಬಸವೇಶ್ವರ ಬಡಾವಣೆಗೆ ಹೆಜ್ಜೆ ಇಟ್ಟರು. ಆದರೆ ಬಡಾವಣೆಗೆ ಬಂದು ಎರಡು ವರ್ಷಗಳು ಕಳೆದರೂ, ಇಂದಿಗೂ ವಸತಿ ಗೃಹಗಳು ನಿರ್ಮಾಣಗೊಂಡಿಲ್ಲ. ಶಾಸಕರು ಸೇರಿದಂತೆ ಹಾತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವಸತಿ ನಿರ್ಮಾಣಕ್ಕೆ ವ್ಯವಸ್ಥೆ ಕಲ್ಪಿಸಿದರೂ, ರೂ. 3.86 ಕೋಟಿ ವೆಚ್ಚದಲ್ಲಿ 116 ಮನೆಗಳÀ ನಿರ್ಮಾಣಕ್ಕೆ ಕ್ರಮ ಕೈಗೊಂಡು ಸಂಬಂಧಿಸಿದವರಿಗೆ ಹಕ್ಕು ಪತ್ರವನ್ನು ವಿತರಿಸಲಾಯಿತು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮನೆಗಳ ನಿರ್ಮಾಣ ಸಾಧ್ಯವಾಗಿಲ್ಲ. ನೂರಾರು ಬಾರಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ತಮ್ಮ ಕೂಗು ಅಧಿಕಾರಿಗಳ ಕಿವಿಗೆ ಬೀಳುತ್ತಿಲ್ಲ ಎಂಬದು ಇಲ್ಲಿನ ನಿವಾಸಿಗಳ ಅಳಲು.
ಕಳೆದ ಬಾರಿಯ ಮಳೆಗಾಲದಲ್ಲಿ ಬಹಳ ಸಂಕಷ್ಟದಿಂದ ಜೀವನ ನಡೆಸಿದ ಇಲ್ಲಿನ ನಿವಾಸಿಗಳು ಸೋರುವ ಗುಡಿಸಲಿನಲ್ಲಿ ಬದುಕು ಕಂಡುಕೊಂಡಿದ್ದಾರೆ. ಈ ಬಾರಿಯ ಮಳೆಗಾಲದಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ. ಹೀಗಾಗಿ 116 ಕುಟುಂಬಗಳಲ್ಲಿ ಮಳೆಗಾಲದ ಭಯದ ವಾತಾವರಣವನ್ನು ನೆನೆದು ಸಮೀಪದ ಗ್ರಾಮಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಸ್ವಂತ ಮನೆ ಹೊಂದುವ ಕನಸಿಗೂ ವಿಘ್ನವಾಗಿದೆ. ಅಧಿಕಾರಿಗಳು ಹೆಚ್ಚು ಕಾಳಜಿವಹಿಸಿ ಈ ಬಗ್ಗೆ ಗಮನ ಹರಿಸಿದರೆ ಸ್ವಂತ ಮನೆ ಹೊಂದುವ ಕನಸು ನನಸಾಗಲಿದೆ. ಈಗಾಗಲೇ ಮನೆಗಳ ನಿರ್ಮಾಣಕ್ಕೆ ಸರ್ವೆ ಕಾರ್ಯ ನಡೆದಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಮನೆ ನಿರ್ಮಾಣದ ಕಾಮಗಾರಿ ಪ್ರಗತಿ ಹೊಂದಲು ಸಾಧ್ಯವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೇನು ಇಲ್ಲ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಪ್ರತಿಕ್ರಿಯಿಸಿದ್ದಾರೆ.
- ಎನ್.ಎನ್. ದಿನೇಶ್