ಸೋಮವಾರಪೇಟೆ, ಜು.6: ತಾಲೂಕಿನ ಚಿಕ್ಕತೋಳೂರು ಗ್ರಾಮದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಎರಡು ಸಾಕು ನಾಯಿಗಳ ಮೇಲೆ ಧಾಳಿ ನಡೆಸಿ ಗಾಯಗೊಳಿಸಿದೆ.
ಇಂದು ಬೆಳಗಿನ ಜಾವದಲ್ಲಿ ಗ್ರಾಮದ ಕಾಳಪ್ಪ ಎಂಬವರ ಮನೆಯ ಅಂಗಳಕ್ಕೆ ಬಂದ ಚಿರತೆ, ನಾಯಿಯ ಮೇಲೆ ಧಾಳಿ ನಡೆಸಿ ಹೊತ್ತೊಯ್ಯಲು ಪ್ರಯತ್ನಿಸಿದೆ. ಒಂದು ನಾಯಿಯ ಕುತ್ತಿಗೆ ಭಾಗಕ್ಕೆ ಕಚ್ಚಿ ತೀವ್ರ ಗಾಯಗೊಳಿಸಿದೆ. ಮತ್ತೊಂದು ನಾಯಿಯ ಬೆನ್ನಿನ ಭಾಗಕ್ಕೆ ಕಚ್ಚಿದೆ. ಕಾಳಪ್ಪ ಅವರು ಮನೆಯ ಒಳಗಿನಿಂದಲೇ ಬೊಬ್ಬೆ ಹೊಡೆದ ಸಂದರ್ಭ ಚಿರತೆ ತೋಟದೊಳಗೆ ಓಡಿದೆ. ಗಾಯಗೊಂಡ ನಾಯಿಗಳನ್ನು ಸೋಮವಾರಪೇಟೆ ಪಶು ಆಸ್ಪತ್ರೆಗೆ ಸಾಗಿಸಿದ್ದು, ಇಲಾಖೆಯ ಸಹಾಯಕ ನಿರ್ದೇಶಕ ಎಸ್.ವಿ.ಬದಾಮಿ ಅವರು ನಾಯಿಗಳಿಗೆ ಸೂಕ್ತ ಚಿಕಿತ್ಸೆ ನೀಡಿದ್ದಾರೆ.
ಗ್ರಾಮದ ಸುತ್ತಮುತ್ತಲ್ಲಲೇ ಬೀಡುಬಿಟ್ಟಿರುವ ಚಿರತೆಯನ್ನು ಕೂಡಲೆ ಸೆರೆಹಿಡಿದು ಸಾಗಿಸುವಂತೆ ಕಾಳಪ್ಪ ಅವರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು, ಚಿಕ್ಕತೋಳುರು ಗ್ರಾಮಕ್ಕೆ ತೆರಳಿ ಹೆಜ್ಜೆಯನ್ನು ಗಮನಿಸಿದ್ದು, ಚಿರತೆ ಧಾಳಿಯನ್ನು ಖಚಿತಪಡಿಸಿದ್ದಾರೆ. ಗ್ರಾಮದಲ್ಲಿ ಬೀಡುಬಿಟ್ಟಿರುವ ಚಿರತೆಯನ್ನು ಸೆರೆ ಹಿಡಿಯಲು ಬೋನು ಅಳವಡಿಸಲಾಗುವದು ಎಂದು ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ತಿಳಿಸಿದ್ದಾರೆ.