ಕುಶಾಲನಗರ, ಜು. 6: ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಅಲ್ಪಸಂಖ್ಯಾತರು ಮತ್ತು ದಲಿತ ಸಂಘಟನೆಗಳ ನೇತೃತ್ವದಲ್ಲಿ ಕುಶಾಲನಗರದಲ್ಲಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಷ ವ್ಯಕ್ತಪಡಿಸಿದರು.

ಎಸ್‍ಡಿಪಿಐ ಕುಶಾಲನಗರ ಘಟಕದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಾತನಾಡಿ, ಅಲ್ಪಸಂಖ್ಯಾತರು ಮತ್ತು ದಲಿತರು ನಿರಂತರವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಎಲ್ಲೆಡೆ ಕಾನೂನು ಬಾಹಿರ ಸಂವಿಧಾನ ವಿರೋಧಿ ಚಟುವಟಿಕೆ ನಡೆಸಲಾಗುತ್ತಿದೆ. ಈ ಸಂದರ್ಭ ಪೊಲೀಸರು ಸಂಪೂರ್ಣ ಮೌನವಹಿಸುತ್ತಿದ್ದಾರೆ. ಸರಕಾರ ಈ ಬಗ್ಗೆ ಯಾವದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಅಸಹನೆ ತೋಡಿಕೊಂಡರು.

ಈ ದೌರ್ಜನ್ಯ ನಿಲ್ಲಿಸಿದ್ದಲ್ಲಿ ಎಸ್‍ಡಿಪಿಐ ಉಗ್ರ ಹೋರಾಟ ನಡೆಸಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಲು ಮುಂದಾಗಲಿದೆ ಎಂದು ಎಚ್ಚರಿಸಿದ್ದಾರೆ. ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಸ್ಥಳೀಯ ಜಾಮಿಯಾ ಮಸೀದಿ ಅಧ್ಯಕ್ಷರಾದ ಅಲೀಂ, ಟಿಪ್ಪು ಸೇನೆಯ ರಾಜ್ಯಾಧ್ಯಕ್ಷ ಹಪೀಜ್ ಖಾನ್, ನಗರಸಭಾ ಸದಸ್ಯ ಅಮೀನ್ ಮೊಯ್ಸಿನ್, ಪೀಟರ್ ಮತ್ತಿತರರು ಇದ್ದರು.